More

    ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯದ ಬೀಡು ಅಜ್ಜಿ ಮನೆ

    ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯದ ಬೀಡು ಅಜ್ಜಿ ಮನೆನಾವೆಲ್ಲ ಸಣ್ಣವರಿರುವಾಗ ಶಾಲೆಗೆ ರಜೆ ಬಂತೆಂದರೆ ಅಜ್ಜಿ ಮನೆಗೆ ಓಡುತ್ತಿದ್ದೆವು. ಏಕೆಂದರೆ, ಅಲ್ಲಿ ಬಹಳ ದಿನ ಉಳಿದುಕೊಳ್ಳಬಹುದಾಗಿತ್ತು. ಇತರ ಸಮಯದಲ್ಲಾದರೆ ಆಗುವುದಿಲ್ಲ. ಕಾರ್ಯಕ್ರಮಗಳಿಗೇನಾದರೂ ಹೋದರೂ ಒಂದೆರಡು ದಿವಸದಲ್ಲೇ ಮರಳಿ ಬರಬೇಕಾಗಿತ್ತು. ಅಜ್ಜಿ ಮನೆಯ ಪರಿಸರ, ಅಜ್ಜಿ, ಅತ್ತೆ ಮಾವಂದಿರು, ಮಕ್ಕಳ ಜತೆಗಿನ ಒಡನಾಟ ಮತ್ತು ಭಯವಿಲ್ಲದೆ ಅಂದರೆ ಅಂಕುಶವಿಲ್ಲದೆ ಸ್ವಾತ್ರಂತ್ಯ ದೊರಕುತ್ತಿತ್ತು. ಹೀಗೆ ಬಂಧುಗಳಲ್ಲಿ ಬೆರೆಯುವಾಗ ಅಂತಸ್ತು, ಸಿರಿತನ, ಬಡತನಗಳ ತಾರತಮ್ಯ ಇರಲಿಲ್ಲ. ಆದರೆ, ಇತ್ತೀಚೆಗೆ ಬಂಧುಗಳನ್ನು ಆಯ್ಕೆ ಮಾಡುವ ಪರಿವರ್ತನೆ ಕಂಡುಬರುತ್ತಿದೆ. ಸಹಜೀವನ ಮತ್ತು ಸಹಬಾಳ್ವೆಯ ಮಂತ್ರವನ್ನು ಎಲ್ಲರೂ ತಿಳಿಸಬೇಕು. ಪರಸ್ಪರ ಅರಿತು, ನಂಬಿಕೆ, ಪ್ರೀತಿ-ವಿಶ್ವಾಸ, ಆದರಾಭಿಮಾನವಿದ್ದಲ್ಲಿ ಆತ್ಮೀಯತೆ ಬೆಳೆಯುತ್ತದೆ. ವ್ಯಕ್ತಿತ್ವ ವಿಕಸನವೂ ಆಗುತ್ತದೆ.

    ಮನೆಯಲ್ಲಾದರೆ ಬೆಳಗ್ಗೆ ಬೇಗನೆ ಎದ್ದು, ನಿತ್ಯಕರ್ಮ ಮುಗಿಸಿ, ಓದು-ಬರಹದಲ್ಲಿ ತೊಡಗಿಕೊಳ್ಳಬೇಕಾಗಿತ್ತು. ಆಟದ ಸಮಯದಲ್ಲಿ ಆಟ, ಓದಿನ ಸಮಯದಲ್ಲಿ ಓದು, ಊಟ-ನಿದ್ದೆ ಹೀಗೆ ಎಲ್ಲವೂ ಕ್ರಮಪ್ರಕಾರವಾಗಿರುವುದು ಸಾಮಾನ್ಯ. ಆದರೆ, ಅಜ್ಜಿ ಮನೆಯಲ್ಲಿ ಹಾಗಲ್ಲ, ರಜಾ ಸಮಯವೆಂದು ನೀತಿ-ನಿಯಮಗಳಲ್ಲಿ ಸಡಿಲಿಕೆ ಇತ್ತು. ಅದರಂತೆ ತಡವಾಗಿ ಏಳಬಹುದಾಗಿತ್ತು. ಬೆಳಗ್ಗಿನಿಂದಲೇ ಆಟದಲ್ಲಿ ತೊಡಗಿಕೊಳ್ಳಬಹುದಾಗಿತ್ತು. ತೋಟ, ಗದ್ದೆಗಳಲ್ಲಿ ಸ್ವತಂತ್ರವಾಗಿ ಓಡಾಡಬಹುದಿತ್ತು. ಗೇರುಹಣ್ಣು, ಮಾವು, ಹಲಸಿನ ಹಣ್ಣುಗಳನ್ನು ಇಷ್ಟಬಂದಂತೆ ಸವಿಯಬಹುದಾಗಿತ್ತು. ಇದಲ್ಲದೆ, ಊರಜಾತ್ರೆ, ಹಬ್ಬಗಳಲ್ಲಿ ಮುಕ್ತವಾಗಿ ಬೆರೆಯಲು ನಿರ್ಬಂಧಗಳಿರಲಿಲ್ಲ. ಅಂತೂ, ರಜೆಯಲ್ಲಿ ಓದಿಗಂತೂ ಪೂರ್ತಿ ವಿರಾಮವಿತ್ತು. ಆದರೂ, ಕೆಲವೊಮ್ಮೆ ಮನೆಕೆಲಸವಾಗಿ ಕೊಟ್ಟಿರುವ ಕಾಪಿ ಬರೆಯುವುದು, ಲೆಕ್ಕ ಮಾಡುವುದು, ಇತ್ಯಾದಿ ಮಾಡಬೇಕಿತ್ತು.

    ಎಲ್ಲರಿಗೂ ಬಾಲ್ಯವೆಂದರೆ ನೆನಪಾಗುವುದು ಅಜ್ಜಿ ಮನೆಯೇ. ಅಲ್ಲಿ ಕಳೆದ ಖುಷಿ, ಸುಖ-ಮತ್ತು ನೋವಿನ ಸಂಗತಿಗಳೆಲ್ಲ, ಇಂದು ರಸಮಯ ಕ್ಷಣಗಳಾಗಿ ಮನದಲ್ಲಿ ಅಚ್ಚಳಿಯದೆ ಉಳಿದಿವೆ. ಆದರೆ, ಅಂದಿನ ಮಕ್ಕಳ ಬಾಲ್ಯಕ್ಕೂ ಇಂದಿನ ಮಕ್ಕಳ ಬಾಲ್ಯಕ್ಕೂ ಅಜಗಜಾಂತರವಿದೆ. ಈ ವ್ಯತ್ಯಾಸ ಅಥವಾ ಬದಲಾವಣೆಗಳಿಗೆ ಆಧುನಿಕತೆ ಮತ್ತಿತರ ವಿಚಾರಗಳು ಪ್ರಮುಖ ಕಾರಣ ಎಂದು ಹೇಳಬಹುದಾದರೂ ಅವುಗಳನ್ನೇ ದೂಷಣೆ ಮಾಡಲು ಸಾಧ್ಯವಿಲ್ಲ. ಇಂತಹ ಬದಲಾವಣೆಗಳಿಗೆ ಒಳಗೊಳ್ಳುವ ಸಂದರ್ಭದಲ್ಲಿ ನಮ್ಮತನ ಕಳೆದುಕೊಳ್ಳಬಾರದು. ನಮ್ಮ ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯ, ನಂಬಿಕೆ ನಡವಳಿಕೆ ಹೀಗೆ ಒಟ್ಟಿನಲ್ಲಿ ಜೀವನಶೈಲಿಯನ್ನೂ ನಮ್ಮತನವೆಂದೇ ಹೇಳಬಹುದು.

    2021ನೇ ಇಸವಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ವಿಮಾನದಲ್ಲಿ ನಾನು ಪ್ರಯಾಣಿಸುವಾಗ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಅಂದಾಜು ನಾಲ್ಕು ವರ್ಷದ ಬಾಲಕನೋರ್ವ ವಿಮಾನದಿಂದ ಇಳಿಯುವುದಿಲ್ಲವೆಂದು ವಿಮಾನದ ಬಾಗಿಲ ಬಳಿ ಕುಳಿತುಬಿಟ್ಟ. ತಾಯಿ ‘ಹೋಗು, ಅಜ್ಜಿ ಮನೆಗೆ ಹೋಗು. ಮನೆಗೆ ಬರಬೇಡ’ ಎಂದು ಬೈಯುವುದರೊಂದಿಗೆ ಹತಾಶೆ ವ್ಯಕ್ತಪಡಿಸಿದ್ದಳು. ಬಹುಶಃ ಅವರು ಹಳ್ಳಿಯ ಮನೆಗೆ ಹೋಗಿರಬೇಕು.

    ನಾನು ಬಾಲ್ಯದಲ್ಲಿ ಪಡುಬಿದ್ರೆಯಲ್ಲಿರುವ ಅಜ್ಜನ ಮನೆಗೆ ಹೋದಾಗ ತುಳುವಿನಲ್ಲಿ ಪೆಜಕಾಯಿ (ಅಂದರೆ ಕನ್ನಡದಲ್ಲಿ ಹೆಬ್ಬಲಸು ಇರಬೇಕು) ಹಾಗೂ ಮಾವಿನಹಣ್ಣನ್ನು ಸ್ನೇಹಿತರೊಂದಿಗೆ ತಿನ್ನುತ್ತಿದ್ದುದು ಸ್ಮರಣೀಯವಾಗಿದೆ. ಬೇಕಾದಷ್ಟು ಎಳನೀರು ಕುಡಿಯಲು ತೆಂಗಿನಮರಗಳಿದ್ದವು.

    ಬದಲಾವಣೆ: ಮಜ್ಜಿಗೆ ಕಡೆಯಲು ಕಡೆಗೋಲಿನ ಬದಲು ಮೆಶಿನ್ ಬಂತೇನೋ ಸರಿ. ದೈಹಿಕ ಶ್ರಮ, ಸಮಯದ ಉಳಿತಾಯಕ್ಕಾಗಿ ಅಥವಾ ಕೆಲಸವನ್ನು ವೇಗವಾಗಿ ಮಾಡಲು ಕಡೆಗೋಲಿನಿಂದ ಯಂತ್ರದ ಪ್ರಯೋಜನ ಪಡೆಯುವುದು ಅಭಿವೃದ್ಧಿ ಎನ್ನಬಹುದು. ಆದರೆ, ಹಣ ಕೊಟ್ಟರೆ ಎಲ್ಲವೂ ಅಂಗಡಿಯಲ್ಲಿ ಸಿಗುತ್ತದೆ. ಮತ್ತೆ ಯಾಕೆ ಮಜ್ಜಿಗೆ ಕಡೆದು ಬೆಣ್ಣೆ ಮಾಡಬೇಕು, ಬಿಸಿ ಮಾಡಿ ತುಪ್ಪ ಮಾಡುವ ಕೆಲಸ ಎಂದು ಭಾವಿಸಿದರೆ ತುಪ್ಪ ಹೇಗೆ ತಯಾರಿಸಲಾಗುತ್ತದೆ? ಎಂಬ ಕನಿಷ್ಠ ಸಾಮಾನ್ಯ ಜ್ಞಾನವೂ ಭವಿಷ್ಯದಲ್ಲಿ ದೊರಕದಂತಹ ಸ್ಥಿತಿ ಬರಬಹುದು. ಹಾಗೆಯೇ ಭತ್ತ ಎಲ್ಲಿ? ಹೇಗೆ? ಬೆಳೆಯುತ್ತಾರೆ. ತರಕಾರಿಗಳು ಎಲ್ಲಿ ಸಿಗುತ್ತವೆ? ಎಂಬಿತ್ಯಾದಿ ಮಾಹಿತಿಗಳೂ ಈಗಿನ ಕಾಲದ ಕೆಲವೊಂದು ಮಕ್ಕಳಿಗೆ ತಿಳಿದಿರುವುದಿಲ್ಲ.

    ರಜಾಕಾಲದಲ್ಲಿ ಮಕ್ಕಳೆಲ್ಲ ಅಜ್ಜಿ ಮನೆಗೆ ಹೋದಾಗ ಅಜ್ಜಿ ಬಗೆ ಬಗೆಯ ತಿಂಡಿಗಳನ್ನು ಮಾಡಿ ಉಣಬಡಿಸುತ್ತಾಳೆ. ನದಿ ನೀರಲ್ಲಿ ಮಿಂದು ಶೀತವಾದರೆ ಹಳ್ಳಿಮದ್ದಿನ ಮೂಲಕ ಶೀತ, ತಲೆನೋವು, ಕೈ ಕಾಲು ನೋವುಗಳನ್ನು ದೂರ ಮಾಡುತ್ತಾಳೆ. ಕತೆಗಳನ್ನು ಹೇಳಿ ರಾತ್ರಿ ಮಕ್ಕಳನ್ನು ಮಲಗಿಸುತ್ತಾಳೆ. ತಾನು ಕೆಲಸ ಮಾಡುತ್ತಾ, ಮಕ್ಕಳಿಗೂ ಕೆಲಸವನ್ನು ಹಚ್ಚಿ, ಕೆಲಸಕಾರ್ಯಗಳ ಪಾಠವನ್ನು ಮಕ್ಕಳ ಗಮನಕ್ಕೆ ಬಾರದಂತೆಯೇ ಕಲಿಸುತ್ತಾಳೆ.

    ಪಟ್ಟಣದಲ್ಲಿ ತಂದೆ-ತಾಯಿಯ ಜತೆ ಬೆಳೆಯುತ್ತಿದ್ದ ಏಕೈಕ ಪುತ್ರನನ್ನು ಬೇಸಿಗೆ ಶಿಬಿರಕ್ಕೆ ಸೇರಿಸುವುದೆಂದು ನಿರ್ಧರಿಸಲಾಗಿತ್ತು. ಅನಿವಾರ್ಯ ಕಾರಣಕ್ಕಾಗಿ ಆತನನ್ನು ಅಜ್ಜಿ ಮನೆಗೆ ಕಳುಹಿಸಬೇಕಾದ ಪ್ರಸಂಗ ಬರುತ್ತದೆ. ಹಾಗೆ, ರಜಾದಲ್ಲಿ ಅಜ್ಜಿ ಮನೆಗೆ ಹೋಗಿ ಬಂದ ಮೇಲೆ ಆತನಲ್ಲಾದ ಬದಲಾವಣೆಯನ್ನು ಗಮನಿಸಿದ ತಾಯಿಗೆ ಆಶ್ಚರ್ಯ. ಯಾಕೆಂದರೆ ಮೊದಲು ಆತನ ಊಟ ತಿಂಡಿಯ ತಟ್ಟೆಗಳನ್ನು, ಬಟ್ಟೆಯನ್ನೂ ತಾಯಿ ಒಗೆದುಕೊಡಬೇಕಿತ್ತು. ಶಾಲೆಗೆ ಹೋಗುವಾಗ ಬುತ್ತಿಯನ್ನಲ್ಲದೆ ಬ್ಯಾಗ್, ಶೂ, ಅಂಗಿ ಎಲ್ಲವನ್ನೂ ಅಮ್ಮನೇ ತಯಾರು ಮಾಡಿ ಕೊಡಬೇಕಾಗಿತ್ತು. ಆದರೆ, ಅಜ್ಜಿ ಮನೆಯಿಂದ ಮರಳಿ ಬಂದ ಮೇಲೆ ಮಗ ತಾನು ತಿಂದ ಊಟದ ತಟ್ಟೆಗಳನ್ನು ತಾನೇ ತೊಳೆಯತೊಡಗಿದ. ಬಟ್ಟೆಗಳನ್ನು ತೊಳೆಯುವುದು, ಜೋಡಿಸುವುದು, ಮನೆಯನ್ನು ಚೊಕ್ಕ ಮಾಡುವುದರಲ್ಲಿ ತಾಯಿಗೂ ನೆರವಾಗಲು ಆರಂಭಿಸಿದ. ಇದಕ್ಕೆ ಮೂಲ ಕಾರಣ ಅಜ್ಜಿಯ ಮನೆಯಲ್ಲಿನ ವಾತಾವರಣ ಎಂದು ತಿಳಿದ ಹೆತ್ತವರು ಮುಂದಿನ ವರ್ಷವೂ ಅಜ್ಜಿ ಮನೆಗೇ ಆತನನ್ನು ಕಳುಹಿಸುವುದು ಎಂದು ತಮ್ಮಲ್ಲೇ ಗುಟ್ಟಾಗಿ ಮಾತಾಡಿಕೊಂಡಿದ್ದರು.

    ಅಜ್ಜಿ ಮನೆಯೆಂದರೆ ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯ ನಂಬಿಕೆಗಳ ಬೀಡು. ಈಗಿನ ಸಣ್ಣ ಕುಟುಂಬಗಳಲ್ಲಿ ಮಕ್ಕಳು ಅಜ್ಜ-ಅಜ್ಜಿ ಮಾತ್ರವಲ್ಲದೆ ಅತ್ತೆ ಮಾವ, ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಮ್ಮ-ದೊಡ್ಡಪ್ಪ ಹೀಗೆ ಬಂಧು-ಬಳಗದವರ ಪ್ರೀತಿಯಿಂದ ವಂಚಿತರಾಗುತ್ತಾರೆ. ಮಕ್ಕಳಿಗೆ ಅವರು ಹೇಗೆ ಸಂಬಂಧಿಕರು? ತಾಯಿಯ ಕಡೆಯವರೋ, ತಂದೆಯ ಕಡೆಯವರೋ ಎಂದು ತಿಳಿಯದೆ ಎಲ್ಲರನ್ನೂ ಒಂದೇ ತೆರನಾಗಿ ಅಂಕಲ್-ಆಂಟಿ ಎಂದು ಹೇಳಿ ಸಣ್ಣದರಲ್ಲೇ ಮಾತು ಮುಗಿಸುತ್ತಾರೆ.

    ನಮ್ಮ ಪರಿಚಿತರೊಬ್ಬರು ಹೇಳುತ್ತಿದ್ದರು. ಕೆಲವು ಮನೆಗಳಿಗೆ ಭೇಟಿ ನೀಡಿದಾಗ ಮನೆಯವರಲ್ಲಿ ಉಭಯಕುಶಲೋಪರಿ, ಚಹಾ ತಿಂಡಿ ಆದರೂ ಮಕ್ಕಳು ತಮ್ಮ ಕೋಣೆಯಿಂದ ಹೊರಗೆ ಬಂದು ಯಾರು ಬಂದಿದ್ದಾರೆ? ಎಂದು ನೋಡುವುದೂ ಇಲ್ಲವಂತೆ. ಇನ್ನು ಕೆಲವು ಮಕ್ಕಳು ಕೋಣೆಯಿಂದ ಹೊರ ಬಂದು ಹಾಯ್ ಮಾಡಿ ಹೋಗುವವರಿದ್ದಾರೆ. ಕೆಲವು ಮಕ್ಕಳು ಮಾತ್ರ ಅತಿಥಿಗಳೊಡನೆ ನಾಲ್ಕು ಮಾತುಗಳನ್ನಾಡುತ್ತಾರೆ. ಹೀಗಾದರೆ ಅವರ ಮನೆಗೆ ಹೋಗಲು ಕೂಡ ಕಸಿವಿಸಿಯಾಗುತ್ತದೆ ಎಂದಿದ್ದರು.

    ನಮ್ಮ ಬಾಲದಲ್ಲಿ ಮನೆಗೆ ಅತಿಥಿಗಳು ಬರುವುದೇ ಅಪರೂಪ. ಬಂದರೂ ಅವರು ಏನೇನು ತಿಂಡಿ ತಂದಿದ್ದಾರೆ ಎಂಬ ಕುತೂಹಲ. ಮೊದಮೊದಲಿಗೆ ಅವರೊಡನೆ ಮಾತನಾಡಲು ನಾಚಿಕೆಯ ಜತೆ ಭಯವಾದರೂ, ಒಂದೆರಡು ದಿನಗಳಲ್ಲಿ ಅವರು ಮನೆಯವರೇ ಎಂಬಂತೆ ಆತ್ಮೀಯತೆ ಬೆಳೆದಿರುತ್ತದೆ.

    ಹಿಂದೆ ಸಂಬಂಧಿಕರಲ್ಲಿಗೆ ಯಾವಾಗ ಹೋದರೂ ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದರು. ಸೌಲಭ್ಯ, ಅನುಕೂಲ ಹಾಗೂ ಸುಖಗಳು ಹೆಚ್ಚಿದಂತೆ ಹಾಗೆ ಅಂತಹ ಆತ್ಮೀಯತೆಗಳೂ ಬರಬರುತ್ತಾ ಕಮ್ಮಿಯಾಗುತ್ತಿವೆ ಎಂದು ಭಾಸವಾಗುತ್ತದೆ. ಈಗ ಫೋನ್ ಕರೆ ಮಾಡಿಯೇ ಹೋಗಬೇಕು. ಕಾರಣ ಗಂಡ-ಹೆಂಡತಿ ದುಡಿಯಲು ಹೋಗುತ್ತಾರೆ. ಮಕ್ಕಳು ಶಾಲೆಯಲ್ಲಿ ಇಲ್ಲವೇ ಬೇಬಿ ಸಿಟಿಂಗ್​ನಲ್ಲಿರುತ್ತಾರೆ. ಬಾಡಿಗೆ ಮನೆಯಲ್ಲಿರುವವರ ಮನೆಗೆ ನೆಂಟರೇನಾದರೂ ಬಂದರೆ ಅಯ್ಯೋ ಇವರು ಯಾವಾಗ ಇಲ್ಲಿಂದ ಹೋಗುತ್ತಾರೆ? ಎಂದೆನಿಸುತ್ತದೆ. ಕಾರಣವಿಷ್ಟೇ, ಪುಟ್ಟದಾದ ಮನೆ ಒಂದು ಕಡೆಯಾದರೆ ಬಾಡಿಗೆ ಮನೆಯ ಮಾಲಕರ ಕಿರಿಕಿರಿ, ಜತೆಗೆ ನೀರು, ವಿದ್ಯುತ್, ರೇಷನ್, ಹೀಗೆ ಹಲವು ಸಂಕಷ್ಟಗಳು ಎದುರಾಗುತ್ತವೆ.

    ಹಳ್ಳಿಯಲ್ಲಿರುವ ಬಂಧುಗಳ ಮನೆಗೆ ಹೋಗುವುದರಷ್ಟು ಖುಷಿ ಬೇರೆಲ್ಲೂ ಸಿಗಲಾರದು. ಅಲ್ಲಿನ ಪರಿಸರ ಕಣ್ಮನ ಸೆಳೆದರೆ ಮನೆಯವರ ಪ್ರೀತ್ಯಾದರಗಳು ಸಂಬಂಧಗಳನ್ನು ಮತ್ತಷ್ಟು ಬಿಗಿ ಮಾಡುತ್ತವೆ. ಈಗಿನ ಮಕ್ಕಳು ರಜೆಯಲ್ಲಿ ನೆಂಟರಿಷ್ಟರ ಮನೆಗೆ ಹೋಗುವುದು ಬಹಳ ಅಪರೂಪವೆಂದು ಕಾಣುತ್ತದೆ. ಹೆತ್ತವರೂ ಕೂಡ ಮಗ/ಮಗಳು ಮುಂದಿನ ವರ್ಷ ಎಸ್.ಎಸ್.ಎಲ್.ಸಿ. ಅದಕ್ಕಾಗಿ ಈಗಿನಿಂದಲೇ ಕೋಚಿಂಗ್ ಪಡೆಯಬೇಕೆಂದು ಕೋಚಿಂಗ್ ಕ್ಲಾಸ್​ಗೆ ಸೇರಿಸುತ್ತಾರೆ. ಇಲ್ಲವೇ ಬೇಸಿಗೆ ಶಿಬಿರಗಳಿಗೆ ಕಳುಹಿಸುತ್ತಾರೆ. ಮಕ್ಕಳನ್ನು ಉತ್ತಮ ಖಾಸಗಿ ಶಾಲೆಗಳಿಗೆ ಕಳುಹಿಸಿ ಧನ್ಯತೆ ಪಡೆಯುವವರೇ ಹೆಚ್ಚು. ಹಿಂದೆ ಕಾನ್ವೆಂಟ್​ಗೆ ಅಂದರೆ ಕ್ರೈಸ್ತ ವಿದ್ಯಾಸಂಸ್ಥೆಗಳಿಗೆ ಮಕ್ಕಳನ್ನು ಕಳುಹಿಸುವುದು ಹೆಮ್ಮೆಯ ಕರ್ತವ್ಯವೆಂದೇ ತಿಳಿಯಲಾಗುತ್ತಿತ್ತು. ಕಾರಣ ಅಲ್ಲಿ ಶಿಸ್ತಿನ ಪಾಠದೊಂದಿಗೆ ಶಿಕ್ಷೆಯ ಮೂಲಕ ಮಕ್ಕಳನ್ನು ತಿದ್ದುತ್ತಾರೆಂಬ ಭಾವನೆ ಇತ್ತು. ನಮ್ಮ ಸಂಸ್ಥೆಯ ಓರ್ವ ಅಧ್ಯಾಪಕರು ಹೇಳುತ್ತಿದ್ದಂತೆ ಶಿಕ್ಷೆಯಿಂದ ಬದಲಾವಣೆ ಸಾಧ್ಯವಿಲ್ಲ. ಬದಲಾಗಿ ಹೇಗೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದೆಂಬ ಯುಕ್ತಿಯನ್ನು ಮಕ್ಕಳು ಕಲಿತುಕೊಳ್ಳುತ್ತಾರೆ ಎಂದಿದ್ದರು.

    ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಓದುತ್ತಿದ್ದ ಒಂದನೇ ತರಗತಿಯ ಹುಡುಗ ಒಂದು ದಿನ ಕುಡಿಯುವ ನೀರಿನ ಬಾಟಲಿಯನ್ನು ಶಾಲೆಯಲ್ಲಿಯೇ ಬಿಟ್ಟು ಮನೆಗೆ ಬಂದನು. 4 ದಿನಗಳವರೆಗೆ ಹೊಸ ನೀರಿನ ಬಾಟಲಿ ಕೊಟ್ಟು ತಾಯಿ ಮಗುವಿಗೆ ಚೆನ್ನಾಗಿ ಬೈದು (ಶಿಕ್ಷಿಸಿ) ಬಾಟಲಿ ಹೇಗೆ ಕಳೆದುಕೊಳ್ಳುತ್ತಾನೆ ಎಂದು ತಿಳಿಯಲು ಶಾಲೆಗೆ ಹೋಗಿ ಅಧ್ಯಾಪಕಿಯನ್ನು ವಿಚಾರಿಸುತ್ತಾಳೆ. ಅಧ್ಯಾಪಕಿ, ನಮ್ಮ ಶಾಲೆಯಲ್ಲಿ ಎಲ್ಲರೂ ನಿರ್ದಿಷ್ಟ ಗಾತ್ರದ, ವಿನ್ಯಾಸದ ನೀರಿನ ಬಾಟಲಿ ಉಪಯೋಗಿಸಬೇಕು. ಅದಕ್ಕಾಗಿ ನಾವೇ ಬಾಟಲಿಯನ್ನು ತೆಗೆದಿರಿಸಿದ್ದೆವು ಎಂದರು. ‘ಒಂದು ಚೀಟಿಯಲ್ಲಿ ಕಳುಹಿಸಬಹುದಿತ್ತು ಅಥವಾ ಮಗುವಿನಲ್ಲಿ ಸಂರ್ಪಸುವಂತೆ ತಿಳಿಸಬಹುದಿತ್ತು’ ಎಂದಾಗ ‘ನೋಡಿ, ಈಗ ವಿಚಾರಿಸಲು ಬಂದಿರಲ್ಲ ಹಾಗೆ ಬರುತ್ತಾರೆಂದು ನಮಗೆ ಗೊತ್ತಿದ್ದುದರಿಂದಲೇ ಈ ವ್ಯವಸ್ಥೆ ಮಾಡಿದ್ದೆವು’ ಎಂದರು. ನಂತರ ಆ ಶಾಲೆಯನ್ನು ಬದಲಾಯಿಸಿದ್ದು ನನಗೆ ತಿಳಿಯಿತು. ಇಂತಹ ಅನೇಕ ಘಟನೆಗಳಿವೆ.

    ಪಠ್ಯ ಪುಸ್ತಕದಲ್ಲಿ ಮಾತ್ರವಲ್ಲದೆ ಸುತ್ತ ಮುತ್ತಲಿನ ಪರಿಸರದಲ್ಲಿ, ಹಳ್ಳಿಗಾಡುಗಳಲ್ಲಿ, ಜೊತೆಗೆ ಮನೆಯಲ್ಲಿ, ಸಮಾಜದಲ್ಲಿ ಕಲಿಯಬಹುದಾದ ವಿಚಾರಗಳು ಸಾಕಷ್ಟಿವೆ. ಅದಕ್ಕಾಗಿ ಪ್ರವಾಸ, ಬಂಧು-ಮಿತ್ರರ ಭೇಟಿ, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆ ಹೀಗೆ ಅನೇಕ ಸಂಗತಿಗಳು ಸಹಕಾರಿಯಾಗುತ್ತವೆ. ಈಗ ಶೈಕ್ಷಣಿಕ ವರ್ಷ ಮುಗಿದು ರಜೆಸಿಕ್ಕಿದೆ. ರಜಾ ಸಮಯವನ್ನು ಮಕ್ಕಳು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಲಿ. ಹೆತ್ತವರು ಕೂಡ ಈ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕಿಕೊಂಡು ಮಕ್ಕಳನ್ನು ಕ್ರಿಯಾಶೀಲರನ್ನಾಗಿಸಲಿ.

    (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

    ಭಾಜಪದ ಮತ್ತೊಂದು ವಿಕೆಟ್ ಪತನ, ಶೆಟ್ಟರ್​ ಬಿಜೆಪಿಗೆ ಗುಡ್​ಬೈ; ನಾಳೆಯೇ ರಾಜೀನಾಮೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts