ರಾಜಸ್ಥಾನ ವಿಧಾನಸಭಾ ಚುನಾವಣೆ: ಪ್ರಲ್ಹಾದ ಜೋಶಿ ದೆಹಲಿ ನಿವಾಸ ಈಗ ಬಿಜೆಪಿ ಚಟುವಟಿಕೆಯ ಕೇಂದ್ರ

Joshi
Published on

ನವದೆಹಲಿ: ದೇಶದಲ್ಲಿ ಪಂಚರಾಜ್ಯಗಳ ಚುನಾವಣಾ ಚಟುವಟಿಕೆ ಗರಿಗೆದರಿದ್ದು, ಐದೂ ರಾಜ್ಯಗಳಿಗೆ ಸಂಬಂಧಿಸಿದಂತೆ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಅದರಲ್ಲೂ ದೆಹಲಿಯಲ್ಲಿ ಬಿರುಸಿನ ಪ್ರಕ್ರಿಯೆಗಳು, ತಂತ್ರ-ಪ್ರತಿತಂತ್ರಗಳು ನಡೆಯಲಾರಂಭಿಸಿವೆ.

ಆ ಪೈಕಿ ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ದೆಹಲಿ ನಿವಾಸ ಬಿಜೆಪಿ ಚಟುವಟಿಕೆಯ ಕೇಂದ್ರವಾಗಿದೆ. ರಾಜಸ್ಥಾನ ವಿಧಾನಸಭಾ ಚುನಾವಣೆ ಕುರಿತ ಬಿಜೆಪಿ ಸರಣಿ ಸಭೆಗಳು ಕೇಂದ್ರ ಸಚಿವ ಹಾಗೂ ರಾಜಸ್ಥಾನ ಚುನಾವಣೆಯ ಬಿಜೆಪಿ ಉಸ್ತುವಾರಿ ಪ್ರಲ್ಹಾದ ಜೋಶಿ ಅವರ ದೆಹಲಿ ನಿವಾಸದಲ್ಲಿ ನಡೆಯುತ್ತಿವೆ.

ದೆಹಲಿಯ ೧೧ ಅಕ್ಬರ ರಸ್ತೆಯಲ್ಲಿನ ಈ ನಿವಾಸದಲ್ಲೇ ರಾಜಸ್ಥಾನ ಬಿಜೆಪಿಯ ಪ್ರಮುಖರೆಲ್ಲ ಸರಣಿ ಸಭೆಗಳನ್ನು ಮಾಡುತ್ತಿದ್ದಾರೆ. ಅಲ್ಲದೆ ತಂತ್ರಗಾರಿಕೆ, ಅಭ್ಯರ್ಥಿಗಳ ಆಯ್ಕೆ, ಪ್ರಚಾರ ಸೇರಿದಂತೆ ಚುನಾವಣೆಯ ವಿವಿಧ ಯೋಜನೆಗಳು ಕೂಡ ಇಲ್ಲಿಯೇ ಚರ್ಚಿತವಾಗುತ್ತಿವೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.

ಬಿಜೆಪಿ ಪಾಲಿಗೆ ರಾಜಸ್ಥಾನ ಗೆಲ್ಲುವ ರಾಜ್ಯವಾಗಿರುವುದಲ್ಲದೆ, ಪಂಚರಾಜ್ಯಗಳ ಪೈಕಿ ರಾಜಸ್ಥಾನದ ಫಲಿತಾಂಶ ದೇಶದ ಮುಂದಿನ ನಾಯಕತ್ವಕ್ಕೆ ಸಂಬಂಧಿಸಿದಂತೆ ನಿರ್ಣಾಯಕ ಎಂದು ಬಹುತೇಕ ಸಮೀಕ್ಷೆಗಳು ವರದಿ ನೀಡಿವೆ. ಹೀಗಾಗಿ, ರಾಜಸ್ಥಾನದ ಚುನಾವಣೆ ಪ್ರಕ್ರಿಯೆ ಹೆಚ್ಚಿನ ಗಮನ ಸೆಳೆಯುತ್ತಿದೆ.

ಇವೆಲ್ಲದರ ಹಿನ್ನೆಲೆಯಲ್ಲಿ ರಾಜಸ್ಥಾನ ಚುನಾವಣೆಯ ಬಿಜೆಪಿ ಉಸ್ತುವಾರಿ ಜೋಶಿ ಅವರ ಮನೆ ಮುಂದೆ ರಾಜಸ್ಥಾನದ ಮಾಧ್ಯಮ ಲಗ್ಗೆ ಇಟ್ಟಿದ್ದು, ಎಲ್ಲ ಬೆಳವಣಿಗೆಗಳನ್ನು ಗಮನಿಸಲಾರಂಭಿಸಿದೆ. ಜತೆಗೆ ಸಂಸದರು ಶಾಸಕರು ಮತ್ತು ಪ್ರಮುಖ ನಾಯಕರು ಒಳಗಡೆ ಸಭೆ ಸೇರಿದರೆ, ಟಿಕೆಟ್ ಆಕಾಂಕ್ಷಿಗಳು ನಿವಾಸದ ಎದುರು ಜಮಾಯಿಸುವುದು ಕೂಡ ಸಾಮಾನ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net