More

    ಶವ ಪತ್ತೆಗೆ ಆಧಾರವಾದ ಕಿವಿಯೋಲೆ!19 ದಿನ ಕೊಳೆತಿದ್ದ ಮಹಿಳೆ ಮೃತದೇಹ ಹಂತಕರ ಸೆರೆ

    ದಾವಣಗೆರೆ: ನಾಲೆಯಲ್ಲಿ ಸಿಕ್ಕಿದ್ದ ಕೊಲೆ ಶಂಕಿತ, ಮಹಿಳೆಯ ಶವದ ವಿಳಾಸ ಪತ್ತೆ ಕಾರ್ಯ ಸವಾಲಾಗಿ ಪರಿಣಮಿಸಿತ್ತು. ನಾಲೆಗೆ ಬಿದ್ದು ಅದಾಗಲೇ 19 ದಿನಗಳ ಕಾಲ ನೀರಿನಲ್ಲಿ ಕೊಳೆತುಹೋಗಿದ್ದ ಶವ ದುರ್ವಾಸನೆ ಬೀರುತ್ತಿತ್ತು.
    ಪೊಲೀಸರ ತನಿಖೆಗೆ ಆಧಾರವಾಗಿದ್ದು ಮೃತದೇಹದ ಕಿವಿಯೋಲೆ! ಇದರೊಂದಿಗೆ ಮಹಿಳೆ ಗುರುತು ಹಚ್ಚಲಾಗಿ, ಕೊಲೆ ಮಾಡಿದ್ದ ಹಂತಕರಿಬ್ಬರು ಇದೀಗ ಕಂಬಿ ಎಣಿಸುತ್ತಿದ್ದಾರೆ.
    ಘಟನೆ ವಿವರ:
    ಚನ್ನಗಿರಿ ತಾಲೂಕಿನ ಕಣಿವೆಬಿಳಚಿ ಗ್ರಾಮದ ಭದ್ರಾ ನಾಲೆಯಲ್ಲಿ ಮೇ 9ರಂದು ಅಪರಿಚಿತ ಮಹಿಳೆಯ ಶವ ದೊರಕಿತ್ತು. ನೀರಗಂಟಿ ಅಣ್ಣಪ್ಪ ನೀಡಿದ ದೂರು ದಾಖಲಿಸಿಕೊಂಡ ಬಸವಾಪಟ್ಟಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.
    ಮೃತದೇಹವು ಸಂಪೂರ್ಣ ಕೊಳೆತಿತ್ತು. ಸುಮಾರು 19 ದಿನದ ಹಿಂದೆಯೇ ಎಸೆಯಲಾಗಿತ್ತು. ಕೊರಳಲ್ಲಿ ಹಗ್ಗ ಸುತ್ತಿದ ರೀತಿಯಲ್ಲಿದ್ದು, ಯಾರೋ ಕೊಲೆ ಮಾಡಿ ನಾಲೆಗೆ ಹಾಕಿರುವ ಶಂಕೆ ವ್ಯಕ್ತವಾಗಿತ್ತು.
    ದಾವಣಗೆರೆಯಲ್ಲದೆ ನೆರೆಹೊರೆಯ ಜಿಲ್ಲೆಗಳ ಕಾಣೆಯಾದ ವ್ಯಕ್ತಿಗಳ ದೂರುಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು. ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಠಾಣೆಯಲ್ಲಿ ದಾಖಲಾಗಿದ್ದ ವ್ಯಕ್ತಿ ಕಾಣೆ ಪ್ರಕರಣಕ್ಕೂ, ನಾಲೆಯಲ್ಲಿ ಸಿಕ್ಕ ಮೃತದೇಹದ ಚಹರೆಗೂ ಹೋಲಿಕೆ ಕಂಡುಬಂದು ತನಿಖೆ ಮುಂದುವರಿಸಲಾಯಿತು.
    ಸಂಬಂಧಿಕರನ್ನು ಸಂಪರ್ಕಿಸಿದಾಗ ಶಿವಮೊಗ್ಗ ಜಿಲ್ಲೆ ಅರಕೆರೆ ಗ್ರಾಮದ ನೇತ್ರಾವತಿ(47) ಎಂಬುವರ ಶವ ಎಂಬುದು ಗೋಚರಕ್ಕೆ ಬಂದಿತು. ಕೊಲೆ ಪ್ರಕರಣವನ್ನು ಎಲ್ಲಾ ಆಯಾಮಗಳಲ್ಲಿ ಕಾರ್ಯಾಚರಣೆ ನಡೆಸಲಾಗಿ, ಆರೋಪಿಗಳಾದ ಭದ್ರಾವತಿ ತಾಲೂಕು ನಾಗೊಲೆ ಗ್ರಾಮದ ಎಚ್.ಜಿ. ಕುಮಾರ ಹಾಗೂ ಅರಕೆರೆ ಗ್ರಾಮದ ಚಿದಾನಂದಪ್ಪ ಎಂಬುವರನ್ನು ಬಂಧಿಸಲಾಗಿದ್ದು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
    ಏ.20ರಂದು ಆರೋಪಿತರ ಜಮೀನಿನಲ್ಲಿದ್ದ ಅಡಕೆ ಗಿಡಗಳನ್ನು ನೇತ್ರಾವತಿ ಕಡಿದು ಹಾಕಿದ್ದರು. ಇದನ್ನು ಕಣ್ಣಾರೆ ಕಂಡಿದ್ದ ಆರೋಪಿಗಳು ಸಿಟ್ಟಿಗೆದ್ದು ಕೊಲೆ ಮಾಡಿ, ಕೈ ಕಾಲು ಕಟ್ಟಿ ಹಾಕಿ ನಾಲೆಗೆ ಎಸೆದಿದ್ದರು.
    ತನಿಖಾಧಿಕಾರಿ, ಸಂತೇಬೆನ್ನೂರು ಸಿಪಿಐ ಗೋಪಾಲ ನಾಯ್ಕ, ಬಸವಾಪಟ್ಟಣ ಠಾಣೆಯ ಪಿಎಸ್‌ಐ ಕೆ.ವೀಣಾ ಹಾಗೂ ಅವರ   ಸಿಬ್ಬಂದಿ ಈ ಪ್ರಕರಣವನ್ನು ಭೇದಿಸಿದ್ದು, ತಂಡದ ಕಾರ್ಯಾಚರಣೆಗೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts