

ಪುಣೆ: ಪ್ರತಿದಿನ ನಾನ್ ವೆಜ್ ಇಲ್ಲ ಅಂದರೆ ಊಟಾನೇ ಸೇರಲ್ವಾ? ನಾನ್ವೆಜ್ ಆದರೆ ಎಷ್ಟು ಬೇಕಾದರೂ ತಿನ್ನುತ್ತೇನೆ ಎನ್ನುವ ಭರವಸೆ ನಿಮಗಿದಿಯಾ? ಹಾಗಾದರೆ ಇಲ್ಲಿದೆ ಒಂದು ಶುಭ ಸುದ್ದಿ. 1 ಗಂಟೆಯಲ್ಲಿ ಒಂದು ಥಾಲಿಯನ್ನು ತಿಂದು ಮುಗಿಸಿದರೆ ನಿಮಗೆ ಸಿಗುತ್ತೆ ಒಂದು ಬುಲೆಟ್ ಬೈಕ್!
ಹೌದು! ಇಂತದ್ದೊಂದು ಆಫರ್ನ್ನು ಮಹಾರಾಷ್ಟ್ರದ ಪುಣೆ ನಗರದಲ್ಲಿರುವ ಹೋಟೆಲ್ ಒಂದು ನೀಡುತ್ತಿದೆ. ಅತುಲ್ ವೈಕರ್ ಮಾಲೀಕತ್ವದ ಶಿವರಾಜ್ ಹೋಟೆಲ್ನಲ್ಲಿ ಇಂತದ್ದೊಂದು ವಿಶೇಷ ಆಫರ್ ಇದೆ. ನಾಲ್ಕು ಕೆಜಿ ಮಾಂಸದಿಂದ ತಯಾರಿಸಲಾಗಿರುವ ಥಾಲಿ ಒಂದನ್ನು 60 ನಿಮಿಷಗಳಲ್ಲಿ ತಿಂದು ಮುಗಿಸಿದರೆ ನಿಮಗೆ 1.65 ಲಕ್ಷ ರೂಪಾಯಿ ಬೆಲೆಯ ಬುಲೆಟ್ ಬೈಕ್ನ್ನು ಉಚಿತವಾಗಿ ಕೊಡಲಾಗುತ್ತದೆ.
ಈ ಥಾಲಿಯಲ್ಲಿ ಚಿಕನ್, ಮಟನ್, ಫ್ರಾನ್ಸ್, ಮೀನು ಇರಲಿದೆ. ಒಟ್ಟು 12 ತರದ ಖಾದ್ಯವನ್ನು ಕೊಡಲಾಗುವುದು. ಫ್ರೈಡ್ ಸುರ್ಮೈ, ಪೊಮ್‌ಫ್ರೆಟ್ ಫ್ರೈಡ್ ಫಿಶ್, ಚಿಕನ್ ತಂದೂರಿ, ಡ್ರೈ ಮಟನ್, ಗ್ರೇ ಮಟನ್, ಚಿಕನ್ ಮಸಾಲಾ ಮತ್ತು ಕೊಲಂಬಿ (ಸೀಗಡಿ) ಬಿರಿಯಾನಿ ಮುಂತಾದ ಭಕ್ಷ್ಯಗಳನ್ನು ನೀವು ಸೇವಿಸಬೇಕು. ಈ ಭಕ್ಷ್ಯಗಳ ತಯಾರಿಗೆ ಬರೋಬ್ಬರಿ 55 ಜನರ ತಂಡವೇ ಇದೆಯಂತೆ. ಕೇವಲ 2500 ರೂಪಾಯಿ ಕೊಟ್ಟು ಬುಲೆಟ್ ಥಾಲಿ ಖರೀದಿಸಿ, ಒಂದು ಗಂಟೆಯೊಳಗೆ ಒಬ್ಬರೇ ಕುಳಿತು ಥಾಲಿಯನ್ನು ತಿಂದು ಮುಗಿಸಿದರೆ ನಿಮಗೆ ಬುಲೆಟ್ ಫ್ರೀ.
ಹೋಟೆಲ್ಗೆ ಜನರನ್ನು ಹೇಗೆ ಆಕರ್ಷಿಸಬೇಕು ಎಂದು ಯೋಚಿಸುತ್ತಿದ್ದಾಗ ಈ ರೀತಿಯ ಕಾಂಪಿಟೇಷನ್ ಐಡಿಯಾ ಅತುಲ್ಗೆ ಹೊಳೆಯಿತಂತೆ. ಅದಕ್ಕಾಗಿ ಐದು ಬುಲೆಟ್ ಬೈಕ್ಗಳನ್ನು ಖರೀದಿಸಿ ಹೋಟೆಲ್ನಲ್ಲಿ ಇಟ್ಟಿದ್ದಾರೆ. ಅದಕ್ಕಾಗಿ ವಿಶೇಷ ಬ್ಯಾನರ್ ಮಾಡಿಸಲಾಗಿದೆ. ವಿಶೇಷ ಮೆನು ಕಾರ್ಡ್ನಲ್ಲಿ ಅದರ ಬಗ್ಗೆ ಮಾಹಿತಿ ನೀಡಲಾಗಿದೆ.
ಈ ಹೋಟೆಲ್ನಲ್ಲಿ ಕೇವಲ ಬುಲೆಟ್ ಥಾಲಿ ಮಾತ್ರವಲ್ಲ, ರಾವಣ್ ಥಾಲಿ, ಮಲ್ವಾನಿ ಫಿಶ್ ಥಾಲಿ, ಪಹೇಲ್ವಾನ್ ಮಟನ್ ಥಾಲಿ, ಬಕಾಸೂರ್ ಚಿಕನ್ ಥಾಲಿ ಮತ್ತು ಸರ್ಕಾರ್ ಮಟನ್ ಥಾಲಿಗಳೂ ಇವೆ. ಎಲ್ಲದಕ್ಕೂ 2500 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ.
ಎಂಟು ವರ್ಷಗಳ ಹಿಂದೆ ಉದ್ಘಾಟನೆಯಾದ ಶಿವರಾಜ್ ಹೋಟೆಲ್ ಸಾಮಾನ್ಯವಾಗಿ ಗ್ರಾಹಕರಿಗೆ ವಿಶಿಷ್ಟ ಕೊಡುಗೆಗಳನ್ನು ಪರಿಚಯಿಸುತ್ತಲೇ ಬಂದಿದೆ. ಈ ಹಿಂದೆ, 8 ಕೆಜಿ ರಾವಣ ಥಾಲಿಯನ್ನು 60 ನಿಮಿಷಗಳಲ್ಲಿ ಮುಗಿಸಲು ನಾಲ್ಕು ಜನರ ಗುಂಪಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ 5000 ರೂ.ಗಳ ನಗದು ಬಹುಮಾನವನ್ನು ನೀಡಲಾಯಿತು ಮತ್ತು ಥಾಲಿಯ ಬಿಲ್ ಕ್ಯಾನ್ಸಲ್ ಮಾಡಲಾಗಿತ್ತು.
ಈಗಿನ ಈ ಬುಲೆಟ್ ಥಾಲಿ ಸ್ಪರ್ಧೆಯಲ್ಲಿ ಈಗಾಗಲೇ ಒಂದು ಬುಲೆಟ್ನ್ನು ಬಹುಮಾನವಾಗಿ ನೀಡಲಾಗಿದೆ. ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ನಿವಾಸಿ ಸೋಮನಾಥ್ ಪವಾರ್ ಅವರು ಬುಲೆಟ್ ಥಾಲಿಯನ್ನು ಒಂದು ಗಂಟೆಯೊಳಗೆ ಮುಗಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ತಿಳಿಸಲಾಗಿದೆ. (ಏಜೆನ್ಸೀಸ್)