

ಜೈಪುರ: ರಾಜಸ್ಥಾನ ಮೂಲದ 35 ವಯಸ್ಸಿನ ಮಹಿಳೆಯೊಬ್ಬಳು ಕಳೆದ ಐದು ತಿಂಗಳಲ್ಲಿ 31 ಬಾರಿ ಕರೊನಾ ಪಾಸಿಟಿವ್ಗೆ ಒಳಗಾಗುವ ಮೂಲಕ ಎಲ್ಲ ವೈದ್ಯಕೀಯ ಸಿದ್ಧಾಂತಗಳಿಗೆ ಸವಾಲಾಗೊ ಪರಿಣಮಿಸಿದ್ದಾಳೆ.
ಮಹಿಳೆಯ ಫಲಿತಾಂಶವು ಕರೊನಾ ವೈರಸ್ನ 14 ದಿನಗಳ ಇಂಕ್ಯೂಬೇಶನ್ ಅವಧಿ (ಮನುಷ್ಯನಿಗೆ ವೈರಸ್ ತಗುಲಿ ರೋಗಲಕ್ಷಣಗಳು ಪ್ರಾರಂಭಗೊಳ್ಳುವುದರ ಮಧ್ಯದ ಸಮಯ)ಗೆ ವಿರುದ್ಧವಾಗಿರುವುದು ವೈದ್ಯರಿಗೆ ಸವಾಲಾಗಿದೆ.
ಒಟ್ಟು 17 ಆರ್ಟಿ-ಪಿಸಿಆರ್ ಮತ್ತು 14 ರ್ಯಾಪಿಟ್ ಆ್ಯಂಟಿಜೆನ್ ಪರೀಕ್ಷೆಗಳಲ್ಲೂ ಮಹಿಳೆಗೆ ಕರೊನಾ ಪಾಸಿಟಿವ್ ವರದಿಯಾಗಿದೆ ಎಂದು ಮಹಿಳೆ ಉಳಿದುಕೊಂಡಿರುವ ಆಶ್ರಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿವರಣೆಗೆ ಬರುವುದಾರೆ ರೋಗಿ ಶಾರದಾ ದೇವಿ ಎಂಬಾಕೆ ರಾಜಸ್ಥಾನದ ಆಪ್ನ ಆಶ್ರಮದ ನಿವಾಸಿ. ಕಳೆದ ಆಗಸ್ಟ್ನಿಂದಲೂ ಆಶ್ರಮದಲ್ಲೇ ಉಳಿದಕೊಂಡಿದ್ದಾರೆ. ಆಶ್ರಮಕ್ಕೆ ಹೊಸದಾಗಿ ಸೇರ್ಪಡೆಗೊಂಡಿದ್ದರಿಂದ ನಿಯಮದಂತೆಯೇ ಕೋವಿಡ್ ಪರೀಕ್ಷೆ ಮಾಡಲಾಯಿತು. ವರದಿಯಲ್ಲಿ ಪಾಸಿಟಿವ್ ಬಂದಿತು. ಅಂದಿನಿಂದಲೂ ಆಕೆ ಪ್ರತ್ಯೇಕವಾಗಿದ್ದು, ಆಲೋಪತಿಕ್, ಹೋಮಿಯೋಪತಿಕ್ ಮತ್ತು ಆಯುರ್ವೇದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ. ಆದರೆ, ಪ್ರತಿ ಬಾರಿ ಟೆಸ್ಟ್ ಮಾಡಿಸಿದಾಗಲೂ ಕರೊನಾ ಪಾಸಿಟಿವ್ ಬರುತ್ತಿದೆ.
ಅಚ್ಚರಿಯೆಂದರೆ, ಕರೊನಾ ಪಾಸಿಟಿವ್ ಇದ್ದರು ಆಕೆ ಆರೋಗ್ಯವಾಗಿದ್ದಾಳೆ ಮತ್ತು 7 ರಿಂದ 8 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದಾಳೆಂದು ಆಶ್ರಮದ ವೈದ್ಯ ಡಾ. ಬಿ.ಎಂ. ಭಾರದ್ವಜ್ ತಿಳಿಸಿದ್ದಾರೆ. ಇಲ್ಲಿಗೆ ಬಂದಾಗ ಆಕೆ ತುಂಬಾ ಬಸವಳಿದಿದ್ದಳು ಮತ್ತು ಸರಿಯಾಗಿ ನಿಂತುಕೊಳ್ಳಲು ಆಗುತ್ತಿರಲಿಲ್ಲ. ಆದರೆ, ಪ್ರಸ್ತುತ ಆರೋಗ್ಯಯುತವಾಗಿರುವುದು ನಮಗೆ ಸಮಾಧಾನಕರವಾಗಿದೆ. ಆದರೆ, ಆಕೆಯ ಕೋವಿಡ್ ಸ್ಥಿತಿಯಿಂದ ಚಿಂತೆಗೀಡಾಗಿದ್ದೇವೆ ಎಂದು ವೈದ್ಯರು ಹೇಳಿದ್ದಾರೆ.
ಶಾರಾದರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ವೈದ್ಯರು ನಿರಂತರವಾಗಿ ನಿಗಾವಹಿಸಿದ್ದಾರೆ. ಆರಂಭದಲ್ಲಿ ಆಕೆಯ ಮಾನಸಿಕ ಸ್ಥಿತಿಯು ಉತ್ತಮವಾಗಿರಲಿಲ್ಲವಂತೆ. ಸದ್ಯ ಆಕೆಯಿನ್ನು ಪ್ರತ್ಯೇಕವಾಗಿ ಉಳಿದುಕೊಂಡಿದ್ದು, ಕಡಿಮೆ ಇಮ್ಯುನಿಟಿಯಿಂದಲೇ ಆಕೆಗೆ ನಿರಂತರವಾಗಿ ಕರೊನಾ ಪಾಸಿಟಿವ್ ವರದಿಯಾಗುತ್ತಿರಬಹುದೆಂದು ಡಾ. ಭಾರದ್ವಜ್ ಅಂದಾಜಿಸಿದ್ದಾರೆ. (ಏಜೆನ್ಸೀಸ್)