

ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತಮ್ಮ ರಾಬರ್ಟ್ ಟ್ರಂಪ್ (71) ನಿನ್ನೆ ರಾತ್ರಿ ನಿಧನರಾಗಿದ್ದಾರೆ.
ಕೆಲ ಕಾಲಗಳಿಂದ ರಾಬರ್ಟ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಇವರು ಅಮೆರಿಕದ ಬಹುದೊಡ್ಡ ಉದ್ಯಮಿಯಾಗಿದ್ದರು.
ಇತ್ತೀಚೆಗೆ ರಾಬರ್ಟ್ ಅವರು ಭಾರಿ ಸುದ್ದಿಯಾಗಿದ್ದರು, ಇದಕ್ಕೆ ಕಾರಣ, ಇವರ ಸಹೋದರಿ ಮೇರಿ ಅವರು ಡೊನಾಲ್ಡ್ ಟ್ರಂಪ್ ಅವರ ಕುರಿತಾಗಿ ಬರೆದಿದ್ದ ಟೂ ಮಚ್ ಆ್ಯಂಡ್ ನೆವರ್ ಇನಫ್' ಕೃತಿ. ಈ ಕೃತಿಯಲ್ಲಿ ಡೊನಾಲ್ಡ್ ಟ್ರಂಪ್ ಬಗ್ಗೆ ವಿವಾದಾತ್ಮಕ ವಿಷಯಗಳನ್ನು ಉಲ್ಲೇಖಿಸಲಾಗಿದೆಯೆಂದು ಹೇಳಲಾಗುತ್ತಿದೆ.
ಆದ್ದರಿಂದ ರಾಬರ್ಟ್ ಅವರು, ಈ ಕೃತಿಯ ಬಿಡುಗಡೆಗೆ ತಡೆ ನೀಡುವಂತೆ ಕೋರ್ಟ್ ಮೊರೆ ಹೋಗಿದ್ದು, ಭಾರಿ ಸುದ್ದಿಯಾಗಿತ್ತು. ಡೊನಾಲ್ಡ್ ಟ್ರಂಪ್ ಹಾಗೂ ರಾಬರ್ಟ್ ಇಬ್ಬರೂ ಸಹೋದರರಾಗಿದ್ದು, ಇಬ್ಬರೂ ಉದ್ಯಮಿಗಳಾಗಿದ್ದರೂ, ಇಬ್ಬರದ್ದು ವಿಭಿನ್ನ ವ್ಯಕ್ತಿತ್ವವಾಗಿತ್ತು ಎಂದೇ ಹೇಳಲಾಗುತ್ತಿದೆ.
ಎರಡು ದಿನಗಳ ಹಿಂದೆ ಇವರ ಸ್ಥಿತಿ ಗಂಭೀರವಾಗಿದ್ದರಿಂದ ಡೊನಾಲ್ಡ್ ಟ್ರಂಪ್ ಅವರು ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು. ತಮ್ಮನ ಸಾವಿನ ಸುದ್ದಿ ತಿಳಿಯುತ್ತಲೇ ಡೊನಾಲ್ಡ್ ಟ್ರಂಪ್ ಭಾರಿ ಆಘಾತಕ್ಕೆ ಒಳಗಾಗಿದ್ದಾರೆ, ‘ಒಂದು ಅಮೂಲ್ಯ ರತ್ನವನ್ನು ನಾನು ಕಳೆದುಕೊಂಡಿದ್ದೇನೆ’ ಎಂದು ಅವರು ಹೇಳಿದ್ದಾರೆ.
ತುಂಬಾ ಮೃದು ಸ್ವಭಾವದ ನನ್ನ ತಮ್ಮ ತಮಗಿಂದ ತುಂಬಾ ವಿಭಿನ್ನ ಎಂದು ಈ ಹಿಂದೆಯೇ ಡೊನಾಲ್ಡ್ ಟ್ರಂಪ್ ವಿವರಿಸಿದ್ದರು.