

ನವದೆಹಲಿ: ಎಸ್.ಎಸ್. ರಾಜಮೌಳಿ ನಿರ್ದೇಶನದ, ಜೂ. ಎನ್ಟಿಆರ್-ರಾಮ್ಚರಣ್ ಅಭಿನಯದ ಆಸ್ಕರ್ ವಿಜೇತ "ಆರ್ಆರ್ಆರ್" ಸಿನಿಮಾದಲ್ಲಿ ಖಳನಾಯಕ ಪಾತ್ರದಲ್ಲಿ ಮಿಂಚಿದ್ದ ಜಾರ್ಜ್ ರೇಮಂಡ್ ಸ್ಟೀವನ್ಸನ್ ಅವರು ಕೊನೆಯುಸಿರೆಳೆದಿದ್ದಾರೆ.
ರೇಮಂಡ್ ಸ್ಟೀವನ್ಸನ್ ಉತ್ತರ ಐರಿಶ್ ಮೂಲದ ನಟ. 1964ರ ಮೇ 25ರಂದು ಲಿಸ್ಬರ್ನ್ ನಗರದಲ್ಲಿ ಜನಿಸಿದರು. ಅವರಿಗೆ 58 ವರ್ಷ ವಯಸ್ಸಾಗಿತ್ತು. ಇನ್ನು 3 ದಿನಗಳಲ್ಲಿ 59ನೇ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿತ್ತು. ಅಷ್ಟರಲ್ಲಿ ವಿಧಿಯ ಕರೆಗೆ ಓಗೊಟ್ಟಿದ್ದಾರೆ.
ಸ್ಟೀವನ್ಸನ್ ಅವರು ನಿನ್ನೆ (ಮೇ 22) ಇಟಲಿಯಲ್ಲಿ ವಿಧಿವಶರಾಗಿದ್ದಾರೆ. ಅವರ ಸಾವಿಗೆ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದ್ದು, ಕಾರಣ ತಿಳಿದುಬರಬೇಕಿದೆ. ಸ್ಟೀವನ್ಸನ್ ಮೂರು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.
ರೇಮಂಡ್ ಸ್ಟೀವನ್ಸನ್ ತಮ್ಮ ಸಿನಿಮಾ ವೃತ್ತಿಜೀವನವನ್ನು 1998ರಲ್ಲಿ ದಿ ಥಿಯರಿ ಆಫ್ ಫ್ಲೈಟ್ ಸಿನಿಮಾದೊಂದಿಗೆ ಪ್ರಾರಂಭಿಸಿದರು. 2008 ರಲ್ಲಿ ಬಿಡುಗೊಡೆಗೊಂಡ ಔಟ್ಪೋಸ್ಟ್ ಚಲನಚಿತ್ರದಲ್ಲಿ ಮೊದಲ ಬಾರಿಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆರ್ಆರ್ಆರ್ ಸಿನಿಮಾದಲ್ಲಿ ಬ್ರಿಟಿಷ್ ಗವರ್ನರ್ ಸ್ಕಾಟ್ ಪಾತ್ರದಲ್ಲಿ ಅದ್ಭುತ ನಟನೆಯ ಮೂಲಕ ಭಾರತೀಯರಿಗೂ ಪರಿಚಿತರಾದರು.
ಅಂದಹಾಗೆ ಸ್ಟೀವನ್ಸನ್ ಅವರು ಥಾರ್ ಸಿನಿಮಾ ಸೇರಿದಂತೆ ಅನೇಕ ಜನಪ್ರಿಯ ಚಲನಚಿತ್ರಗಳು ಮತ್ತು ಟಿವಿ ಸರಣಿಗಳಲ್ಲಿ ನಟಿಸಿದ್ದಾರೆ. ಪ್ರತಿಭಾವಂತ ನಟನಾಗಿದ್ದ ಸ್ವೀವನ್ಸನ್ ಅವರ ಅಕಾಲಿಕ ಮರಣ ಭಾರತೀಯ ಅಭಿಮಾನಿಗಳು ಸೇರಿದಂತೆ ಜಗತ್ತಿನಾದ್ಯಂತ ಇರುವ ಅವರ ಅಭಿಮಾನಿಗಳಿಗೆ ಆಘಾತವಾಗಿದ್ದು, ನೆಚ್ಚಿನ ನಟ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ.
ಆರ್ಆರ್ಆರ್ ಸಿನಿಮಾ ತಂಡವು ಕೂಡ ಸ್ಟೀವನ್ಸನ್ ಸಾವಿಗೆ ಸಂತಾಪ ಸೂಚಿಸಿದೆ. ನಮ್ಮ ತಂಡಕ್ಕೆ ನಿಜಕ್ಕೂ ಆಘಾತಕಾರಿ ಸುದ್ದಿ. ರೇಮಂಡ್ ಸ್ಟೀವನ್ಸನ್ ಆತ್ಮಕ್ಕೆ ಶಾಂತಿ ದೊರಕಲಿ. ನೀವು ನಮ್ಮ ಹೃದಯದಲ್ಲಿ ಸದಾ ಇರುತ್ತೀರಿ ಸ್ಕಾಟ್ ಸರ್ ಎಂದು ಟ್ವೀಟ್ ಮೂಲಕ ಆರ್ಆರ್ಆರ್ ತಂಡ ಕಂಬನಿ ಮಿಡಿದಿದೆ. (ಏಜೆನ್ಸೀಸ್)