ರೈತರ ಪ್ರತಿಭಟನೆಗೆ ಹಿಂಸಾಚಾರದ ರೂಪ ಕೊಟ್ಟವರು ಇವರೇ ನೋಡಿ... ಬಿಡುಗಡೆಯಾಯ್ತು ಚಿತ್ರ

protest
Published on

ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ತಪ್ಪು ದಾರಿಗೆ ಎಳೆದು ದೆಹಲಿಯಲ್ಲಿ ಗಣರಾಜ್ಯೋತ್ಸವದ ದಿನ ಹಿಂಸಾಚಾರ ನಡೆಸಿರುವ ಕೆಲವು ದಂಗೆಕೋರರ ಚಿತ್ರಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಟ್ರ್ಯಾಕ್ಟರ್​ ರ‍್ಯಾಲಿಯ ಹೆಸರಿನಲ್ಲಿ ನಡೆಸಿದ ಹಿಂಸಾಚಾರ, ಕೆಂಪು ಕೋಟೆ ಮೇಲೆ ಸಿಖ್​ ಧ್ವಜ ಹಾರಿಸಿರುವುದೂ ಸೇರಿದಂತೆ ವಿವಿಧ ಕಡೆಗಳಲ್ಲಿ ವಿಧ್ವಂಸಕ ಕೃತ್ಯದಲ್ಲಿ ತೊಡಗಿಸಿಕೊಂಡಿರುವವರ ಚಿತ್ರಗಳು ಇದಾಗಿವೆ.

ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಹಾಗೂ ವಾಟ್ಸ್​ಆ್ಯಪ್​ ವಿಡಿಯೋಗಳನ್ನು ಆಧರಿಸಿ ಈ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ.

ಸದ್ಯ 42 ಜನರನ್ನು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್(ಸಿಐಎಸ್‍ಎಫ್) ಶಂಕಿತರ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಇನ್ನು 20 ಜನರನ್ನು ವಾಟ್ಸ್​ಆ್ಯಪ್​ ವಿಡಿಯೋಗಳ ಮೂಲಕ ಪತ್ತೆ ಹಚ್ಚಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತ ಇಬ್ಬರ ಪೈಕಿ ಒಬ್ಬನನ್ನು ಧರ್ಮೇಂದ್ರ ಸಿಂಗ್ ಹರ್ಮಾನ್ ಎಂದು ಗುರುತಿಸಲಾಗಿದೆ. ಹಿಂಸಾಚಾರದ ವಿಡಿಯೋ ಆಧರಿಸಿ ಈ ಇಬ್ಬರನ್ನು ಬಂಧಿಸಲಾಗಿದೆ. ಅಲ್ಲದೆ ಕೆಂಪು ಕೋಟೆ ಮೇಲೆ ಸಿಖ್ ಧ್ವಜ ಹಾರಿಸಿದ್ದರಲ್ಲಿ ಧರ್ಮೇಂದ್ರ ಸಿಂಗ್ ಹರ್ಮಾನ್ ಪಾತ್ರ ಸಹ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಂಕಿತರ ಪತ್ತೆಗೆ ಈಗಾಗಲೇ ತಂಡ ರಚಿಸಿದ್ದು, ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಕೆಲ ಶಂಕಿತರು ದೆಹಲಿ ಬಿಟ್ಟು ಪರಾರಿಯಾಗಿದ್ದು, ಇನ್ನೂ ಹಲವರು ತಲೆ ಮರೆಸಿಕೊಂಡಿದ್ದಾರೆ. ಅವರಿಗಾಗಿ ಜಾಲ ಬೀಸಲಾಗಿದೆ.

ಪೊಲೀಸರು ಈ ವರೆಗೆ 124 ಜನರನ್ನು ಬಂಧಿಸಿದ್ದು, 44 ಎಫ್‍ಐಆರ್​ ದಾಖಲಿಸಿದ್ದಾರೆ. ಅಲ್ಲದೆ ವಿವಿಧ ಸಾಮಾಜಿಕ ಜಾಲತಾಣಗಳ ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net