More

    ನೋಟು ಬದಲಾವಣೆ ಚಿಂತೆ ಬೇಡ; ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಭಯ | ಇಂದಿನಿಂದ ವಿನಿಮಯ

    ನವದೆಹಲಿ: ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳುವ ವಿಷಯದಲ್ಲಿ ಜನರು ಗಾಬರಿಯಾಗುವ ಅಗತ್ಯವಿಲ್ಲ ಅಥವಾ ತರಾತುರಿ ಕೂಡ ಬೇಡ. ಸೆಪ್ಟೆಂಬರ್ 30ರವರೆಗೂ ನೋಟು ವಿನಿಮಯಕ್ಕೆ ಅವಕಾಶ ಇದೆ. ಜತೆಗೆ ಗಡುವಿನವರೆಗೂ ಈ ನೋಟಿಗೆ ಕಾನೂನಾತ್ಮಕ ಮಾನ್ಯತೆ ಇರುವುದರಿಂದ ಯಾವುದೇ ವ್ಯಾಪಾರಸ್ಥರು ನೋಟನ್ನು ನಿರಾಕರಿಸುವಂತಿಲ್ಲ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದರು. 2016ರ ನೆವಂಬರ್ 8ರಂದು ಅಧಿಕ ಮುಖಬೆಲೆ ನೋಟುಗಳನ್ನು ಚಲಾವಣೆಯಿಂದ ಹಿಂದೆ ಪಡೆದಾಗ ಆದ ಗಡಿಬಿಡಿಯಂತೆ ಈಗ ಆಗಬಾರದು ಎಂದು ನಾಲ್ಕು ತಿಂಗಳು ಅವಕಾಶ ನೀಡಲಾಗಿದೆ. ಜನರಿಗೆ ಯಾವುದೇ ತೊಡಕಾಗಬಾರದು ಎಂದು ಮುಂಜಾಗ್ರತೆ ವಹಿಸಲಾಗಿದೆ ಎಂದು ನೋಟು ಬದಲಾವಣೆ ಪ್ರಕ್ರಿಯೆ (ಮೇ 23) ಆರಂಭ ವಾಗುವುದಕ್ಕೂ ಮುನ್ನಾದಿನ ಅವರು ತಿಳಿಸಿದರು.

    ಇದನ್ನೂ ಓದಿ: ಕಬ್ಬನ್ ಪಾರ್ಕ್​ಗೆ ಹೋಗುವವರೇ ಹುಷಾರ್! ಇಲ್ಲಿದೆ ಕಾರಣ…

    ಮಂಗಳವಾರದಿಂದ ಎರಡು ಸಾವಿರ ರೂ. ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಬ್ಯಾಂಕ್​ಗಳಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.ಈ ಮುಖಬೆಲೆ ನೋಟುಗಳನ್ನು ಹೆಚ್ಚಿನ ಮಟ್ಟದಲ್ಲಿ ಜಮಾ ಮಾಡುವ ಅಥವಾ ಬದಲಾಯಿಸಿಕೊಳ್ಳುವವರರ ಬಗ್ಗೆ ಆರ್​ಬಿಐ ನಿಗಾ ಇರಿಸುವುದಿಲ್ಲ. ಆದಾಯ ತೆರಿಗೆ ಇಲಾಖೆ ಈ ಕೆಲಸ ಮಾಡುತ್ತದೆ ಎಂದರು. 2000 ರೂ. ಮುಖಬೆಲೆಯ ನೋಟುಗಳು ಸೆಪ್ಟೆಂಬರ್ 30ರ ನಂತರ ಚಲಾವಣೆ ಇರುವುದಿಲ್ಲ. ಜನರು ಬ್ಯಾಂಕ್​ಗಳಲ್ಲಿ ದಿನಕ್ಕೆ 10 ನೋಟು (20 ಸಾವಿರ ರೂ.)ಗಳಂತೆ ವಿನಿಮಯ ಮಾಡಿಕೊಳ್ಳಬಹುದು. ಜತೆ ಸೆ. 30ರವರೆಗೂ ಈ ನೋಟುಗಳ ಮೂಲಕ ವ್ಯವಹಾರ ನಡೆಸಬಹುದು ಎಂದು ಆರ್​ಬಿಐ ಶುಕ್ರವಾರ ಘೋಷಿಸಿತ್ತು.

    2000 ರೂ. ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಅರ್ಜಿ ತುಂಬ ಅಗತ್ಯವಿಲ್ಲ. ಬ್ಯಾಂಕ್​ಗಳಲ್ಲಿ ಜಮಾ ಮಾಡುವ ಯಾವುದೇ ನಮೂನೆಗಳ ಮೂಲಕ ಖಾತೆಗಳಿಗೆ ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ತುಂಬಬಹುದು. ನೋಟು ವಿನಿಮಯಕ್ಕೆ ಬರುವವರ ಗುರುತಿನ ಚೀಟಿಯನ್ನು ಕೇಳುವುದಿಲ್ಲ ಎಂದು ಎಸ್​ಬಿಐ ಸೋಮವಾರ ಸ್ಪಷ್ಟಪಡಿಸಿದೆ. ಎರಡು ಸಾವಿರ ರೂ. ಮುಖಬೆಲೆಯ ನೋಟುಗಳ ಬದಲಾವಣೆಯನ್ನು ಯಾವುದೇ ಅರ್ಜಿ ಇಲ್ಲದೆ ಮತ್ತು ಗುರುತಿನ ಚೀಟಿ ಇಲ್ಲದೆ ಬ್ಯಾಂಕ್​ಗಳಲ್ಲಿ ಮಾಡಿಕೊಡಲು ಸೂಚಿಸಬೇಕು ಎಂದು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ದೆಹಲಿ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅಜಿಯನ್ನು (ಪಿಐಎಲ್) ಸೋಮವಾರ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್​ಬಿಐ ಸ್ಪಷ್ಟನೆ ನೀಡಿದೆ.

    ಒಂದು ಸಾವಿರ ರೂ. ನೋಟು ಜಾರಿ ಇಲ್ಲ

    ಒಂದು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಮತ್ತೆ ಪರಿಚಯಿಸಲಾಗುತ್ತದೆ ಎಂಬ ವರದಿಯನ್ನು ತಳ್ಳಿಹಾಕಿದ ಶಕ್ತಿಕಾಂತ ದಾಸ್, ಈ ರೀತಿಯ ಯಾವುದೇ ಪ್ರಸ್ತಾವನೆ ಸದ್ಯ ಆರ್​ಬಿಐ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಎರಡು ಸಾವಿರ ರೂ. ಮುಖಲೆಬೆಯ ನೋಟುಗಳನ್ನು 2016ರಲ್ಲಿ ದೊಡ್ಡ ಮುಖಬೆಲೆಯ (1000, 500 ರೂ.) ನೋಟುಗಳನ್ನು ಹಿಂಪಡೆದಿದ್ದರಿಂದ ರಾತ್ರೋರಾತ್ರಿ ಮಾರುಕಟ್ಟೆಯಲ್ಲಿ 10 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಅಮಾನ್ಯವಾದವು. ಇದರಿಂದ ಉಂಟಾದ ಅಡಚಣೆಯನ್ನು ನಿವಾರಿಸಲು 2000 ರೂ. ಮುಖಬೆಲೆಯ ನೋಟುಗಳನ್ನು ಪರಿಚಯಿಸಲಾಯಿತು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಎರಡು ಸಾವಿರ ರೂ. ಮುಖಬೆಲೆಯ ಈ ನೋಟುಗಳ ಭದ್ರತೆ ಮತ್ತು ಸುರಕ್ಷತೆ ಉಲ್ಲಂಘನೆ ಆಗಿಲ್ಲ. ಹೀಗಾಗಿ ಈ ನೋಟುಗಳನ್ನು ಸುಲಭವಾಗಿ ನಕಲು ಮಾಡಬಹುದು ಎಂಬ ಕಾರಣಕ್ಕೆ ಅವುಗಳ ಚಲಾವಣೆಯನ್ನು ನಿಲ್ಲಿಸಿಲ್ಲ ಎಂದು ಪ್ರತಿಕ್ರಿಯಿಸಿದರು.

    ಚಲಾವಣೆಯಲ್ಲಿರುವ 2000 ರೂ. ನೋಟು ಶೇ. 10.8

    ಮಾರ್ಚ್ 2017ಕ್ಕೂ ಮೊದಲು ಶೇ. 89ರಷ್ಟು 2000 ರೂ. ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿ ಇದ್ದವು. 2018ರ ಮಾರ್ಚ್ ಹೊತ್ತಿಗೆ ಇವುಗಳ ಪ್ರಮಾಣ ಶೇ. 37.3ಕ್ಕೆ (6.73 ಲಕ್ಷ ಕೋಟಿ ರೂ. ಮೌಲ್ಯ) ಇಳಿಕೆ ಆಯಿತು. 2000 ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು 2019ರಲ್ಲೇ ನಿಲ್ಲಿಸಿದ ಕಾರಣ 2023ರ ಮಾರ್ಚ್ ಅಂತ್ಯದ ಹೊತ್ತಿಗೆ ಈ ನೋಟುಗಳ ಚಲಾವಣೆ ಪ್ರಮಾಣ ಶೇ. 10.8 ತಗ್ಗಿದೆ. (3.62 ಲಕ್ಷ ಕೋಟಿ ರೂ ಮೌಲ್ಯ).

    ಪೆಟ್ರೋಲ್ ಪಂಪ್​ಗಳಲ್ಲಿ 2000 ರೂ. ಪಾವತಿ ಅಧಿಕ

    ಈಗಾಗಲೇ ಬಹುತೇಕ ಅಂಗಡಿಗಳಲ್ಲಿ ಎರಡು ಸಾವಿರ ರೂ. ನೋಟನ್ನು ಸ್ವೀಕರಿಸುತ್ತಿಲ್ಲ. ಪೆಟ್ರೋಲ್ ಪಂಪ್​ಗಳಲ್ಲಿ ಸ್ವೀಕರಿಸುತ್ತಿರುವ ಕಾರಣ ಡಿಜಿಟಲ್ ಪಾವತಿ ಕೊಂಚ ತಗಿದ್ದು, ಗ್ರಾಹಕರು ನಗದು ಪಾವತಿ ಅಂದರೆ ಎರಡು ಸಾವಿರ ರೂ. ಮುಖಬೆಲೆ ನೋಟುಗಳ ಪಾವತಿ ಪೆಟ್ರೋಲ್ ಪಂಪ್​ಗಳಲ್ಲಿ ಹೆಚ್ಚಿದೆ.

    ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆದಿದ್ದರಿಂದ ಆರ್ಥಿಕತೆ ಮೇಲೆ ಆಗುವ ಪರಿಣಾಮ ಅತ್ಯಲ್ಪ ಮತ್ತು ಅದು ಕ್ಷಣಿಕ. ಏಕೆಂದರೆ 500 ರೂ. ಮುಖಬೆಲೆ ನೋಟು ಸಾಕಷ್ಟು ಪ್ರಮಾಣದಲ್ಲಿ ಚಲಾವಣೆಯಲ್ಲಿ ಇದೆ. ವ್ಯಾಪಾರ ಕ್ಷೇತ್ರದಲ್ಲಿ ಡಿಜಿಟಲ್ ಮೂಲಕ ಪಾವತಿ ಕೂಡ ಹೆಚ್ಚಿದೆ.
    | ಶಕ್ತಿಕಾಂತ ದಾಸ್ ಆರ್​ಬಿಐ ಗವರ್ನರ್

    ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಘೋಷಣೆಯು ಕಾಳಧ ನಿಕರಿಗೆ ಇಂಥ ಹಣವನ್ನು ಸಕ್ರಮಗೊಳಿಸಲು ನೀಡಿರುವ ಕೆಂಪು ಹಾಸಿನ ಸ್ವಾಗತವಾಗಿದೆ. ಆರ್​ಬಿಐನ ನಿರ್ಧಾರ ಮೂರ್ಖತನದ್ದು.
    | ಪಿ.ಚಿದಂಬರಂ ಕಾಂಗ್ರೆಸ್​ನ ಹಿರಿಯ ನಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts