ಅಂತ್ಯಕ್ರಿಯೆ ವೇಳೆ ಪೆಟ್ಟಿಗೆಯಲ್ಲಿದ್ದ ಯುವತಿಯ ‘ಶವ’ ಅಲುಗಾಡಿ ಮೇಲೆದ್ದು ಬಂತು!

coffin
Published on

ಕ್ಯಾಲಿಫೋರ್ನಿಯಾ: ಜೀವನದಲ್ಲಿ ಕೆಲವೊಮ್ಮೆ ಏನೇನೋ ವಿಚಿತ್ರ ಘಟನೆಗಳು ನಡೆದುಹೋಗುತ್ತವೆ. ಅಸಾಧ್ಯವೆಂದದ್ದೇ ನಡೆದುಹೋಗುತ್ತವೆ.
|
ಅಂಥದ್ದೇ ಒಂದು ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಇನ್ನೇನು ಅಂತ್ಯಕ್ರಿಯೆ ನಡೆಸಬೇಕು ಎನ್ನುವಷ್ಟರಲ್ಲಿ ಶವವೆಂದುಕೊಂಡ ವ್ಯಕ್ತಿ ಎದ್ದು ಬಂದರೆ ಹೇಗಾಗಬೇಡ? ಅಬ್ಬಾ ನೆನೆಸಿಕೊಂಡರೆ ಭಯವಾಗುತ್ತದೆಯಲ್ಲವೆ? ಆದರೆ ಇಂಥ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಿಜಕ್ಕೂ ಸಂಭವಿಸಿದೆ.

ತಿಮೆಶ್ಯಾ ಬ್ಯೂಚಂಪ್ ಎಂಬ 20 ವರ್ಷದ ಯುವತಿಗಾಗಿರುವ ಘಟನೆ ಇದು. ಅಮೆರಿಕದ ಮಿಶಿಗನ್ ನಗರದ ಡೆಟ್ರಾಯ್ ಪಟ್ಟಣದ ಈಕೆ ಸೆರೆಬ್ರಲ್ ಪಾಲ್ಸಿ ಅನ್ನುವ ಕಾಯಿಲೆಯಿಂದ ಬಳಲುತ್ತಿದ್ದಳು. ಅಂಗವಿಕಲೆಯಾಗಿದ್ದ ಈ ಯುವತಿ ರಕ್ತ ಸಂಬಂಧಿ ಕಾಯಿಲೆಯಿಂದಲೂ ಬಳಲುತ್ತಿದ್ದಳು.

ಈಕೆಯ ತಂದೆ ತಾಯಿ ಮಗಳನ್ನು ಗುಣಪಡಿಸಲು ತೋರಿಸದ ಆಸ್ಪತ್ರೆಗಳಿಲ್ಲ. ಆದರೆ ಕಾಯಿಲೆಯನ್ನು ಗುಣ ಪಡಿಸೋಕೆ ಸಾಧ್ಯ ಆಗುವುದಿಲ್ಲ ಎಂದರು ವೈದ್ಯರು. ಓಕ್‌ಲ್ಯಾಂಡ್‌ ನಗರದಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡುತ್ತಿದ್ದರು. ಕೆಲ ದಿನಗಳ ಹಿಂದೆ ದಿಢೀರನೇ ಪ್ರಜ್ಞಾಹೀನ ಸ್ಥಿತಿ ತಲುಪಿ ಮನೆಯಲ್ಲಿ ಬಿದ್ದಿದ್ದಳು ಯುವತಿ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ ಹೆತ್ತವರು ಚಿಕಿತ್ಸೆ ನೀಡಲು ಸೂಚಿಸಿದ್ದಾರೆ. ಆದರೆ ವೈದ್ಯರು ಪರೀಕ್ಷಿಸಿದ ನಂತರ ಯುವತಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಡಿಸಲಾಗದ ಕಿಮ್‌ ರಹಸ್ಯ: ಸತ್ತೇ ಹೋದ ಎಂದ ಸರ್ವಾಧಿಕಾರಿ ಮತ್ತೊಮ್ಮೆ ಪ್ರತ್ಯಕ್ಷ!

ಮರಣೋತ್ತರ ಪರೀಕ್ಷೆ ಮಾಡದೆ ಶವವನ್ನು ಪೋಷಕರಿಗೆ ಹಸ್ತಾಂತರಿಸಿದರು ವೈದ್ಯರು. ತಮ್ಮ ಮಗಳ ಸಾವಿನ ದುಃಖದಲ್ಲಿಯೇ ಮಗಳ ಅಂತ್ಯಕ್ರಿಯೆ ಮಾಡಲು ಪಾಲಕರು ಮುಂದಾದರು. ಎಲ್ಲ ವಿಧಿವಿಧಾನಗಳ ನಂತರ ಮಗಳ ‘ಶವ’ವನ್ನು ಶವಪೆಟ್ಟಿಗೆಯಲ್ಲಿ ಹಾಕಿ ಜೇಮ್ಸ್ ಹೆಚ್ ಕೋಲ್ ಸ್ಮಶಾನಕ್ಕೆ ತಂದಿದ್ದಾರೆ. ಇನ್ನೇನು ಕೆಲವೇ ಕ್ಷಣದಲ್ಲಿ ಅಂತ್ಯಕ್ರಿಯೆ ನಡೆಸಬೇಕು ಎಂದಿದ್ದಾಗ ಅಲ್ಲಿದ್ದವರಿಗೆ ಅಚ್ಚರಿ ಕಾದಿತ್ತು.

ಇದಕ್ಕಿದ್ದ ಹಾಗೆ ಶವ ಇಟ್ಟ ಪೆಟ್ಟಿಗೆ ಅಲುಗಾಡಲು ಆರಂಭಿಸಿದೆ. ಅಲ್ಲಿದ್ದವರು ಒಂದು ಕ್ಷಣ ಭೀತಿಗೊಂಡರೂ ಕೂಡ ಯಾರೋ ಒಬ್ಬರು ಧೈರ್ಯ ಮಾಡಿ ಶವಪೆಟ್ಟಿಗೆಯ ಬಾಗಿಲು ತೆರೆದಿದ್ದಾರೆ. ಈ ವೇಳೆ ಯುವತಿ ಕಣ್ಣು ಬಿಡೋದನ್ನು ನೋಡಿದ್ದಾರೆ. ಆಕೆ ಉಸಿರಾಡುತ್ತಿರೋದನ್ನು ಕೂಡ ಖಚಿತಪಡಿಸಿಕೊಂಡಿದ್ದಾರೆ. ಆಕೆ ಪೆಟ್ಟಿಗೆ ತೆರೆಯುತ್ತಲೇ ಕಷ್ಟಪಟ್ಟು ಎದ್ದುನಿಂತಿದ್ದಾಳೆ. ನಂತರ ತಕ್ಷಣ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net