

ಬೆಂಗಳೂರು: ಒಳಮೀಸಲಾತಿ ಕುರಿತಂತೆ ಸರ್ಕಾರದ ಮುಂದಿರುವ ನ್ಯಾ.ಸದಾಶಿವ ಆಯೋಗದ ವರದಿ ಜಾರಿ ವಿಚಾರದಲ್ಲಿ ಒಂದಷ್ಟು ಬಿರುಸಿನ ಬೆಳವಣಿಗೆ ನಡೆದಿದ್ದು, ಗುರುವಾರ ಎರಡು ಪ್ರಮುಖ ಸಭೆ ನಡೆದಿವೆ. ಆ ಮೂಲಕ ವರದಿ ಜಾರಿಗೆ ಇರುವ ಅಡೆತಡೆ ನಿವಾರಿಸುವ ಪ್ರಯತ್ನ ನಡೆದಿದೆ.
ವರದಿ ಜಾರಿ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿಕೆ ನೀಡಿದ ಬೆನ್ನಲ್ಲೇ, ವರದಿ ಸಮರ್ಪಕವಾಗಿಲ್ಲ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿಕೆ ನೀಡಿದ್ದರು. ಹೀಗಾಗಿ ಈ ವಿಚಾರದಲ್ಲಿ ಗೊಂದಲ ಉಂಟಾಗದಂತೆ ನೋಡಿಕೊಳ್ಳುವ ಪ್ರಯತ್ನ ಆರಂಭವಾಗಿದೆ. ಆರ್‌ಎಸ್‌ಎಸ್ ಕಚೇರಿಯಲ್ಲಿ ಸುಮಾರು ಎರಡು ಗಂಟೆ ಬಿಜೆಪಿಯಲ್ಲಿನ ಮಾದಿಗ ಸಮುದಾಯದ ಜನಪ್ರತಿನಿಧಿಗಳು ಹಾಗೂ ಮುಖಂಡರ ಸಭೆ ನಡೆಸಿ ವರದಿ ಕುರಿತಾಗಿ ವಿಮರ್ಶೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಒಳಮೀಸಲಾತಿ ಸಂಬಂಧ ನ್ಯಾಯಾಲಯ ಅಭಿಪ್ರಾಯ ನೀಡಿದ್ದು, ಮುಂದೆ ಏನೇ ತೀರ್ಪು ಬಂದರೂ ಸರಿಯೇ, ಸದಾಶಿವ ಆಯೋಗದ ವರದಿ ಜಾರಿಯಾಗಿ ಮಾದಿಗ ಸಮುದಾಯಕ್ಕೆ ನ್ಯಾಯ ಸಿಗಬೇಕು. ಪಕ್ಷದಲ್ಲಿರುವ ಭೋವಿ ಮತ್ತು ಲಂಬಾಣಿ ಸಮುದಾಯದ ನಾಯಕರು ವರದಿ ಜಾರಿ ಕುರಿತು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಈ ಬೆಳವಣಿಗೆಗೆ ತಡೆಹಾಕಿ ಗೊಂದಲ ನಿವಾರಿಸುವ ಕೆಲಸ ಆಗಬೇಕಾಗಿದೆ. ಆರ್‌ಎಸ್‌ಎಸ್ ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕು. ಸರ್ಕಾರ ಮತ್ತು ಪಕ್ಷದಲ್ಲಿ ವರದಿಯನ್ನು ವಿರೋಧಿಸುವವರಿಗೆ ತಿಳಿಹೇಳಿ ಗೊಂದಲ ನಿವಾರಿಸಬೇಕು ಎಂದು ಮಾದಿಗ ಸಮುದಾಯದ ಪ್ರಮುಖರು ಕೋರಿಕೆ ಇಟ್ಟಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರ ವರದಿ ಜಾರಿ ಮಾಡದೇ ಮಾದಿಗ ಸಮುದಾಯಕ್ಕೆ ಅವಮಾನ ಮಾಡಿದೆ. ಇದರ ಪ್ರತಿಲ ಅವರಿಗೆ ಚುನಾವಣೆಯಲ್ಲಿ ಸಿಕ್ಕಿದೆ. ನಮ್ಮ ಸಮುದಾಯದವರು ಚುನಾವಣೆಯಲ್ಲಿ ಬಿಜೆಪಿ ಪರ ನಿಂತರು. ಈಗ ಬಿಜೆಪಿ ಅಧಿಕಾರದಲ್ಲಿದ್ದು ವರದಿ ಜಾರಿಗೆ ಅವಕಾಶವಿದೆ. ಬಿಜೆಪಿಯೂ ಉದಾಸೀನ ಮಾಡಿದರೆ ಮುಂದೆ ಪರಿಣಾಮ ಎದುರಿಸಲಿ ಎಂದು ಸಭೆಯಲ್ಲಿದ್ದವರು ಎಚ್ಚರಿಸಿದ್ದಾರೆ.
ಮೀಸಲಾತಿ ವಿಚಾರದಲ್ಲಿ ಮಾದಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ, ಸದಾಶಿವ ಆಯೋಗದ ವರದಿ ಜಾರಿ ಆಗಬೇಕೆಂದು ಸಭೆಯಲ್ಲಿದ್ದ ಪ್ರಮುಖರು ಅಭಿಪ್ರಾಯವನ್ನೂ ನೀಡಿದ್ದಾರೆ. ಹಾಗೆಯೇ ಯಾರು ವಿರೋಧ ವ್ಯಕ್ತಪಡಿಸುತ್ತಿದ್ದಾರೋ ಅವರನ್ನು ಕರೆಸಿ ಮಾತನಾಡಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಭರವಸೆ ನೀಡಿದ್ದಾರೆ.
ಸಭೆಯಲ್ಲಿ ಆರ್‌ಎಸ್‌ಎಸ್ ಕಡೆಯಿಂದ ಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ, ಪ್ರಾಂತಕಾರ್ಯವಾಹ ಸುಧೀರ್, ವಾದಿರಾಜ್ ಇದ್ದರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದ ನಾರಾಯಣ ಸ್ವಾಮಿ, ಶಾಸಕರಾದ ದುರ್ಯೋಧನ ಐಹೊಳೆ, ಬಸವರಾಜ ಮತಿಮುಡ, ಮಾದಿಗ ಸಮುದಾಯದ ಹೋರಾಟಗಾರರಾದ ಬಳ್ಳಾರಿ ಹನುಮಂತಪ್ಪ, ಮುತ್ತಣ್ಣ ಬೆನ್ನೂರು ಇದ್ದರು.