ಮದುವೆಯಾಗುವೆ ಎಂದು ಹಲವು ಬಾರಿ ರೇಪ್​​ ಮಾಡಿದ ಎಂದ ಯುವತಿ: ಶಾಸಕನ ವಿರುದ್ಧ ಎಫ್​ಐಆರ್​

MLA
Published on

ಉದಯಪುರ (ರಾಜಸ್ಥಾನ): ಮದುವೆಯಾಗುತ್ತಾನೆ ಎಂದು ನಂಬಿಸಿದ, ಅವನನ್ನು ನಾನು ನಂಬಿಬಿಟ್ಟೆ ಎಂದಿರುವ ಯುವತಿಯೊಬ್ಬರು ಬಿಜೆಪಿ ಶಾಸಕನ ವಿರುದ್ಧ ದೂರು ದಾಖಲು ಮಾಡಿದ್ದಾರೆ.

ರಾಜಸ್ಥಾನದ ಗೋಗುಂಡ ಕ್ಷೇತ್ರದ ಬಿಜೆಪಿ ಶಾಸಕ ಪ್ರತಾಪ್‌ ಲಾಲ್‌ ಭೀಲ್ ವಿರುದ್ಧ ಈ ದೂರು ದಾಖಲಾಗಿದೆ. ಸುಖರ್​ ಪೊಲೀಸ್​ ಠಾಣೆಯಲ್ಲಿ 35 ವರ್ಷದ ಯುವತಿ ದಾಖಲು ಮಾಡಿರುವ ದೂರಿನ ಅನ್ವಯ ಶಾಸಕನ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ.

ಮಧ್ಯಪ್ರದೇಶದ ಯುವತಿಯಾಗಿರುವ ಸಂತ್ರಸ್ತೆ 'ಶಾಸಕ ಭೀಲ್​ ನನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಅದನ್ನು ನಾನು ನಂಬಿದೆ. ಹೀಗೆ ಹೇಳಿ ಹಲವು ಬಾರಿ ಅತ್ಯಾಚಾರ ಮಾಡಿದ್ದಾರೆ' ಎಂದು ದೂರು ನೀಡಿದ್ದಾರೆ.

'ಈ ಹಿನ್ನೆಲೆಯಲ್ಲಿ ಗುರುವಾರ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಿ, ಅವರಿಂದ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ' ಎಂದು ಉದಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಪಚಾರ್ ಹೇಳಿದ್ದಾರೆ.

'ದೂರು ನೀಡಿರುವ ಸಂತ್ರಸ್ತೆ ಹಾಗೂ ಶಾಸಕರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, ಕೆಲವು ವರ್ಷಗಳಿಂದ ಇವರಿಬ್ಬರೂ ಸಂಪರ್ಕದಲ್ಲಿದ್ದಾರೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದ್ದರಿಂದ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net