‘20 ವರ್ಷದಲ್ಲಿ ರಾಜ್‌ ಕುಟುಂಬದಲ್ಲೇ ಪುನೀತ್‌ ಹುಟ್ತಾನೆ... ನಾನು ಇರ್ತೇನೋ ಗೊತ್ತಿಲ್ಲ.. ಆದ್ರೆ ಈ ಮಾತು ಬರೆದಿಟ್ಟುಕೊಳ್ಳಿ...’

appu
Published on

ಬೆಂಗಳೂರು: ಪುನೀತ್‌ ರಾಜ್‌ಕುಮಾರ್‌ ಅವರನ್ನು ಕಳೆದುಕೊಂಡು ಲಕ್ಷಾಂತರ ಅಭಿಮಾನಿಗಳು ಮಾತ್ರವಲ್ಲದೇ ಚಿತ್ರರಂಗದ ಹಲವು ತಾರೆಯರೂ ಕಣ್ಣೀರಾಗಿದ್ದಾರೆ. ಪುನೀತ್‌ ಅವರ ಜತೆ ಬಹುವರ್ಷಗಳ ಒಡನಾಟ ಹೊಂದಿರುವ ನಟ ಜಗ್ಗೇಶ್‌ ಪುನೀತ್‌ ಕುರಿತು ಭಾವುಕವಾದ ಮಾತುಗಳನ್ನಾಡಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಅವರು ಪುನೀತ್‌ ಅವರ ಕುರಿತಾಗಿ ಮಾತನಾಡುತ್ತಾ ಭವಿಷ್ಯವೊಂದನ್ನು ನುಡಿದಿದ್ದಾರೆ. ಅದೇನೆಂದರೆ ಇನ್ನು 20-23 ವರ್ಷಗಳಲ್ಲಿ ಪುನೀತ್‌ ಮತ್ತೆ ಹುಟ್ಟಿಬರುತ್ತಾನೆ. ಅದು ಕೂಡ ಡಾ.ರಾಜ್‌ ಅವರ ಕುಟುಂಬದಲ್ಲಿಯೇ ಎಂದಿದ್ದಾರೆ.

ಪುನೀತ್‌ನ ನಿಧನದ ಸುದ್ದಿ ಕೇಳುವ ದಿನ ನಾನು ಬದುಕಿರುವಾಗಲೇ ಬರುತ್ತದೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. ನನಗೆ ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ. ಆದರೆ ನನ್ನ ಅಂತರಾತ್ಮ ಹೇಳುತ್ತಿದೆ. ಈ ಪವರ್‌ಸ್ಟಾರ್‌ ಮತ್ತೆ ಹುಟ್ಟಿಬರುತ್ತಾನೆ ಎಂದು ಅವರು ಹೇಳಿದರು. ಮತ್ತೊಬ್ಬ ಅಪ್ಪು ಬರುವ ವೇಳೆಗೆ ನಾನು ಇರುತ್ತೇನೋ ಇಲ್ಲವೋ ಗೊತ್ತಿಲ್ಲ. ಅದೇನೇ ಅದರೂ ನನ್ನ ಈ ಮಾತನ್ನು ನೆನಪಿಟ್ಟುಕೊಳ್ಳಿ. ಅಪ್ಪು ವಾಪಸ್‌ ಬರುತ್ತಾನೆ. ನೀವು ನೆನಪಿಟ್ಟುಕೊಳ್ಳಿ. ಸೂಪರ್‌ಸ್ಟಾರ್‌ ಆಗಿ ಅವನು ಬರುತ್ತಾನೆ. ಅವನೇ ಪುನೀತ್‌ ಎಂದರು.

ಆ ಸಮಯದಲ್ಲಿ ಆತ ಪೂರ್ಣ ಆಯಸ್ಸು ಇಟ್ಟುಕೊಂಡು ಬರುತ್ತಾನೆ. ಹೀಗೆ ಮಧ್ಯೆ ಕೈಕೊಟ್ಟು ಹೋಗುವುದಿಲ್ಲ. ಈ ಪುನೀತ್‌ಗೆ ಜೀವನದಲ್ಲಿ ಭಾರಿ ಆಸೆಗಳು ಇದ್ದವು. ಎಲ್ಲವೂ ಈಡೇರುವ ಮುನ್ನವೇ ದೇಹ ಬಿಟ್ಟು ಹೋದ. ಆದರೆ ಮುಂದೆ ಬರುವ ಪುನೀತ್‌ ಹಾಗಲ್ಲ. ಎಲ್ಲಾ ಆಸೆಗಳನ್ನು ಈಡೇರಿಸಿ, ಬಹಳ ವರ್ಷ ಬದುಕುತ್ತಾನೆ. ಇದು ನಿಶ್ಚಿತ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net