ಅಪಾಯಕಾರಿ ರೀತಿಯಲ್ಲಿ ಓವರ್​ಟೇಕ್​ ಮಾಡಿದ ಬಸ್​ ಅನ್ನು ಬೆನ್ನಟ್ಟಿ ತಡೆದ ಮಹಿಳೆ: ಮುಂದೇನಾಯ್ತು ನೀವೇ ನೋಡಿ...

Kerala Woman
Published on

ಪಲಕ್ಕಾಡ್​: ಅಪಾಯಕಾರಿ ರೀತಿಯಲ್ಲಿ​​ ಓವರ್​ಟೇಕ್​ ಮಾಡಿದ್ದಕ್ಕೆ ಆಕ್ರೋಶಗೊಂಡ ಮಹಿಳೆಯೊಬ್ಬರು ತಮ್ಮ ಸ್ಕೂಟರ್​ನಲ್ಲಿ ಬಸ್​ ಅನ್ನು ಬೆನ್ನಟ್ಟಿ ಹೋಗಿ ತಡೆದು, ನಡುರಸ್ತೆಯಲ್ಲಿ ಚಾಲಕನಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಕೇರಳದ ಪೆರುಮನ್ನೂರಿನ ಕೂಟ್ಟನಾಡ್​ ಬಳಿ ನಡೆದಿರುವುದಾಗಿ ಮಂಗಳವಾರ (ಸೆ.6) ವರದಿಯಾಗಿದೆ.

ಪೆರಮನ್ನೂರಿನ ನಿವಾಸಿ ಸಾಂದ್ರಾ ಎಂಬಾಕೆ ಬಸ್​ ತಡೆದು ನಡುರಸ್ತೆಯಲ್ಲೇ ಚಾಲಕನಿಗೆ ಕ್ಲಾಸ್ ತೆಗೆದುಕೊಂಡ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಘಟನೆಯ ವಿವರಣೆಗೆ ಬರುವುದಾದರೆ, ಪಲಕ್ಕಾಡ್​ ಮತ್ತು ಗುರುವಾಯೂರ್​ ನಡುವೆ ಸಂಚರಿಸುವ ರಾಜಪ್ರಭ ಹೆಸರಿನ ಬಸ್​, ಮಹಿಳೆಯ ಸ್ಕೂಟರ್​ ಅನ್ನು ಅಪಾಯಕಾರಿ ರೀತಿಯಲ್ಲಿ ಓವರ್​ಟೇಕ್​ ಮಾಡಿದೆ ಎಂದು ಆರೋಪ ಕೇಳಿಬಂದಿದೆ. ಇನ್ನೇನು ಬಸ್​ ಸ್ಕೂಟರ್​ಗೆ ಡಿಕ್ಕಿ ಹೊಡೆಯಿತು ಎನ್ನುವಷ್ಟರಲ್ಲಿ ಬಹುದೊಡ್ಡ ಅಪಘಾತದಿಂದ ಅದೃಷ್ಟವಶಾತ್​ ಪಾರಾಗಿದ್ದೇನೆ ಎಂದು ಸಾಂದ್ರಾ ಹೇಳಿಕೊಂಡಿದ್ದಾರೆ.

ಬಸ್​ ಚೇಸ್​ ಮಾಡಿದ ರೀತಿಯಿಂದ ಆಕ್ರೋಶಗೊಂಡ ಸಾಂದ್ರಾ, ಕೂಡಲೇ ತಮ್ಮ ಸ್ಕೂಟರ್​ ಮೂಲಕ ಮುಂದಿನ ನಿಲ್ದಾಣದಲ್ಲಿ ಬಸ್​ ತಡೆದಿದ್ದಾರೆ. ಸ್ಕೂಟರ್​ ಅನ್ನು ಬಸ್​ ಮುಂದೆಯೇ ಪಾರ್ಕ್​ ಮಾಡಿ ಪ್ರತಿಭಟಿಸಿದ್ದಾರೆ. ಅವರು ಬಸ್​ ತಡೆದ ಸಮಯದಲ್ಲಿ ಚಾಲಕನ ಕಿವಿಯಲ್ಲಿ ಇಯರ್​ ಫೋನ್​ ಇತ್ತೆಂದು ಆರೋಪ ಮಾಡಿದ್ದಾರೆ.

ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, ಮಹಿಳೆಯ ದಿಟ್ಟತನಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಚಾಲಕನ ನಿರ್ಲಕ್ಷ್ಯದ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ. (ಏಜೆನ್ಸೀಸ್​)

(ವಿಡಿಯೋ ಕೃಪೆ: ಮಾತೃಭೂಮಿ ಕೇರಳ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net