

ಲಖನೌ: ಕರೊನಾ ನಂತರದಲ್ಲಿ ದೇಶವನ್ನು ಮತ್ತೊಮ್ಮೆ ಬೆಚ್ಚಿ ಬೀಳುವಂತೆ ಮಾಡಿದ್ದು ಹಕ್ಕಿ ಜ್ವರ. ದೆಹಲಿ ಸೇರಿ ಅನೇಕ ರಾಜ್ಯಗಳು ಹಕ್ಕಿ ಜ್ವರಕ್ಕೆ ಹೆದರಿದ್ದು, ಚಿಕನ್, ಮೊಟ್ಟೆ ತಿನ್ನಬೇಡಿ ಎಂದು ಜನರಿಗೆ ಎಚ್ಚರಿಕೆ ನೀಡಿವೆ. ಅದರಂತೆ ಉತ್ತರ ಪ್ರದೇಶ ಸರ್ಕಾರವೂ ಚಿಕನ್ ಮೊಟ್ಟೆ ಬ್ಯಾನ್ ಮಾಡಿತ್ತು. ಆದರೆ ಇದೀಗ ಬ್ಯಾನ್ ತೆಗೆದಿರುವ ಸರ್ಕಾರ ಕೆಲ ಮುನ್ಸೂಚನೆಗಳನ್ನು ನೀಡಿದೆ.
ಯಾವುದೇ ಪ್ರಾಣಿಯ ದೇಹದಲ್ಲಿರುವ ಎಚ್5ಎನ್1 ಬ್ಯಾಕ್ಟೀರಿಯಾ ಉಷ್ಣತೆಯನ್ನು ತಡೆದುಕೊಳ್ಳಲಾರದು. 70 ಡಿಗ್ರಿ ಸೆಲ್ಸಿಯಸ್ನಲ್ಲಿ ಕೇವಲ 3 ಸೆಕೆಂಡ್ ಬೇಯಿಸಿದರೂ ಅದರಲ್ಲಿರುವ ಬ್ಯಾಕ್ಟೀರಿಯ ಸತ್ತು ಹೋಗುತ್ತದೆ. ಬೇಯಿಸಿದ ನಂತರ ಚಿಕನ್, ಮೊಟ್ಟೆ ತಿನ್ನುವುದರಿಂದ ಯಾವ ಹಕ್ಕಿ ಜ್ವರ ಬರುವುದಿಲ್ಲ ಎಂದು ಉತ್ತರ ಪ್ರದೇಶದ ಪಶು ಸಂಗೋಪನಾ ಇಲಾಖೆ ತಿಳಿಸಿದೆ.
ಎಚ್5ಎನ್1 ಮಾನವನಿಗೆ ಹರಡಬಲ್ಲದು ಎನ್ನುವುದಕ್ಕೆ ಯಾವುದೇ ಪುರಾವೆಯಿಲ್ಲ. ರಾಜ್ಯದಲ್ಲಿ 2,800 ಕ್ಕೂ ಹೆಚ್ಚು ಸ್ವ್ಯಾಬ್ಗಳು ಮತ್ತು ಕನಿಷ್ಠ 1,014 ಸೀರಮ್ ಮಾದರಿಗಳ ಜೊತೆಗೆ 43 ಸತ್ತ ಪಕ್ಷಿಗಳ ಅವಶೇಷಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಅದರಲ್ಲಿ ಕೇವಲ 11 ಮಾದರಿಯಲ್ಲಿ ಹಕ್ಕಿ ಜ್ವರ ಇರುವುದು ಕಂಡುಬಂದಿದೆ. ಅಂದರೆ ಶೇ. 0.54 ಹಕ್ಕಿಗಳಲ್ಲಿ ಮಾತ್ರ ಬ್ಯಾಕ್ಟೀರಿಯಾ ಕಂಡುಬಂದಿದೆ ಎಂದು ತಿಳಿಸಲಾಗಿದೆ. (ಏಜೆನ್ಸೀಸ್)