15 ದಿನ ರಜೆ ಪಡೆದು ದೇವರ ಕೋಣೆಯಲ್ಲಿ ಬಚ್ಚಿಟ್ಟಕೊಂಡಿದ್ದ ಪೇದೆ​ ಆತ್ಮಹತ್ಯೆ! ಸಾವಿನ ಹಿಂದಿದೆ ಭಯಾನಕ ಕತೆ

Police
Published on

ಚೆನ್ನೈ: ಭೂತಕ್ಕೆ ಹೆದರಿ ಪೊಲೀಸ್​ ಕಾನ್ಸ್​ಟೇಬಲ್​ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಕಡ್ಡಲೂರು ಜಿಲ್ಲೆಯಲ್ಲಿ ನಡೆದಿದೆ.

ಪ್ರಭಾಕರನ್​ (33) ಆತ್ಮಹತ್ಯೆ ಮಾಡಿಕೊಂಡ ಪೊಲೀಸ್​ ಪೇದೆ. ಕಡ್ಡಲೂರು ಜಿಲ್ಲೆಯ ಪೆರುಂಬಕ್ಕಮ್​ ಮೂಲದ ಪ್ರಭಾಕರನ್​, ಪೊಲೀಸ್​ ಕ್ವಾಟ್ರಸ್​ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಕಡ್ಡಲೂರು ಸಶಸ್ತ್ರ ಪಡೆಯಲ್ಲಿ ಫಸ್ಟ್​ ಗ್ರೇಡ್​ ಪೊಲೀಸ್​ ಆಗಿ ಕಾರ್ಯನಿರ್ವಹಿಸುತ್ತಿದ್ದರು. ವಿಷ್ಣುಪ್ರಿಯ ಎಂಬುವರನ್ನು ಮದುವೆಯಾಗಿದ್ದ ಪ್ರಭಾಕರನ್​ಗೆ ಇಬ್ಬರು ಮಕ್ಕಳಿದ್ದಾರೆ.

ಪ್ರಭಾಕರನ್​ ಪತ್ನಿ ವಿಷ್ಣುಪ್ರಿಯ ಮತ್ತು ಮಕ್ಕಳು ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮೆಲ್ಪಟ್ಟಂಬಕ್ಕಮ್​ಗೆ ತೆರಳಿದ್ದರು. ಮದುವೆ ಮುಗಿಸಿಕೊಂಡು ಮನೆಗೆ ಬಂದಾಗ ಪ್ರಭಾಕರ್​ ಶವ ನೇಣು ಬಿಗಿದ ಸ್ಥಿತಿಯಲ್ಲಿರುವುದು ನೋಡಿ ಪತ್ನಿ ಮತ್ತು ಮಕ್ಕಳು ಆಘಾತಕ್ಕೆ ಒಳಗಾಗಿದ್ದರು. ತಕ್ಷಣ ಸ್ಥಳೀಯ ಧಾವಿಸಿ ಪ್ರಭಾಕರ್​ ದೇಹವನ್ನು ಕೆಳಗೆ ಇಳಿಸಿ, ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟರಲ್ಲಾಗಲೇ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿರುವ ಕಡ್ಡಲೂರು ನ್ಯೂ ಪೊಲೀಸ್​ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪ್ರಭಾಕರನ್​ ಸಹೋದ್ಯೋಗಿಗಳ ಪ್ರಕಾರ, ಭೂತವೊಂದು ಆತನನ್ನು ಕೊಲ್ಲಲು ಬಂದಿರುವುದಾಗಿ ಹೇಳಿಕೊಂಡಿದ್ದರಂತೆ. ಸಶಸ್ತ್ರ ಪಡೆ ಕ್ವಾಟ್ರಸ್​ನಲ್ಲಿ ಸೀಮೆಎಣ್ಣೆ ಸುರಿದುಕೊಂಡು ಮೃತಪಟ್ಟಿದ್ದ ಮಹಿಳೆಯೊಬ್ಬಳು ಭೂತವಾಗಿ ನನ್ನನ್ನು ಕೊಲ್ಲಲು ಬಂದಿದ್ದಾಳೆಂದು ಪ್ರಭಾಕರನ್​ ಹೇಳಿಕೊಂಡಿದ್ದರಂತೆ. 15 ದಿನ ಅನಾರೋಗ್ಯ ರಜೆ ಪಡೆದುಕೊಂಡಿದ್ದ ಪ್ರಭಾಕರ್​ ತಮ್ಮ ಮನೆಯ ದೇವರ ಕೋಣೆಯ ಒಳಗೆ ಕಳೆದಿದ್ದರಂತೆ. ರಜೆ ಮುಗಿದು ಮರಳಿ ಕೆಲಸಕ್ಕೆ ತೆರಳಿದ ಬಳಿಕ ದೆವ್ವ ಮತ್ತೆ ಹಿಂಬಾಲಿಸುತ್ತದೆ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ.

ಪ್ರಭಾಕರನ್ ಸಾವಿಗೆ ಕೆಲಸದ ಹೊರೆ ಕಾರಣ ಎಂಬುದನ್ನು ಪೊಲೀಸರು ತಳ್ಳಿಹಾಕಿದ್ದಾರೆ. ದೆವ್ವ ಭಯದಿಂದ ವಿಚಿತ್ರವಾಗಿ ವರ್ತಿಸುತ್ತಿದ್ದ ಪೊಲೀಸ್ ಪೇದೆಯೊಬ್ಬರು ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇದೀಗ ಪೊಲೀಸರಲ್ಲಿ ಸಂಚಲನ ಮೂಡಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net