

ಚಿಕ್ಕಮಗಳೂರು: ಗೋಕಳ್ಳತನ ಅವ್ಯಾಹತವಾಗಿ ಹಲವು ಕಡೆಗಳಲ್ಲಿ ನಡೆಯುತ್ತಿದೆ. ರಸ್ತೆ ಮೇಲೆ ಹೋಗುತ್ತಿರುವ ಹಸುಗಳನ್ನು ಮಾತ್ರವಲ್ಲದೇ ಮನೆ ಪಕ್ಕದಲ್ಲಿ ಕಟ್ಟಿಹಾಕಿದ ಹಸು, ಕರುವಿನ ಮೇಲೆ ಕಟುಕರ ಕಣ್ಣು ಬೀಳುತ್ತಿರುವ ಆತಂಕಕಾರಿ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಲೇ ಇವೆ.
ಇವುಗಳ ನಡುವೆಯೇ ಚಿಕ್ಕಮಗಳೂರಿನಲ್ಲಿಯೂ ಹಸುವಿನ ಕಳ್ಳತನ ಜೋರಾಗಿ ನಡೆದಿದೆ.
ಚಿಕ್ಕಮಗಳೂರು ನಗರದ ಹೊರವಲಯದ ತೇಗೂರಿನಲ್ಲಿ ನಡೆದಿರುವ ಘಟನೆಯೊಂದು ಇದೀಗ ಸಿಸಿಟಿಯಲ್ಲಿ ದಾಖಲಾಗಿದೆ. ಹಸುಗಳನ್ನು ಸ್ಕಾರ್ಪಿಯೋದಲ್ಲಿ ತುಂಬಿಕೊಂಡು ಹೋಗಿರುವ ದುಷ್ಕರ್ಮಿಗಳ ವಿಡಿಯೋ ಸೆರೆಯಾಗಿದೆ.
ಹಸುವನ್ನು ಕದ್ದು ಸ್ಕಾರ್ಪಿಯೋ ವಾಹನದಲ್ಲಿ ಸಾಗಿಸಲಾಗಿದ್ದು, ಅಮ್ಮನ ಕೂಗು ಕೇಳಿದ ಕರು ವಾಹನದ ಹಿಂದೆಯೇ ಸ್ವಲ್ಪ ದೂರ ಓಡಿ ಹೋದದ್ದು ಸಿಸಿಟಿಯಲ್ಲಿ ಸೆರೆಯಾಗಿದೆ. ಆದರೆ ವಾಹನ ಅತಿ ವೇಗದಲ್ಲಿ ಹೋದ ಹಿನ್ನೆಲೆಯಲ್ಲಿ, ಕರುವಿಗೆ ಅದನ್ನು ಹಿಂಬಾಲಿಸಲು ಆಗದೆ ಅತ್ತಿತ್ತ ನೋಡುತ್ತಿದ್ದ ನೋವಿನ ಘಟನೆಗೆ ಸಿಸಿಟಿವಿ ಸಾಕ್ಷಿಯಾಗಿದೆ.
ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ಜಾಲ ಬೀಸಲಾಗಿದೆ.