ಹಿಂದು ದೇವರ ಬಗ್ಗೆ ಕೆಟ್ಟ ಪೋಸ್ಟ್ ಹಾಕಿದ್ರು, ಅವರಿಗೆ ತಿರುಗೇಟು ನೀಡುವಂತೆ ಕಮೆಂಟ್ ಮಾಡಿದ್ದಕ್ಕೆ ಈ ರಾದ್ಧಾಂತ ಎಂದ ನವೀನ್

naveen
Published on

ಬೆಂಗಳೂರು: ಗಲಭೆಯ ಮಾಸ್ಟರ್ ಮೈಂಡ್ ಫೈರೋಜ್ ಖಾನ್ ಹಿಂದೂ ದೇವತೆಯ ಬಗ್ಗೆ ಅತ್ಯಂತ ಕೆಟ್ಟದಾಗಿ ಒಂದು ಪೋಸ್ಟ್‌ ಹಾಕಿದ್ದ. ಅದನ್ನು ನೋಡಿ ಬೇಸರವಾಗಿ ಅದಕ್ಕೆ ನಾನೊಂದು ಕಮೆಂಟ್‌ ಹಾಕಿದ್ದೆ. ಆದರೆ ಒರಿಜನಲ್‌ ಪೋಸ್ಟ್‌ ಬಿಟ್ಟು ನಾನು ಹಾಕಿದ ಕಮೆಂಟ್‌ ಹಿಡಿದುಕೊಂಡು ಗಲಭೆ ಸೃಷ್ಟಿಸಿದ್ದಾರೆ ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅಳಿಯ ನವೀನ್ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾನೆ.

ನವೀನ್ ಹಾಕಿರುವ ಫೇಸ್‌ಬುಕ್‌ ಕಮೆಂಟ್‌ನಿಂದ ರಣಾಂಗಣವೇ ಸೃಷ್ಟಿಯಾಗಿರುವ ಬಗ್ಗೆ ಸುದ್ದಿಯಾಗಿರುವ ನಡುವೆಯೇ, ನವೀನ್‌ ಇದು ಸತ್ಯದ ಘಟನೆ ಎಂದು ಪೊಲೀಸರಿಗೆ ಹೇಳಿದ್ದಾನೆ.

ಮೂಲ ಪೋಸ್ಟ್‌ಗಳ ಸ್ಕ್ರೀನ್‌ಷಾಟ್‌ಗಳ ಕುರಿತಾಗಿ ಇದಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಸುದ್ದಿಗಳು ಹರಿದಾಡುತ್ತಿರುವ ನಡುವೆ ನವೀನ‌ ನೀಡಿರುವ ಈ ಹೇಳಿಕೆ ಪ್ರಕರಣಕ್ಕೆ ಇನ್ನಷ್ಟು ತಿರುವು ಕೊಡುವ ನಿರೀಕ್ಷೆ ಇದೆ.

ಅಷ್ಟಕ್ಕೂ ತಾನು ಹಾಕಿರುವ ಕಮೆಂಟ್‌ ತನ್ನ ಸೃಷ್ಟಿಯಲ್ಲ, ಬದಲಿಗೆ ಕಮೆಂಟ್ ಮಾಡೋ ಸಲುವಾಗಿ ಗೂಗಲ್‌ನಲ್ಲಿ ಇಮೇಜ್ ಹುಡುಕಿದ್ದೆ. ಹಿಂದೂ ದೇವರಿಗೆ ಅವಹೇಳನ ಮಾಡುವವರಿಗೆ ಯಾವ ರೀತಿಯ ಕಮೆಂಟ್‌ ಮಾಡಬಹುದು ಎಂದು ತಿಳಿಸುವ ಒಂದು ಇಮೇಜ್ ನನಗೆ ಸಿಕ್ಕಿತು. ಅದನ್ನು ತೆಗೆದು ಕಮೆಂಟ್‌ ಮಾಡಿದ್ದೇನೆ ಅಷ್ಟೇ ಎಂದು ನವೀನ್ ತಿಳಿಸಿದ್ದಾನೆ.

ಪೋಸ್ಟ್ ಮಾಡಿದ ಬಳಿಕ ಅಖಂಡ ಶ್ರೀನಿವಾಸ್ ಡಿಲೀಟ್ ಮಾಡುವಂತೆ ತಿಳಿಸಿದರು. ಬಳಿಕ ನಾನು ಹಾಕಿದ್ದ ಪೋಸ್ಟ್ ಡಿಲೀಟ್ ಮಾಡಿದ್ದೇನೆ ಎಂದಿದ್ದಾನೆ.

ಪಾದರಾಯನಪುರ ಪುಂಡರ ಗಲಭೆ, ಸಿಎಎ ಮತ್ತು ಎನ್‍ಆರ್‌ಸಿ ಪ್ರತಿಭಟನೆಯ ವೇಳೆಯೂ ನಾನು ಕಮೆಂಟ್ ಮಾಡಿದ್ದೇನೆ. ಈ ಸಮಯದಲ್ಲಿ ಕೂಡ ಬೇರೆಯವರು ಹಾಕಿರುವ ಪೋಸ್ಟ್‌ಗಳಿಗೆ ನಾನು ಕಮೆಂಟ್ ಮಾಡಿದ್ದೇನೆ. ಯಾರ ಮನಸ್ಸಿಗೆ ನೋವಾಗುವಂಥ, ಯಾವುದೇ ಧರ್ಮಕ್ಕೆ ಹಾನಿಯಾಗುವಂಥ ಪೋಸ್ಟ್‌ಗಳನ್ನು ಖುದ್ದಾಗಿ ನಾನು ಮಾಡಿಲ್ಲ. ಆದರೆ ಬೇರೆಯವರಿಗೆ ನೋವಾಗುವಂಥ ಪೋಸ್ಟ್‌ ಮಾಡಿದಾಗ, ಅದಕ್ಕೆ ಉತ್ತರವಾಗಿ ಕಮೆಂಟ್‌ ಮಾಡಿದ್ದೇನೆ ಎಂಬ ಹೇಳಿಕೆಯನ್ನು ನವೀನ್‌ ನೀಡಿದ್ದಾನೆ.

ರಾಮ ಜನ್ಮಭೂಮಿ ಶಿಲಾನ್ಯಾಸದ ವೇಳೆ ಏರಿಯಾದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿಕೆ ಮಾಡಿದ್ದೆ. ಈ ವೇಳೆ ಅಪರಿಚಿತ ನಂಬರ್‌ಗಳಿಂದ ನನಗೆ ಬೆದರಿಕೆ ಕರೆಗಳು ಬಂದಿದ್ದವು. ದುಷ್ಕರ್ಮಿಗಳು ಫೋನ್ ಮಾಡಿ ಬೆದರಿಕೆ ಹಾಕಿದ್ದರು ಎಂದೂ ಈತ ಹೇಳಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net