ದೆಹಲಿ ಮಾಲಿನ್ಯ ಸುಪ್ರೀಂ ಗರಂ; ಕೇಂದ್ರ, ರಾಜ್ಯ ಸರ್ಕಾರಗಳ ಜಡತ್ವಕ್ಕೆ ನ್ಯಾಯಾಲಯ ತೀವ್ರ ಆಕ್ಷೇಪ

asdasdasd
Published on

ನವದೆಹಲಿ: ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ವಾಯುಮಾಲಿನ್ಯ ತಡೆಗಟ್ಟುವ ಬದಲು ಕಾರ್ಯಾಂಗ ಜಡತ್ವ ಪ್ರದರ್ಶಿಸುತ್ತಿದೆ. ಇದರಿಂದಾಗಿ ಪ್ರಬಲ ನೀತಿಗಳ ಕೊರತೆ ವಿಪರೀತವಾಗಿ ಕಾಡುತ್ತಿದೆ ಎಂದು ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ಹೊರಹಾಕಿದ್ದು, ಮಾಲಿನ್ಯಕ್ಕೆ ಕಡಿವಾಣ ಹಾಕಲು ಕೇಂದ್ರ ಮತ್ತು ದಿಲ್ಲಿ ಸರ್ಕಾರ ಎರಡೂ ವಿಫಲವಾಗಿವೆ ಎಂದು ಪರೋಕ್ಷವಾಗಿ ಅತೃಪ್ತಿ ಹೊರಹಾಕಿದೆ.

ದೆಹಲಿ ಮತ್ತು ಅಕ್ಕಪಕ್ಕದ ಪ್ರದೇಶಗಳ ವಾಯುಮಾಲಿನ್ಯಕ್ಕೆ ಸಂಬಂಧಿಸಿದಂತೆ 17 ವರ್ಷದ ದೆಹಲಿ ವಿದ್ಯಾರ್ಥಿ ಆದಿತ್ಯ ದುಬೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಅಭಿಪ್ರಾಯ ಹೊರಹಾಕಿದ ಸಿಜೆಐ, ಹಿಂದೆ ಅಡ್ವೊಕೇಟ್ ಜನರಲ್ ಮತ್ತು ಈಗ ಓರ್ವ ನ್ಯಾಯಮೂರ್ತಿಯಲ್ಲಿ ನಾನು ನೋಡಿರುವಂತೆ ಅಧಿಕಾರಶಾಹಿಯಲ್ಲಿ ಜಡತ್ವ ಬಲವಾಗಿ ಬೇರೂರಿಬಿಟ್ಟಿದೆ. ನ್ಯಾಯಾಲಯವೇ ಎಲ್ಲವನ್ನೂ ಮಾಡಬೇಕೆಂದು ಬಯಸುತ್ತಿದೆ. ನಾವು ನಿರ್ದೇಶನಗಳನ್ನು ನೀಡುತ್ತಿರಬೇಕು ಮತ್ತು ನಂತರ ನೀವು ಕ್ರಮ ಕೈಗೊಳ್ಳಬೇಕು. ಅಂದರೆ ಎಲ್ಲವನ್ನೂ ನಾವು ಹೇಳಿಯೇ ಮಾಡಬೇಕಾದ ಪರಿಸ್ಥಿತಿ ನಿರ್ವಣವಾಗಿದೆ ಎಂದು ವಾದಿ/ಪ್ರತಿವಾದಿ ವಕೀಲರನ್ನು ಉದ್ದೇಶಿಸಿ ಹೇಳಿದ್ದಾರೆ. ನಾವು ಏನನ್ನೂ ಮಾಡುವುದಿಲ್ಲ. ನ್ಯಾಯಾಲಯವು ನಿರ್ದೇಶನಗಳನ್ನು ನೀಡಲಿ ಮತ್ತು ನ್ಯಾಯಾಲಯ ನಿರ್ದೇಶಿಸಿದೆ ಎಂದು ನಾವು ಸರಳವಾಗಿ ಸಹಿ ಹಾಕುತ್ತೇವೆ ಎಂಬ ಮನಸ್ಥಿತಿ ಅಧಿಕಾರಶಾಹಿಯದ್ದು ಎಂದು ನ್ಯಾ.ಡಿ.ವೈ. ಚಂದ್ರಚೂಡ್ ಮತ್ತು ನ್ಯಾ. ಸೂರ್ಯಕಾಂತ್ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠ ಕಿಡಿಕಾರಿದೆ.

ಟಿವಿ ಚರ್ಚೆಗಳಿಂದ ಹೆಚ್ಚು ಮಾಲಿನ್ಯ: ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ಕಾನೂನು ಮತ್ತು ನ್ಯಾಯಾಲಯದ ವಿಚಾರಣೆ ಕುರಿತು ಟಿವಿ ಚರ್ಚೆಗಳು ನಡೆಯುತ್ತಿರುವ ರೀತಿಗೂ ನ್ಯಾಯಪೀಠ ಕೆಂಡಕಾರಿದೆ. ಟಿವಿ ವಾಹಿನಿಗಳು ಸಮಸ್ಯೆಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿವೆ. ಈ ವಿಷಯದ ಬಗ್ಗೆ ನಾವು ಮಾಡಿದ್ದ ಸಣ್ಣ ಅವಲೋಕನವನ್ನು ವಿವಾದಕ್ಕೀಡುಮಾಡಲಾಯಿತು. ಟಿವಿಯಲ್ಲಿನ ಚರ್ಚೆಗಳು ಎಲ್ಲರಿಗಿಂತ ಹೆಚ್ಚು ಮಾಲಿನ್ಯವನ್ನು ಸೃಷ್ಟಿಸುತ್ತಿವೆ ಎಂದು ಸಿಜೆಐ ಮಾಧ್ಯಮಗಳ ಬೇಜವಾಬ್ದಾರಿಗೆ ಬೇಸರ ವ್ಯಕ್ತಪಡಿಸಿದರು. ರಾಜಧಾನಿಯ ವಾಯುಮಾಲಿನ್ಯಕ್ಕೆ ಕೃಷಿ ತ್ಯಾಜ್ಯ ಸುಡುವಿಕೆ ಕಾರಣವಾಗುತ್ತಿರುವ ಬಗ್ಗೆ ದೆಹಲಿ ಸರ್ಕಾರದ ಪರ ವಕೀಲ ಡಾ. ಅಭಿಷೇಕ್ ಮನು ಸಿಂಘಿ ವಾದ ಮಂಡಿಸಿದ ಸಂದರ್ಭದಲ್ಲಿ ಸಿಜೆಐ ವಿಷಯ ಪ್ರಸ್ತಾಪಿಸಿದರು.

ವಾಯುಮಾಲಿನ್ಯಕ್ಕೆ ಕೃಷಿ ತಾಜ್ಯದ ಕೊಡುಗೆ ಬಗ್ಗೆ ನಾನು ನ್ಯಾಯಾಲಯದ ದಾರಿ ತಪ್ಪಿಸಿದ್ದೇನೆ ಎಂದು ಟಿವಿಗಳಲ್ಲಿ ಚರ್ಚೆಯಾಗಿದೆ ಎಂದು ವಕೀಲ ಸಿಂಘಿ ನ್ಯಾಯಾಲಯದ ಗಮನಸೆಳೆದಾಗ, ಈ ನ್ಯಾಯಾಲಯವನ್ನು ಯಾರೂ ತಪ್ಪುದಾರಿಗೆ ಎಳೆದಿಲ್ಲ. ನೀವು ಶೇ 10ರಷ್ಟು ಕೂಳೆ ಸುಡುವಿಕೆ ನಡೆದಿದೆ ಎಂದಿದ್ದೀರಿ. ಅದು ಶೇಕಡಾ 30 ರಿಂದ 40 ರಷ್ಟಿದೆ ಎಂದು ಅಫಿಡವಿಟ್​ನಲ್ಲಿ ದಾಖಲಿಸಲಾಗಿದೆ. ಈ ರೀತಿಯ ಟೀಕೆಗಳು ಸದಾ ಕೇಳುತ್ತಿರುತ್ತೇವೆ. ನಮ್ಮ ಆತ್ಮಸಾಕ್ಷಿ ಸ್ಪಷ್ಟವಾಗಿದ್ದು ನಾವು ಸಮಾಜದ ಏಳಿಗೆಗಾಗಿ ಕೆಲಸ ಮಾಡುತ್ತೇವೆ ಎಂದು ಸಿಜೆಐ ತಿಳಿಸಿದರು. ಇದೇ ವೇಳೆ ಕೃಷಿ ತ್ಯಾಜ್ಯ ಸುಡುವಿಕೆ ತಡೆಯಲು ಶಾಶ್ವತ ನೀತಿ ಜಾರಿಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದ ಅಭಿಷೇಕ್ ಸಿಂಘಿ, ಪ್ರತಿವರ್ಷ ಅಕ್ಟೋಬರ್, ನವೆಂಬರ್​ನಲ್ಲಿ ಮಾಲಿನ್ಯ ಏರಲು ಇದೇ ಪ್ರಮುಖ ಕಾರಣವಾಗಿದೆ ಎಂದರು.

ನ.21ಕ್ಕೆ ವಿಚಾರಣೆಯನ್ನು ಮುಂದೂಡಿದ ಸುಪ್ರೀಂ ಕೋರ್ಟ್, ನಾವು ಯಾವುದೇ ನಿರ್ದೇಶನವನ್ನು ನೀಡುತ್ತಿಲ್ಲ ಎಂಬ ಕಾರಣಕ್ಕೆ ನಿಮ್ಮ ಜವಾಬ್ದಾರಿ ಕಡಿಮೆಯಾಯಿತು ಎಂದರ್ಥವಲ್ಲ ಎಂದು ಕೇಂದ್ರದ ವಕೀಲ ತುಷಾರ್ ಮೆಹ್ತಾರನ್ನು ಉದ್ದೇಶಿಸಿ ಹೇಳಿತು. ಈ ವಿಷಯದಲ್ಲಿ ಕೇಂದ್ರ ಸರ್ಕಾರದಿಂದ ಹೆಚ್ಚನ್ನು ನಿರೀಕ್ಷಿಸುತ್ತಿದ್ದೇವೆ. ಕಚೇರಿ ಗಳಲ್ಲಿ ತನ್ನ ಉದ್ಯೋಗಿಗಳ ಬಲ ಕಡಿಮೆ ಮಾಡುವ ಜತೆಗೆ, ಸಿಬ್ಬಂದಿ ವರ್ಗ ಒಂದು ವಾಹನದಲ್ಲಿ ಒಟ್ಟಾಗಿ ಬರುವಂತೆ ನೋಡಿಕೊಳ್ಳಬೇಕು. ಖಾಸಗಿ ವಾಹನದಲ್ಲಿ ಪ್ರತ್ಯೇಕವಾಗಿ ಬರುವುದನ್ನು ತಡೆಯಬೇಕು ಎಂದು ಸಲಹೆ ನೀಡಿತು.

ಶಾಲೆ, ಕಾಲೇಜು ಬಂದ್: ವಾಯು ಮಾಲಿನ್ಯ ಹಿನ್ನೆಲೆಯಲ್ಲಿ ಶಾಲೆ-ಕಾಲೇಜು, ಹೊರಗಿನಿಂದ ಬರುವ ವಾಹನಗಳ (ಅಗತ್ಯ ಸೇವೆ ಹೊರತುಪಡಿಸಿ) ಪ್ರವೇಶ ನಿಷೇಧಿಸಲು ಸರ್ಕಾರ ನಿರ್ಧರಿಸಿದೆ ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರಾಯ್ ಹೇಳಿದ್ದಾರೆ. ಸರ್ಕಾರಿ ನೌಕರರು ಮನೆಯಿಂದ ಕೆಲಸ ಮಾಡಲಿದ್ದಾರೆ. ಭಾನುವಾರದ ತನಕ ಯಾವುದೇ ಕಾಮಗಾರಿ ಚಟುವಟಿಕೆ ನಡೆಯುವುದಿಲ್ಲ. ಒಟ್ಟು 1,000 ಖಾಸಗಿ ಸಿಎನ್​ಜಿ ಬಸ್​ಗಳನ್ನು ಬಾಡಿಗೆಗೆ ಪಡೆಯಲಾಗುವುದು. ಗುರುವಾರ ದಿಂದಲೇ ಇದು ಅನುಷ್ಠಾನಗೊಳ್ಳಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ರೈತರ ಸಂಕಷ್ಟವನ್ನು ಪರಿಗಣಿಸಬೇಕಾಗಿದೆ. ಅವರು ಕೃಷಿ ತ್ಯಾಜ್ಯವನ್ನು ಏಕೆ ಸುಡುತ್ತಾರೆ ಎಂಬ ಬಗ್ಗೆ ಯಾರಿಗೂ ಕಾಳಜಿಯಿಲ್ಲ. ಪಂಚತಾರಾ ಹೋಟೆಲ್​ಗಳಲ್ಲಿ ಸುಖನಿದ್ರೆ ಮಾಡುವ ಮಂದಿ ರೈತರನ್ನು ದೂಷಿಸುತ್ತಾರೆ. ಅಲ್ಲಿರುವ ಸಣ್ಣ ಭೂಹಿಡುವಳಿದಾರರಿಗೆ ನೀವು ಹೇಳುತ್ತಿರುವ ಯಂತ್ರಗಳನ್ನು ಅವರು ಖರೀದಿಸುವ ಸಾಮರ್ಥ್ಯ ಇಲ್ಲ.

| ನ್ಯಾ. ಸೂರ್ಯಕಾಂತ್ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠದ ಸದಸ್ಯ

ಕೇಂದ್ರದ ಅಫಿಡವಿಟ್: ದೆಹಲಿ ಮಾಲಿನ್ಯ ನಿಯಂತ್ರಣದ ಬಗ್ಗೆ ವಾಯು ಗುಣಮಟ್ಟ ನಿರ್ವಹಣಾ ಆಯೋಗದ ನಿರ್ದೇಶನಗಳನ್ನು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಸಲ್ಲಿಸಿದ ಅಫಿಡವಿಟ್​ನಲ್ಲಿ ವಿವರಿಸಿದೆ. ನ. 15ರಂದು ನಡೆದ ಸಭೆಯಲ್ಲಿ ಆಯೋಗವು ದೆಹಲಿ, ಹರ್ಯಾಣ, ಪಂಜಾಬ್, ಉತ್ತರ ಪ್ರದೇಶ ರಾಜ್ಯಗಳಿಗೆ ಪಾಲಿಸಬೇಕಾದ ಕೆಲ ಸೂಚನೆಗಳನ್ನು ನೀಡಿತ್ತು.

  • ಅನಿಲ ಬಳಕೆಯಿಂದ ಕೈಗಾರಿಕೆಗಳು ನಡೆಯಲು ಸಾಧ್ಯವೇ ಎಂಬುದನ್ನು ದೆಹಲಿ ಮತ್ತಿತರ ಎನ್​ಸಿಆರ್ ರಾಜ್ಯಗಳು ಖಚಿತಪಡಿಸಿಕೊಳ್ಳಬೇಕು.
  • ಸಮ್ಮತಿ ಇಲ್ಲದ ಇಲ್ಲದ ಇಂಧನ ಬಳಸುವ ಕೈಗಾರಿಕೆಗಳನ್ನು ಮುಚ್ಚಬೇಕು 
  • ದೆಹಲಿಯ 300 ಕಿಮೀ ವ್ಯಾಪ್ತಿಯಲ್ಲಿರುವ 11 ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ, ಕೇವಲ ಐದು ಮಾತ್ರ ಕಾರ್ಯ ನಿರ್ವಹಿಸಲು ಅನುಮತಿಸಬೇಕು. ಉಳಿದ ಸ್ಥಾವರಗಳು ಕನಿಷ್ಠ ನವೆಂಬರ್ 30, 2021ರವರೆಗೆ ಮುಚ್ಚಿರಬೇಕು.
  • ನವೆಂಬರ್ 21 ರವರೆಗೆ ಅಗತ್ಯ ವಸ್ತುಗಳನ್ನು ಸಾಗಿಸುವ ಟ್ರಕ್​ಗಳನ್ನು ಹೊರತುಪಡಿಸಿ ಉಳಿದವುಗಳನ್ನು ನಿಷೇಧಿಸಬೇಕು
  • ಸಿಟಿಯಲ್ಲಿ ಹೆಚ್ಚಿನ ಸಂಖ್ಯೆಯ ಸಿಎನ್​ಜಿ ಬಸ್​ಗಳನ್ನು ರಸ್ತೆಗಿಳಿಸಬೇಕು.
  • ತೀರಾ ಅಗತ್ಯವಲ್ಲದ ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನು ನವೆಂಬರ್ 21 ರವರೆಗೆ ನಿಲ್ಲಿಸಬೇಕು. 
  • ಶೇ. 50ರಷ್ಟು ಉದ್ಯೋಗಿಗಳು ಮನೆಯಿಂದ ಕೆಲಸ ಮಾಡಬಹುದು. ಕೇಂದ್ರ ಸರ್ಕಾರಿ ನೌಕರರು ಕಾರ್ ಪೂಲಿಂಗ್ ಮೂಲಕ ಕಚೇರಿಗೆ ಬರಬೇಕು ತಲುಪಬೇಕು. 
  • ಶಾಲೆ-ಕಾಲೇಜುಗಳು, ಶಿಕ್ಷಣ ಸಂಸ್ಥೆಗಳನ್ನು ಸದ್ಯಕ್ಕೆ ಮುಚ್ಚಬೇಕು. ಆನ್​ಲೈನ್ ತರಗತಿಗೆ ಆದ್ಯತೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net