ಕಳೆದ ವರ್ಷಕ್ಕಿಂತ ಶೇ. 12.5 ಹೆಚ್ಚು ಲಾಭ ದಾಖಲಿಸಿದ ರಿಲಯನ್ಸ್​ ಇಂಡಸ್ಟ್ರೀಸ್​!

ಋಈಳ
Published on

ನವದೆಹಲಿ: ಮುಕೇಶ್​ ಅಂಬಾನಿ ಒಡೆತನದ ರಿಲಯನ್ಸ್​ ಇಂಡಸ್ಟ್ರೀಸ್​ ಸಂಸ್ಥೆ 2020ರ ಅಕ್ಟೋಬರ್​ನಿಂದ ಡಿಸೆಂಬರ್​ ತಿಂಗಳವರೆಗಿನ ತ್ರೈಮಾಸಿಕ ವರದಿ ಬಿಡುಗಡೆ ಮಾಡಿದೆ. ಈ ಮೂರು ತಿಂಗಳಲ್ಲಿ ಕಳೆದ ತ್ರೈಮಾಸಿಕಕ್ಕಿಂತ ಸುಮಾರು ಶೇ. 40ಕ್ಕಿಂತ ಹೆಚ್ಚು ಲಾಭ ಹಾಗೂ ಕಳೆದ ವರ್ಷದ ಮೂರನೇ ತ್ರೈಮಾಸಿಕಕ್ಕಿಂತ ಶೇ. 12.5 ಹೆಚ್ಚು ಲಾಭ ಪಡೆದುಕೊಂಡಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

ಮೂರು ತಿಂಗಳಲ್ಲಿ ಸಂಸ್ಥೆಗೆ 1,37,829 ಕೋಟಿ ರೂಪಾಯಿ ಆದಾಯ ಬಂದಿದೆ. ಕಳೆದ ತ್ರೈಮಾಸಿಕಕ್ಕಿಂತ ಈ ತ್ರೈಮಾಸಿಕ ಆದಾಯ ಶೇ. 7.4 ಹೆಚ್ಚಳ ಕಂಡಿದೆ. ಈ ತ್ರೈಮಾಸಿಕದಲ್ಲಿ 15,015 ಕೋಟಿ ರೂಪಾಯಿ ಲಾಭ ಸಿಕ್ಕಿದೆ. ಇದು ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ. 41.6 ಅಧಿಕವಾಗಿದೆ. ಕಳೆದ ವರ್ಷದ ಮೂರನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ. 12.5 ಏರಿಕೆಯಾಗಿದೆ.

ತೈಲ ಮಾರುಕಟ್ಟೆಯಲ್ಲಿ ಸಂಸ್ಥೆಗೆ ಕಳೆದ ವರ್ಷಕ್ಕಿಂತ ಈ ವರ್ಷ ನಷ್ಟ ಉಂಟಾಗಿದೆ. ಕಳೆದ ವರ್ಷದ 3ನೇ ತ್ರೈಮಾಸಿಕ್ಕೆ ಹೋಲಿಸಿದರೆ ಈ ವರ್ಷ 3ನೇ ತ್ರೈಮಾಸಿಕದಲ್ಲಿ ತೈಲ ಮಾರುಕಟ್ಟೆಯ ಆದಾಯದಲ್ಲಿ ಸಂಸ್ಥೆಯು ಶೇ. 22 ಇಳಿಕೆ ಕಂಡಿದೆ. ತೈಲದಿಂದ 1.23 ಲಕ್ಷ ಕೋಟಿ ರೂಪಾಯಿ ಆದಾಯ ಬಂದಿರುವುದಾಗಿ ತಿಳಿಸಲಾಗಿದೆ. ಶೇರು ಮಾರುಕಟ್ಟೆಯಲ್ಲೂ ಸೆಪ್ಟೆಂಬರ್​ಗೆ ಹೋಲಿಸಿದರೆ ಇಳಿಕೆ ಕಂಡುಬಂದಿದೆ.

ರಿಲಯನ್ಸ್​ನ ಹಲವು ಕಂಪನಿಗಳಲ್ಲಿ ಆದಾಯ ಹೆಚ್ಚಳ ಮತ್ತು ಇಳಿಕೆ ಎರಡೂ ಕಂಡುಬಂದಿದೆ. ಜಿಯೋ ಆದಾಯದಲ್ಲಿ ಚೇತರಿಕೆ ಉಂಟಾಗಿದೆ. ಸಂಸ್ಥೆ ಶೇಕಡಾ 32.88 ಷೇರನ್ನು ಹೂಡಿಕೆದಾರರಿಗೆ ಕೊಟ್ಟಿದ್ದು ಅದರಿಂದ 1.52 ಲಕ್ಷ ಕೋಟಿ ರೂಪಾಯಿ ಆದಾಯ ಪಡೆದಿದೆ.

2020 ರ ಡಿಸೆಂಬರ್ ಅಂತ್ಯದ ವೇಳೆಗೆ ಆರ್‌ಐಎಲ್‌ನ ಬಾಕಿ ಸಾಲ 2,57,413 ಕೋಟಿ ರೂ. ಆಗಿದ್ದರೆ, ನಗದು ಮತ್ತು ನಗದು ಸಮಾನತೆಯು 2,20,524 ಕೋಟಿ ರೂ. ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net