More

    ಅಮೃತ ಸಿಂಚನ ಅಂಕಣ | ಒಂದು ಜಗತ್ತು ಒಂದು ಕುಟುಂಬ ಆದರ್ಶ ಸಾಕಾರವಾಗಲಿ…

    ಅಮೃತ ಸಿಂಚನ ಅಂಕಣ | ಒಂದು ಜಗತ್ತು ಒಂದು ಕುಟುಂಬ ಆದರ್ಶ ಸಾಕಾರವಾಗಲಿ…‘ಎಲ್ಲರೂ ನಮ್ಮ ಕುಟುಂಬಕ್ಕೆ ಸೇರಿದವರೇ’ ಎಂಬ ಉದಾತ್ತ ಆದರ್ಶವನ್ನು ಪುನರುಜ್ಜೀವನಗೊಳಿಸಿ, ಮಾನವರ ಹೃದಯಗಳಲ್ಲಿ ಪುನರ್​ಪ್ರತಿಷ್ಠಾಪನೆ ಮಾಡಬೇಕಾಗಿದೆ.ಇದು ಜಾಗತಿಕ ಸಮಸ್ಯೆಗಳಿಗೆ ಪರಿಹಾರೋಪಾಯ ಕಂಡುಕೊಳ್ಳುವಲ್ಲಿ ಸಾಧನವಾಗಬಲ್ಲದು.

    ನಲವತ್ತು ದಿನಗಳ ವಿಶ್ವ ಪರ್ಯಟನವನ್ನು ಮುಗಿಸಿ ಇದೀಗ ಮರಳಿ ಬಂದಿದ್ದು, ಸುದೀರ್ಘ ವಿಮಾನ ಪಯಣದ ಆಯಾಸವಿನ್ನೂ ದೇಹ-ಮನಸ್ಸುಗಳನ್ನು ಆವರಿಸಿದೆ. ಆದರೆ, ಫಿಜಿ ದ್ವೀಪಗಳ ಬುಡಕಟ್ಟು ಜನಾಂಗದವರಲ್ಲಿ ಹಾಗೂ ಆಸ್ಟ್ರೇಲಿಯಾದ ಮೂಲನಿವಾಸಿಗಳಲ್ಲಿ ಇಂದಿಗೂ ಉಳಿದಿರುವ ಅವರ ಪ್ರಾಚೀನ ಸಂಸ್ಕೃತಿಗಳ ಕೆಲವು ಆಚಾರ-ವಿಚಾರಗಳ ನೆನಪು ಇನ್ನೂ ಹಸಿಯಾಗಿದ್ದು, ಪ್ರಾಚೀನ ಕಾಲದ ಜನರು ಹೇಗೆ ಇಂದಿನ ಆಧುನಿಕ ಜನರಿಗಿಂತ ಸತ್ಯಕ್ಕೆ ಹೆಚ್ಚು ಸನ್ನಿಹಿತವಾದ ಜೀವನ ನಡೆಸುತ್ತಿದ್ದರೆಂಬ ವಿಷಯವು ಮನಸ್ಸಿನಲ್ಲಿ ಪುನಃಪುನಃ ಸುಳಿಯುತ್ತಿದೆ. ಈ ಬಗ್ಗೆ ಆಳವಾಗಿ ಚಿಂತನೆ ಮಾಡಿದಾಗ, ನಮ್ಮ ಸನಾತನ ಧರ್ಮವು ಬೋಧಿಸುವ ಆದರ್ಶಗಳು ಮತ್ತು ಈ ಪ್ರಾಚೀನ ಜನಾಂಗಗಳ ಜೀವನಮೌಲ್ಯಗಳಲ್ಲಿ ಕಂಡುಬರುವ ಸಾಮ್ಯತೆಯು, ಅಂದಿನ ಮಾನವರೆಲ್ಲರೂ ವಿಶ್ವದ ಏಕೈಕ ಉನ್ನತ ಜ್ಞಾನಮೂಲವನ್ನು ತಮ್ಮ ಅಂತರಂಗದಲ್ಲೇ ಸಂರ್ಪಸಿ, ಅದರಿಂದಲೇ ಸ್ಪೂರ್ತಿ ಪಡೆದು ಸಮರಸ ಭರಿತ ಜೀವನ ವಿಧಾನವನ್ನು ರೂಪಿಸಿಕೊಂಡಿದ್ದರೆಂಬುದನ್ನು ಸ್ಪಷ್ಟಪಡಿಸುತ್ತದೆ.

    ಈ ಪ್ರವಾಸದಲ್ಲಿ ನಾವು ದಕ್ಷಿಣ ಮತ್ತು ಉತ್ತರ ಅಮೆರಿಕಾ ದೇಶಗಳ, ದಕ್ಷಿಣ ಪೆಸಿಫಿಕ್ ಸಾಗರದ ಫಿಜಿ ದ್ವೀಪಗಳ ಹಾಗೂ ಆಸ್ಟ್ರೇಲಿಯಾ ದೇಶಗಳ ಜನರಿಗೆ ನೀಡಲು ಭಾರತದಿಂದ ಕೊಂಡುಹೋಗಿದ್ದ ಸಂದೇಶವೆಂದರೆ ನಮ್ಮ ಉಪನಿಷತ್ತುಗಳು ಸಾರುವ ‘ವಸುಧೈವ ಕುಟುಂಬಕಂ’ ಎಂಬುದು. ಈ ಭೂಮಿಯ ಮೇಲೆ ವಾಸಿಸುತ್ತಿರುವ ನಾವೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು ಎಂಬ ಉದಾತ್ತ, ಉದಾರ ಆದರ್ಶ.

    ಅಯಂ ಬಂಧುರಯಂ ನೇತಿ ಗಣನಾ ಲಘುಚೇತಸಾಂ!
    ಉದಾರಚರಿತಾನಾಂ ತು ವಸುಧೈವ ಕುಟುಂಬಕಂ!!
    (ಮಹೋಪನಿಷತ್ತು, ಆರನೆಯ ಅಧ್ಯಾಯ, 71-72 ನೆಯ ಶ್ಲೋಕ)

    ‘ಸಂಕುಚಿತ ಮನೋಭಾವನೆಯ ಜನರು ಮಾತ್ರ, ಇವನು ನನ್ನ ಬಂಧು, ಅವನು ಬೇರೆಯವನು ಎಂದು ಭೇದವೆಣಿಸುತ್ತಾರೆ. ಉದಾರ ಮನೋಭಾವವುಳ್ಳ ಜನರಿಗೆ ಇಡೀ ಜಗತ್ತು ಒಂದೇ ಕುಟುಂಬ.’

    ಹೃದಯ ವೈಶಾಲ್ಯವೇ ಮೇಲಿನ ಆದರ್ಶದ ಬುನಾದಿ. ಇಂತಹುದೇ ಆದರ್ಶವನ್ನು ದಕ್ಷಿಣ ಪೆಸಿಫಿಕ್ ಸಾಗರದ ಫಿಜಿ ದ್ವೀಪಗಳ ಬುಡಕಟ್ಟು ಜನಾಂಗದವರು ಹಾಗೂ ಆಸ್ಟೆ›ೕಲಿಯಾದ ಮೂಲನಿವಾಸಿಗಳು ಸಾವಿರಾರು ವರ್ಷಗಳಿಂದ ಸಾರುತ್ತಾ ಮತ್ತು ಪಾಲಿಸುತ್ತಾ ಬಂದಿರುವುದನ್ನು ನಾವು ಅಲ್ಲಿ ಈಗಲೂ ಕಾಣಬಹುದು! ಅಲ್ಲಿ ಇಂತಹ ಉದಾತ್ತ ಮೌಲ್ಯಗಳು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಬಾಯಿಮಾತಿನ ಮೂಲಕವೇ ವರ್ಗಾವಣೆಯಾಗುತ್ತಾ ಇಂದಿನವರೆಗೆ ಬಂದಿವೆ. ಆದರೆ, ಭಾರತದಲ್ಲಿ ಈ ಆದರ್ಶಗಳು ವೇದಮಂತ್ರಗಳ ರೂಪದಲ್ಲಿ ಹಿಂದೆ ಸಾವಿರಾರು ವರ್ಷಗಳ ಕಾಲ ಮೌಖಿಕವಾಗಿಯೇ ಹರಿದುಬಂದಿದ್ದರೂ, ಇಂದು ಅವುಗಳನ್ನು ನಾವು ಲಿಖಿತ ರೂಪದಲ್ಲಿ ಕಾಣಬಹುದಾಗಿದೆ.

    ಫಿಜಿ ದೇಶದ ಇಂದಿನ ಅಧ್ಯಕ್ಷರು ಅಲ್ಲಿನ ಒಂದು ಪ್ರಭಾವಿ ಬುಡಕಟ್ಟು ಸಮುದಾಯದ ಅತ್ಯುಚ್ಚ ಮುಖಂಡರಾಗಿದ್ದಾರೆ. ಅವರು ನಮ್ಮೊಡನೆ ಮಾತನಾಡುತ್ತಾ, ಸಾವಿರಾರು ಜನಸಂಖ್ಯೆಯುಳ್ಳ ಅವರ ಇಡೀ ಸಮುದಾಯವು ಇಂದಿಗೂ ಒಂದು ಕುಟುಂಬದಂತೆ ನಡೆದುಕೊಳ್ಳುತ್ತಿರುವುದನ್ನು ತಿಳಿಸಿದರು. ಉದಾಹರಣೆಗೆ, ಒಂದು ಗ್ರಾಮದಲ್ಲಿ ಯಾವುದೇ ಕುಟುಂಬದ ಒಬ್ಬ ಯುವಕನು ಉದ್ಯೋಗಾರ್ಥವಾಗಿ ದೂರದ ಊರಿಗೆ ಹೋಗಬೇಕಾದ ಸಂದರ್ಭದಲ್ಲಿ, ಗ್ರಾಮಸ್ಥರೆಲ್ಲರೂ ಸಭೆ ಸೇರಿ, ಆ ಯುವಕನ ಕುಟುಂಬದ ಉಳಿದ ಹಿರಿಯ ಸದಸ್ಯರು ಅವನ ಗೈರುಹಾಜರಿಯಲ್ಲಿ ತಮ್ಮನ್ನು ತಾವು ನೋಡಿಕೊಳ್ಳಲು ಶಕ್ತರಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ, ಅವರಿಗೆ ಸಾಮೂಹಿಕ ಸಹಾಯ-ಬೆಂಬಲಗಳನ್ನು ವ್ಯಕ್ತಪಡಿಸುತ್ತಾರೆ. ಈ ಆದರ್ಶವನ್ನು ನಾವು ಇಡೀ ಮಾನವ ಜನಾಂಗಕ್ಕೆ ವಿಸ್ತರಿಸಿದರೆ, ಜಗತ್ತಿನಲ್ಲಿ ಯಾರೂ ಅನಾಥರಾಗಿ ಅಥವಾ ನಿರ್ಗತಿಕರಾಗಿ ಉಳಿಯುವದಿಲ್ಲ!

    ಇಂತಹ ಹೃದಯ ವೈಶಾಲ್ಯವನ್ನು ನಾವು ಆಸ್ಟ್ರೇಲಿಯಾ ದೇಶದ ನ್ಯೂ ಸೌತ್ ವೇಲ್ಸ್ ಪ್ರಾಂತ್ಯದ ಮುರ್ವಿಲುಂಬ ಪ್ರದೇಶದ ಮೂಲನಿವಾಸಿಗಳಲ್ಲಿಯೂ ಕಂಡೆವು. ಅಲ್ಲಿಯ ನಮ್ಮ ಹೊಸ ಆಶ್ರಮದ ಸ್ಥಳವನ್ನು ಋಣಾತ್ಮಕ ಪ್ರಭಾವಗಳಿಂದ ವಿಮುಕ್ತಿಗೊಳಿಸಲು, ಅಲ್ಲಿನ ಮೂಲನಿವಾಸಿಗಳು ಅವರಲ್ಲಿ ಇಂದಿಗೂ ಪ್ರಚಲಿತವಿರುವ ಒಂದು ಅಗ್ನಿ ಕ್ರಿಯೆಯನ್ನು ನಡೆಸಿಕೊಟ್ಟರು. ಅದರ ಒಂದು ಭಾಗವಾದ ನೃತ್ಯಗೀತೆಯಲ್ಲಿ, ಅಸ್ತಿತ್ವದಲ್ಲಿರುವ ಸಮಸ್ತ ವಿಶ್ವದ ಹಿನ್ನೆಲೆಯಲ್ಲಿರುವ ಏಕತ್ವದ ಬಗ್ಗೆ ಹೃದಯಸ್ಪರ್ಶ ಪ್ರಸ್ತಾಪವಿತ್ತು. ಅಲ್ಲದೆ, ಆ ನರ್ತಕರು ತಮ್ಮ ಹಸ್ತವಿನ್ಯಾಸ ಮತ್ತು ಹಾವಭಾವಗಳ ಮೂಲಕ ಸಾಂಕೇತಿಕವಾಗಿ, ಜಗತ್ತಿನಲ್ಲಿರುವ ಎಲ್ಲಾ ಮಾನವರು, ಪಶು-ಪಕ್ಷಿಗಳು ಹಾಗೂ ಸಸ್ಯರಾಶಿಗಳು ಒಂದೇ ವಿಶ್ವಕುಟುಂಬಕ್ಕೆ ಸೇರಿದ ಸದಸ್ಯರೆಂಬ ಉನ್ನತ ಆದರ್ಶವನ್ನು ಎತ್ತಿ ತೋರಿದರು! ಅವರಲ್ಲೊಬ್ಬರು ಹಾಡಿದ ಬಹು ಸುಂದರ ಗೀತೆಯ ಸಾರಾಂಶವು ಇಂತಿದೆ:

    ‘ನಮ್ಮ ದೇಹದಲ್ಲಿ ಪ್ರತಿಶತ ಎಪ್ಪತ್ತರಷ್ಟು ಜಲವಿದ್ದು, ನಾವೆಲ್ಲರೂ ಮೂಲತಃ ಜಲವೇ. ದೇಹವು ಮರಣಿಸಿದಾಗ ನಮ್ಮಲ್ಲಿರುವ ಜಲವು ಭೂಮಿಯನ್ನು ಸೇರಿ ಅಲ್ಲಿಂದ ಹೊಳೆ-ನದಿಗಳ ರೂಪದಲ್ಲಿ ಹರಿದು ಸಾಗರವನ್ನು ಸೇರುತ್ತದೆ. ಅದೇ ಜಲವು ಆವಿಯಾಗಿ ಆಕಾಶವನ್ನು ಸೇರಿ ಮೋಡಗಳಾಗಿ ಪರಿವರ್ತನೆಗೊಂಡು ಪುನಃ ಮಳೆಯಾಗಿ ಸುರಿದು ಭೂಮಿಯ ಮೇಲೆ ನಮ್ಮ ಮಕ್ಕಳ ಹಾಗೂ ಮೊಮ್ಮಕ್ಕಳ ರೂಪದಲ್ಲಿ ಹೊಸ ಜೀವಿಗಳ ಉಗಮಕ್ಕೆ ಕಾರಣವಾಗುತ್ತದೆ. ಹೀಗೆ ನಿಸರ್ಗದ ಈ ವಿದ್ಯಮಾನವು ನಮ್ಮ ಪೂರ್ವಜರಿಂದ ಪ್ರಾರಂಭವಾಗಿ ಹಿಂದಿನ, ಇಂದಿನ ಮತ್ತು ಮುಂದಿನ ತಲೆಮಾರುಗಳ ಜನರ ಮಧ್ಯೆ ಸಂಬಂಧವನ್ನು ಬೆಸೆಯುವ ಕೊಂಡಿಯಾಗಿದೆ!’

    ಈ ಗೀತೆಯು ನನ್ನ ಮನಸ್ಸಿನಲ್ಲಿ ಯಜುರ್ವೆದದ ತೈತ್ತಿರೀಯ ಅರಣ್ಯಕದಲ್ಲಿ ಬರುವ ಮಂತ್ರಪುಷ್ಪದ ಮಂತ್ರಗಳನ್ನು ಸ್ಮರಣೆಗೆ ತಂದಿತು: ‘ಯೋಪಾಮಾಯತನಂ ವೇದಾ ಆಯತನವಾನ್ ಭವತಿ.’ ಇದರ ಅರ್ಥ: ‘ಜಲದ ಮೂಲವನ್ನರಿತವನು ಆತ್ಮವನ್ನರಿತು ಅಲ್ಲೇ ನೆಲೆಗೊಳ್ಳುತ್ತಾನೆ.’ ಹಿಂದೂ ಸಂಸ್ಕೃತಿಯಲ್ಲಿ ಪೂಜೆಗಳ ಅಂತ್ಯದಲ್ಲಿ ಮಂತ್ರಪುಷ್ಪ ಪಠಣ ಮಾಡಿ ದೇವ-ದೇವತೆಗಳಿಗೆ ಪುಷ್ಪಗಳನ್ನು ಅರ್ಪಿಸುವ ಸಂಪ್ರದಾಯವಿದೆ. ಈ ಮಂತ್ರಗಳು ಜಲ, ಅಗ್ನಿ, ವಾಯು, ಸೂರ್ಯ, ಚಂದ್ರ, ನಕ್ಷತ್ರ, ಮೇಘ ಹಾಗೂ ಕಾಲಗಳ ರಹಸ್ಯವನ್ನರಿತ ಮಾನವನಿಗೆ ಲಭ್ಯವಾಗುವ ಪ್ರಯೋಜನಗಳನ್ನು ವರ್ಣಿಸುತ್ತವೆ; ಅಲ್ಲದೆ, ಈ ವಿಶ್ವದ ಆಧಾರವು ಜಲವೇ ಎಂದು ಪುನಃ ಪುನಃ ಸಾರಿ, ಜಲದ ಮೂಲವನ್ನರಿತವನು (ಎಂದರೆ, ವಿಶ್ವದ ವಿವಿಧ ಶಕ್ತಿಗಳ ಪರಸ್ಪರ ಅವಿನಾಭಾವ ಸಂಬಂಧ ಮತ್ತು ಏಕತೆಯನ್ನರಿತವನು) ಈ ವಿಶ್ವದ ನಿಯೋಜಕನಾದ ಆತ್ಮನನ್ನು ತಿಳಿಯುತ್ತಾನೆಂದು ಘೊಷಿಸುತ್ತವೆ.

    ಕ್ರಿ.ಶ. ಆರನೆಯ ಶತಮಾನದ ತಮಿಳುನಾಡಿನ ತತ್ತ್ವಜ್ಞಾನಿ, ಕಣಿಯನ್ ಪೂನ್ಗುಂದ್ರಾನರ್ ಸಾರಿರುವಂತೆ ‘ಯಾಧುಂ ಊರೇ, ಯಾವುರುಂ ಕೇಳಿರ್’ ಎಂದರೆ, ‘ಎಲ್ಲಾ ಊರುಗಳೂ ನಮ್ಮ ಊರುಗಳೇ, ಎಲ್ಲರೂ ನಮ್ಮ ಬಂಧುಗಳೇ!’ ನಮ್ಮ ಕಳೆದ ಶ್ರೀಲಂಕಾ ಪ್ರವಾಸದಲ್ಲಿ ಬಟ್ಟಿ ಕಾಲೋವಾ ನಗರದಲ್ಲಿ, ಅಲ್ಲಿಯ ತಮಿಳು ಮಿತ್ರರೊಬ್ಬರು ನನಗೆ ಇದನ್ನು ತಿಳಿಸಿದರು.

    ‘ಎಲ್ಲರೂ ನಮ್ಮ ಕುಟುಂಬಕ್ಕೆ ಸೇರಿದವರೇ’ ಎಂದು ಭಾವಿಸುವ ಉದಾತ್ತ ಆದರ್ಶ ನಮ್ಮ ಜಗತ್ತಿಗೆ ಹೊಸತಲ್ಲ. ಆದರೆ, ಇಂದು ಜನಮನವನ್ನು ದಟ್ಟವಾಗಿ ಆವರಿಸಿರುವ ಸಂಕುಚಿತ ಸ್ವಾರ್ಥ ಮನೋಭಾವನೆಯಿಂದಾಗಿ ಇಂದಿನ ಜಗತ್ತು ಈ ಆದರ್ಶವನ್ನು ಮರೆತಂತೆ ತೋರುತ್ತದೆ. ಮಾನವತೆಯ ಉಳಿವಿಗಾಗಿ, ಇಂದು ಈ ಆದರ್ಶವನ್ನು ಪುನರುಜ್ಜೀವನಗೊಳಿಸಿ, ಮಾನವರ ಹೃದಯಗಳಲ್ಲಿ ಪುನರ್​ಪ್ರತಿಷ್ಠಾಪನೆ ಮಾಡುವುದು ಅತ್ಯಂತ ಅಗತ್ಯವಾಗಿದೆ. ಈ ತತ್ತ್ವವನ್ನು ಇಂದು ಎಲ್ಲಾ ದೇಶಗಳೂ ತಮ್ಮ ಮೂಲಭೂತ ಧೋರಣೆಯನ್ನಾಗಿ ಸ್ವೀಕರಿಸಿ ಆಚರಿಸಬೇಕಾದ ಕಾಲವಿದೀಗ ಸನ್ನಿಹಿತವಾಗಿದೆ. ಇದುವೇ ಇಂದಿನ ಜಗತ್ತನ್ನು ಪೀಡಿಸಿ ಬಾಧಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಇರುವ ಏಕೈಕ ಮಾರ್ಗವೆಂಬುದು ನನ್ನ ನಂಬಿಕೆ. ಈ ದಿಶೆಯಲ್ಲಿ ಬಹು ಪರಿಣಾಮಕಾರಿ ಪ್ರಾರಂಭವೆಂದರೆ, ಈ ಆದರ್ಶವನ್ನು ನಾವು ಮೊದಲು ನಮ್ಮ ಮನೆ, ಶಾಲೆ ಹಾಗೂ ಸಮುದಾಯಗಳಲ್ಲಿ ಆಚರಣೆಗೆ ತರುವುದಾಗಿದೆ.

    ‘ನಿಮ್ಮ ಸಂಸ್ಥೆಗಳಲ್ಲಿ ಎಲ್ಲರಿಗೂ ಆಹಾರ, ಶಿಕ್ಷಣ, ಆರೋಗ್ಯ ಶುಶ್ರೂಷೆ ಇತ್ಯಾದಿ ಎಲ್ಲವನ್ನೂ ಏಕೆ ನೀವು ಯಾವುದೇ ಶುಲ್ಕವಿಲ್ಲದೆ ಸಂಪೂರ್ಣ ಉಚಿತವಾಗಿ ನೀಡುತ್ತೀರಿ?’ ಎಂದು ಕೆಲವರು ನಮ್ಮನ್ನು ಕೇಳುತ್ತಾರೆ. ಇದಕ್ಕೆ ನಮ್ಮ ಉತ್ತರವಿಷ್ಟೇ – ನಾವು ಎಲ್ಲರನ್ನೂ ನಮ್ಮ ಕುಟುಂಬದ ಸದಸ್ಯರೆಂದೇ ಭಾವಿಸುತ್ತೇವೆ. ಹೀಗಿರುವಾಗ, ಕುಟುಂಬದಲ್ಲಿ ದುರ್ಬಲರಾದವರಿಗೆ ಶಕ್ತಿವಂತರಾಗಿರುವವರು ಸಹಾಯ ಮಾಡಲೇಬೇಕಲ್ಲವೇ! ನಮ್ಮ ವಿದ್ಯಾಸಂಸ್ಥೆಗಳಲ್ಲಿ ವಿದ್ಯೆಯನ್ನರಸಿ ಬರುವ ಗ್ರಾಮೀಣ ದುರ್ಬಲ ವರ್ಗಗಳ ಮಕ್ಕಳು ಹಾಗೂ ನಮ್ಮ ಆಸ್ಪತ್ರೆಗಳಲ್ಲಿ ಆರೋಗ್ಯವನ್ನರಸಿ ಬರುವವರು ನಮ್ಮ ಕುಟುಂಬದ ಸದಸ್ಯರೇ. ಅವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯವಲ್ಲವೇ? ‘ಬಡವರಿಗೆ ನೀವು ಎಲ್ಲವನ್ನೂ ಉಚಿತವಾಗಿ ನೀಡಿ. ಆದರೆ, ಶುಲ್ಕವನ್ನು ಕೊಡಲು ಶಕ್ತರಾದವರಿಗೆ ನೀವೇಕೆ ಉಚಿತವಾಗಿ ನೀಡಬೇಕು?’ ಎಂಬುದು ಇನ್ನು ಕೆಲವರ ಪ್ರಶ್ನೆ. ಅವರಿಗೂ ನಮ್ಮ ಉತ್ತರವು ಇಷ್ಟೆ, ಅವರೂ ನಮ್ಮ ಕುಟುಂಬದ ಸದಸ್ಯರೇ. ನಾವು ನಮ್ಮ ತಂದೆ-ತಾಯಂದಿರಿಗೆ ಅಥವಾ ಸೋದರ-ಸೋದರಿಯರಿಗೆ ಸೇವೆ ಸಲ್ಲಿಸಿದಾಗ, ಅವರಿಂದ ಶುಲ್ಕವನ್ನು ನಿರೀಕ್ಷಿಸುವುದು ಸರಿಯೇ?

    ನಾವೆಲ್ಲರೂ ಒಟ್ಟು ಸೇರಿ ಇಂತಹ ಹೃದಯ ವೈಶಾಲ್ಯವನ್ನು ಬೆಳೆಸಿಕೊಂಡು ಪರಸ್ಪರ ಪ್ರೇಮ-ಸೇವೆಗಳ ಮೂಲಕ ಇಂತಹ ಕುಟುಂಬಸದೃಶ ಪ್ರೇಮವುಳ್ಳ ಗ್ರಾಮ-ನಗರಗಳನ್ನೂ ಹಾಗೂ ಪ್ರೇಮಪೂರ್ಣ ಜಗತ್ತನ್ನೂ ನಿರ್ವಿುಸೋಣ!

    (ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts