

ಚೆನ್ನೈ: ಕೆಲವು ವರ್ಷಗಳಿಂದ ಭಾರತೀಯ ಚಿತ್ರರಂಗದಲ್ಲಿ ಸಾಲು ಸಾಲು ಸಾವುಗಳಿಂದ ದುರಂತಗಳ ದುರಂತ ಸಂಭವಿಸುತ್ತಲೇ ಇದೆ. ಇತ್ತೀಚೆಗಷ್ಟೇ ನಟ ಪುನೀತ್ ರಾಜ್ಕುಮಾರ್ ಹೃದಯಾಘಾತದಿಂದ ಮೃತಪಟ್ಟಿದ್ದು, ಇಡೀ ವಿಶ್ವವೇ ಅಪ್ಪು ಸಾವಿಗೆ ಕಂಬನಿ ಮಿಡಿದಿದೆ. ಇದರ ಬೆನ್ನಲ್ಲೇ ತಮಿಳಿನ ಖ್ಯಾತ ನಿರ್ದೇಶಕ ಮತ್ತು ನಟ ಆರ್ಎನ್ಆರ್ ಮನೋಹರ್ (61) ಬುಧವಾರ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ.
ತೀವ್ರ ಅನಾರೋಗ್ಯದಿಂದ ಕಳೆದ 20 ದಿನಗಳಿಂದ ಮನೋಹರ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಬುಧವಾರ (ನ.17) ರಾತ್ರಿ ನಿಧನರಾಗಿದ್ದಾರೆ.
ಮನೋಹರ್ ಅವರು ಪ್ರಖ್ಯಾತ ನಿರ್ದೇಶಕ ಕೆ.ಎಸ್. ರವಿಕುಮಾರ್ ಅವರ ಸಹಾಯಕ ನಿರ್ದೇಶಕರಾಗಿ ಸಿನಿಮಾ ವೃತ್ತಿ ಜೀವನವನ್ನು ಆರಂಭಿಸಿದರು. ಬ್ಯಾಂಡ್ ಮಾಸ್ಟರ್ ಮತ್ತು ಸೂರಿಯನ್ ಚಂದ್ರನ್ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ, ಮೈಂದನ್, ಕೊಲಂಗಲ್, ಪುಧುಮೈ ಪಿಥನ್, ಥೆನ್ನವನ್ ಹಾಗೂ ಪುನ್ನಗಲ್ ಪೂವೆ ಚಿತ್ರಗಳಿಗೆ ಸಂಭಾಷಣೆ ಮತ್ತು ಸ್ರೀನ್ಪ್ಲೇ ಬರೆದಿದ್ದಾರೆ.
2009ರಲ್ಲಿ ತೆರೆಕಂಡ ಹಾಸ್ಯ ಚಿತ್ರದ "ಮಾಸಿಲಮಣಿ" ಮೂಲಕ ಮನೋಹರ್ ಅವರು ಪೂರ್ಣ ಪ್ರಮಾಣದಲ್ಲಿ ನಿರ್ದೇಶಕರಾದರು. ಅಲ್ಲದೆ, ತಮ್ಮ ವೃತ್ತಿ ಜೀವನದಲ್ಲಿ ಅನೇಕ ಸಿನಿಮಾಗಳಲ್ಲಿಯೂ ಮನೋಹರ್ ಅಭಿನಯಿಸಿದ್ದಾರೆ. ಧಿಲ್ಲ್, ವೀರಂ, ಯೆನ್ನೈ ಅರಿಂದಾಲ್, ವೇದಾಲಂ, ನಾನುಂ ರೌಡಿ ಧಾನ್, ಮಿರುಥನ್, ಆಂದವನ್ ಕಟ್ಟಾಲೈ, ಅಚ್ಚಂ ಎಂಬಧು ಮದಮೈಯಾದ, ವಿಶ್ವಾಸಂ, ಕಾಪ್ಪನ್ ಮತ್ತು ಕೈದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಶಕ್ತಿ ಸುಂದರ್ ರಾಜನ್ ನಿರ್ದೇಶನ ಟೆಡ್ಡಿ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ಅವರು ನಟಿಸಿರುವ ವೀರಮೇ ವಾಗೈ ಸೂಡಮ್ ಚಿತ್ರ ತೆರೆಕಾಣಬೇಕಿದೆ. ಈ ಚಿತ್ರದಲ್ಲಿ ನಟ ವಿಶಾಲ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಮನೋಹರ್ ಸಾವಿನಿಂದ ಆಘಾತಕ್ಕೆ ಒಳಗಾಗಿರುವ ತಮಿಳು ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಅವರ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ. (ಏಜೆನ್ಸೀಸ್)