

ಬೆಂಗಳೂರು: ಕರೊನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಿದ್ದು, ದಾಖಲಾತಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂಬ ಅಂಶ ಶಿಕ್ಷಣ ಸ್ಥಿತಿ ಕುರಿತ ವಾರ್ಷಿಕ ವರದಿ(ಎಎಸ್ಇಆರ್) ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಕೋವಿಡ್ ಸೋಂಕಿನ ಪ್ರಮಾಣದಲ್ಲಿ ಇಳಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಾಗಿರುವ ಬದಲಾವಣೆಯ ಅಧ್ಯಯನಕ್ಕೆ ನಡೆಸಲಾದ ಸಮೀಕ್ಷೆಯಲ್ಲಿ ಈ ಅಂಶ ಕಂಡುಬಂದಿದೆ.
ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಸರಾಸರಿ ಶೇ.2.5ನಿಂದ ಶೇ.13.2ವರೆಗೆ ಏರಿಕೆಯಾಗಿದೆ. ಈ ಏರಿಕೆ ಎಲ್ಲ ವಯೋಮಾನದ ಮಕ್ಕಳ ಪ್ರಮಾಣ ಏಕಪ್ರಕಾರವಾಗಿದೆ. ಕರ್ನಾಟಕದಲ್ಲಿ ಶೇ.8.3 ಹೆಚ್ಚಳವಾಗಿದೆ.
ಕರ್ನಾಟಕದಲ್ಲಿ ಶೇ.8 ಏರಿಕೆ: ಉತ್ತರದ ರಾಜ್ಯಗಳಲ್ಲಿ ಅದರಲ್ಲೂ ದೊಡ್ಡ ರಾಜ್ಯಗಳಲ್ಲಿ ಸರ್ಕಾರಿ ಶಾಲೆಗೆ ದಾಖಲಾದ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಉತ್ತರಪ್ರದೇಶದಲ್ಲಿ ಈ ಪ್ರಮಾಣ ಶೇ.13 ಆಗಿದೆ. ಕೇರಳದಲ್ಲಿ ಶೇ.12 ಕಂಡುಬಂದಿದೆ. ತೆಲಂಗಾಣ ಹೊರತುಪಡಿಸಿ ಉಳಿದ ದಕ್ಷಿಣ ರಾಜ್ಯಗಳಲ್ಲಿ ಶೇ.8 ಏರಿಕೆ ದಾಖಲಾಗಿದೆ. ಕರ್ನಾಟಕದಲ್ಲೂ ಶೇ.8.3 ಹೆಚ್ಚಳವಾಗಿದೆ. ಜತೆಗೆ, ಟ್ಯೂಷನ್ ಮೇಲೆ ಅವಲಂಬಿತರಾಗಿರುವ ಪ್ರಮಾಣ ಕೂಡ ಏರಿಕೆಯಾಗಿದ್ದು, ಬಿಹಾರ, ಪಶ್ಚಿಮ ಬಂಗಾಳದಲ್ಲಿ ಭಾರಿ ಹೆಚ್ಚಳವಾಗಿದೆ. ಆದರೆ, ಕೇರಳದಲ್ಲಿ ಶೇ.28.8ರಿಂದ ಶೇ.18.8ಕ್ಕೆ ಇಳಿಕೆಯಾಗಿದೆ.
ಖಾಸಗಿ ಶಾಲೆಗಳಲ್ಲಿ ಇಳಿಕೆ: 2020ರಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಒಂದೇ ರೀತಿಯಾಗಿತ್ತು. ಆದರೆ, ಕಳೆದ ಸೆಪ್ಟೆಂಬರ್ ನಂತರ ಏರುಗತಿಯಲ್ಲಿ ಸಾಗಿ ಶೇ.5 ಹೆಚ್ಚಳ ದಾಖಲಿಸಿದೆ. ಕಳೆದ ಕೆಲ ವರ್ಷಗಳಿಗೆ ಹೋಲಿಸಿದಲ್ಲಿ ಖಾಸಗಿ ಶಾಲೆಗಳಲ್ಲಿ ಇದೇ ಮೊದಲ ಬಾರಿಗೆ ದಾಖಲಾತಿ ಪ್ರಮಾಣ ಕುಸಿದಿದೆ. 2020ರಲ್ಲಿ ಶೇ.28.8ರಿಂದ 2021ರಲ್ಲಿ ಶೇ.24.4ಕ್ಕೆ ಇಳಿದಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಮನೆಪಾಠ: ಕಳೆದ ವರ್ಷದ ಸಮೀಕ್ಷೆಯಲ್ಲಿ ಕಂಡುಬಂದಂತೆ ಹೆಚ್ಚಿನ ಮಕ್ಕಳು ಟ್ಯೂಷನ್ ಕ್ಲಾಸ್ಗಳ ಮೇಲೆ ಅವಲಂಬಿತರಾಗಿದ್ದಾರೆ. ಇವರ ಪ್ರಮಾಣ ಶೇ.32.5ರಿಂದ 39.2ಕ್ಕೆ ಏರಿಕೆಯಾಗಿದೆ. ಶಾಲೆಗಳು ಹೆಚ್ಚು ಕಾಲ ಮುಚ್ಚಿದ್ದರಿಂದ ಮಕ್ಕಳ ಕಲಿಕೆಗೆ ತೊಂದರೆಯಾಗದಿರಲು ಹೆಚ್ಚಿನವರು ಟ್ಯೂಷನ್ಗೆ ಮೊರೆ ಹೋಗಿರುವುದು ಸಾಮಾನ್ಯ ಪ್ರಕ್ರಿಯೆಯಾಗಿ ಪರಿಣಮಿಸಿದೆ ಎಂದು ವರದಿ ಹೇಳಿದೆ.
25 ರಾಜ್ಯಗಳಲ್ಲಿ ಸಮೀಕ್ಷೆ: ಕರೊನಾ ಹಿನ್ನೆಲೆಯಲ್ಲಿ ಭೌತಿಕವಾಗಿ ಸಮೀಕ್ಷೆ ನಡೆಸಲು ಸಾಧ್ಯವಾಗದಿರುವ ಕಾರಣ ಈ ವರ್ಷ ದೂರವಾಣಿ ಮೂಲಕ ಮಕ್ಕಳನ್ನು ಸಂಪರ್ಕಿಸಿ ಈ ಸಮೀಕ್ಷೆಯನ್ನು ನಡೆಸಿದೆ. 25 ರಾಜ್ಯಗಳ 581 ಗ್ರಾಮೀಣ ಜಿಲ್ಲೆಗಳಲ್ಲಿರುವ 5-16 ವರ್ಷದ 75,234 ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಆ ಮೂಲಕ ವರದಿ ಸಿದ್ಧಪಡಿಸಲಾಗಿದೆ ಎಂದು ಎಎಸ್ಇಆರ್ ಕೇಂದ್ರದ ನಿರ್ದೇಶಕಿ ವಿಲಿಮಾ ವಾಧ್ವಾ ಹೇಳಿದ್ದಾರೆ.
ಎಎಸ್ಇಆರ್ ತಂಡ ತರಗತಿಗಳನ್ನು ಆರಂಭಿಸಿರುವ 4,872 ಶಾಲೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ಜತೆಗೆ, ಈವರೆಗೂ ತೆರೆಯದ 2,427 ಶಾಲೆಗಳ ಪ್ರಾಂಶುಪಾಲರು, ಶಿಕ್ಷಕರಿಂದ ಅಂಕಿ-ಅಂಶಗಳನ್ನು ಕಲೆ ಹಾಕಿದೆ.
ಸ್ಮಾರ್ಟ್ಫೋನ್ಗಳಿಲ್ಲ
ಮಕ್ಕಳಲ್ಲಿ ಡಿಜಿಟಲ್ ಅಂತರ ಕಳವಳಕಾರಿಯಾಗಿದೆ ಎಂದು ವರದಿ ಹೇಳಿದೆ. ಶೇ.26.1 ಮಕ್ಕಳ ಬಳಿ ಸ್ಮಾರ್ಟ್ಫೋನ್ಗಳಿಲ್ಲ. ಅದರಲ್ಲೂ ಚಿಕ್ಕ ಮಕ್ಕಳಲ್ಲಿ ಸ್ಮಾರ್ಟ್ಫೋನ್ ಕೊರತೆ ಹೆಚ್ಚು ಕಾಡುತ್ತಿದೆ. ಇದಲ್ಲದೆ, ಶೇ.40 ಮಕ್ಕಳ ಮನೆಯಲ್ಲಿ ಸ್ಮಾರ್ಟ್ಫೋನ್ಗಳಿದ್ದರೂ ಕಲಿಕೆಗೆ ಲಭ್ಯವಾಗುತ್ತಿಲ್ಲ.
ಮಕ್ಕಳ ದಾಖಲಾತಿ ಪ್ರಮಾಣ
2018- ಶೇ.64.3
2020- ಶೇ.65.8
2021- ಶೇ.70.3
ಸರ್ಕಾರಿ ಪ್ರವೇಶಕ್ಕೆ ಕಾರಣಗಳೇನು?: - ಪಾಲಕರಿಗೆ ಆರ್ಥಿಕ ಸಂಕಷ್ಟ - ಬಜೆಟ್ ಶಾಲೆಗಳು ಕೂಡ ಬಾಗಿಲು ಮುಚ್ಚಿ - ಕಾರ್ಮಿಕರ ವಲಸೆ - ಎಲೆಕ್ಟ್ರಾನಿಕ್ ಗೆಜೆಟ್ ಕೊಡಿಸುವ ಸಾಮರ್ಥ್ಯ ಇಲ್ಲ - ಕಡಿತವಾಗಿರುವ ಶೈಕ್ಷಣಿಕ ಅವಧಿ
ಕಳೆದ ಸೆಪ್ಟೆಂಬರ್ ಹಾಗೂ ಅಕ್ಟೋಬರ್ನಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಮುಖ್ಯವಾಗಿ ಶಾಲಾ ದಾಖಲಾತಿ, ಕಲಿಕಾ ಸಂಪನ್ಮೂಲಗಳ ಲಭ್ಯತೆ, ಡಿಜಿಟಲ್ ಸಾಧನಗಳು ಹಾಗೂ ಮಕ್ಕಳಿಗೆ ಮನೆಯಲ್ಲಿ ದೊರೆಯುವ ಬೆಂಬಲವನ್ನು ಕೇಂದ್ರೀಕರಿಸಲಾಗಿತ್ತು. ಹೀಗಿದ್ದರೂ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿಲ್ಲ. ಕೆಲ ಮಹತ್ತರ ಬದಲಾವಣೆ ಕಾಣುತ್ತಿದ್ದೇವೆ. | ವಿಲಿಮಾ ವಾಧ್ವಾ, ಎಎಸ್ಇಆರ್ ನಿರ್ದೇಶಕಿ