27 ವರ್ಷಗಳಲ್ಲಿ 5000 ಕಾರು ಕಳವು: 3 ಹೆಂಡತಿಯರು, ಲಕ್ಷುರಿ ಜೀವನ, ಭಾರತದ ಅತಿ ದೊಡ್ಡ ಕಾರು ಕಳ್ಳ ಸಿಕ್ಕಿಬಿದ್ದಿದ್ಹೇಗೆ?

Car Stolen
Published on

ನವದೆಹಲಿ: ‘ಭಾರತದ ಅತಿ ದೊಡ್ಡ ಕಾರು ಕಳ್ಳ’ ಅನಿಲ್ ಚೌಹಾಣ್​ನನ್ನು ದೆಹಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

52 ವರ್ಷದ ಆರೋಪಿ, 27 ವರ್ಷಗಳಿಂದ ಕಳ್ಳತನದಲ್ಲಿ ತೊಡಗಿದ್ದು ಇದುವರೆಗೆ ದೇಶದ ನಾನಾ ಭಾಗಗಳಿಂದ 5,000ಕ್ಕೂ ಹೆಚ್ಚು ಕಾರುಗಳನ್ನು ಕದ್ದಿದ್ದಾನೆ. ಮೂರು ಹೆಂಡತಿಯರನ್ನು ಹೊಂದಿರುವ ಆತ ಐಷಾರಾಮಿ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ, ಮುಂಬೈ ಮತ್ತು ಈಶಾನ್ಯ ಭಾರತದ ಹಲವೆಡೆ ಆತ ಅಪಾರ ಆಸ್ತಿಪಾಸ್ತಿ ಹೊಂದಿದ್ದಾನೆ. ಖಚಿತ ಸುಳಿವು ದೊರೆತ ಕೇಂದ್ರೀಯ ದೆಹಲಿ ಪೊಲೀಸರ ವಿಶೇಷ ಸಿಬ್ಬಂದಿ, ದೇಶಬಂಧು ಗುಪ್ತಾ ರಸ್ತೆ ಪ್ರದೇಶದಲ್ಲಿ ಅನಿಲ್​ನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಅನಿಲ್ ಪ್ರಸ್ತುತ ಶಸ್ತ್ರಾಸ್ತ್ರ ಕಳ್ಳಸಾಗಾಟದಲ್ಲೂ ತೊಡಗಿಸಿಕೊಂಡಿದ್ದ. ಆತ ಉತ್ತರ ಪ್ರದೇಶದಿಂದ ಶಸ್ತ್ರಾಸ್ತ್ರಗಳನ್ನು ಪಡೆದು ಈಶಾನ್ಯ ಭಾರತದ ನಿಷೇಧಿತ ಬಂಡುಕೋರ ಸಂಘಟನೆಗಳಿಗೆ ಪೂರೈಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿಯ ಖಾನ್​ಪುರ ಪ್ರದೇಶದಲ್ಲಿ ವಾಸಿಸಿದ್ದ ಅನಿಲ್, ಆಟೋ ಚಾಲನೆ ಮಾಡುತ್ತಿದ್ದ. 1995ರ ನಂತರ ಕಾರು ಕಳವು ಆರಂಭಿಸಿದ್ದ. ಆ ಅವಧಿಯಲ್ಲಿ ಅತಿ ಹೆಚ್ಚು ಮಾರುತಿ ಕಾರುಗಳನ್ನು ಆತ ಕದ್ದಿದ್ದ. ಕದ್ದ ಕಾರುಗಳನ್ನು ನೇಪಾಳ, ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಿಗೆ ಕಳಿಸುತ್ತಿದ್ದ. ಕಳವಿನ ಸಂದರ್ಭ ಆತ ಹಲವು ಕಾರು ಚಾಲಕರನ್ನು ಕೊಂದ ಪ್ರಕರಣಗಳೂ ಬೆಳಕಿಗೆ ಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net