

ಬೀಜಿಂಗ್: ಭಾರತ ಸೇರಿದಂತೆ ಕೆಲವಾರು ದೇಶಗಳ ಜತೆಗೆ ವಿರೋಧ ಕಟ್ಟಿಕೊಂಡು ಲಕ್ಷಾಂತರ ಕೋಟಿ ರೂಪಾಯಿಗಳ ನಷ್ಟ ಅನುಭವಿಸುತ್ತಿರುವ ಚೀನಾ ಇದೀಗ ತಲೆತಲೆ ಚಚ್ಚಿಕೊಳ್ಳುವಂತಾಗಿದೆ.
ಇದೀಗ ಅಲ್ಲಿ ಆಹಾರ ಸಮಸ್ಯೆಯೂ ಎದುರಾಗಿದ್ದು, ಭವಿಷ್ಯದ ಸಮಸ್ಯೆಯ ತಲೆಬಿಸಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಆರಂಭವಾಗಿದೆ.
ಇದೇ ಹಿನ್ನೆಲೆಯಲ್ಲಿ ಇದೀಗ ಆಪರೇಷನ್ ಎಮ್ಟಿ ಪ್ಲೇಟ್ (ಪ್ಲೇಟ್ ಖಾಲಿ ಮಾಡುವ ಅಭಿಯಾನ) ಶುರು ಮಾಡಿದ್ದಾರೆ ಕ್ಸಿ.
ಚೀನಾದ ಜನರಿಗೆ ಹೊಟ್ಟೆ ಬಿರುಯುವಂತೆ ತಿನ್ನಬೇಡಿ. ಹೋಟೆಲ್‌ಗಳಲ್ಲಿ ಆಹಾರಕ್ಕೆ ಆದೇಶಿಸಿದಾಗ ಕಡಿಮೆ ಆಹಾರಕ್ಕೆ ಆದೇಶಿಸಿ. ಯಾವುದೇ ಕಾರಣಕ್ಕೂ ಆಹಾರವನ್ನು ಚೆಲ್ಲಬಾರದು ಎಂದು ಅಧ್ಯಕ್ಷ ಕ್ಸಿ ಕಟ್ಟುನಿಟ್ಟಿನ ನಿಯಮ ಅಳವಡಿಸಿದ್ದಾರೆ.
ಆಹಾರ ವ್ಯರ್ಥ ಮಾಡದೇ ಇರುವುದು ಒಳ್ಳೆಯ ಉಪಾಯವೇ. ಆದರೆ ಕ್ಸಿಪಿಂಗ್ ಅವರು, ಕೆಲವೊಂದು ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದ್ದಾರೆ. ಅದೇನೆಂದರೆ ಸ್ನೇಹಿತರು ಒಟ್ಟಾಗಿ ಸೇರಿದರೆ ಮಾತುಕತೆ ನಡೆಸುವ ಮೂಲಕ ಹೆಚ್ಚೆಚ್ಚು ಆಹಾರಗಳನ್ನು ತಿನ್ನುವುದು ಸಾಮಾನ್ಯ. ಆದ್ದರಿಂದ ಗುಂಪುಗಳಲ್ಲಿ ತಿನ್ನುವುದನ್ನು ನಿಷೇಧಿಸಬೇಕು ಎಂದು ಆದೇಶದಲ್ಲಿ ಉಲ್ಲೇಖವಾಗಿದೆ.
ಹೋಟೆಲ್‌ಗಳಿಗೆ ಹೋದಾಗ ಗುಂಪಿನಲ್ಲಿದ್ದರೆ ಎಷ್ಟು ಆಹಾರ ತಿನ್ನಬೇಕು ಎನಿಸುತ್ತದೆಯೋ ಅದಕ್ಕಿಂತ ಕಡಿಮೆ ಆರ್ಡರ್ ಮಾಡಿ ಅಷ್ಟನ್ನೇ ತಿನ್ನಬೇಕು. ಹೋಟೆಲ್‌ನಲ್ಲಿ ಒಂಟಿಯಾಗಿ ಹೋಗಿದ್ದರೆ ಅರ್ಧ ಪ್ಲೇಟ್ ಮಾತ್ರ ಆರ್ಡರ್ ಮಾಡಬೇಕು. ಗ್ರಾಹಕರು ಫುಲ್ ಪ್ಲೇಟ್‌ಗೆ ಬೇಡಿಕೆ ಇಟ್ಟರೂ ಹೋಟೆಲ್‌ನಲ್ಲಿ ಅರ್ಧ ಪ್ಲೇಟ್ ನೀಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಚೀನೀ ಅಕಾಡೆಮಿ ಆಫ್ ಸೈನ್ಸಸ್‌ನ 2018 ರ ವರದಿಯು ಪ್ರತಿ ರೆಸ್ಟೋರೆಂಟ್ ಭೋಜನಕೂಟದಲ್ಲಿ ಪ್ರತಿ ಭಕ್ಷ್ಯದ ಸರಾಸರಿ 93 ಗ್ರಾಂ (3 ಔನ್ಸ್) ವ್ಯರ್ಥವಾಗುತ್ತಿದೆ, ಹೀಗಾಗಿ ಪ್ರಮುಖ ನಗರಗಳಲ್ಲಿ ಪ್ರತಿವರ್ಷ 18 ದಶಲಕ್ಷ ಟನ್ ಆಹಾರವನ್ನು ಎಸೆಯಲಾಗುತ್ತದೆ ಎಂಬ ಅಂಶವನ್ನು ಉಲ್ಲೇಖಿಸಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಈ ಅಭಿಯಾನ ಶುರು ಮಾಡಲಾಗಿದೆ.
ಇನ್ನು ಕೆಲವು ಆಹಾರ ತಿನ್ನುವ ಸ್ಪರ್ಧೆ ನಡೆಯುತ್ತದೆ. ಅದಕ್ಕೂ ಸರ್ಕಾರ ಕಡಿವಾಣ ಹಾಕಿದೆ.