

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್, ನಟ ದರ್ಶನ್ ವಿರುದ್ಧ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದು, ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಎ2 ಆರೋಪಿ ಎಂದು ಉಲ್ಲೇಖಿಸಿ ಆಕೆ ದರ್ಶನ್ ವಿರುದ್ಧ ದೂರು ನೀಡಿದ್ದಾರೆ.
ದರ್ಶನ್ ಮನೆ ಮುಂದೆ ಅ. 28ರಂದು ನಡೆದ ಒಂದು ಸಣ್ಣ ಗಲಾಟೆ ಪೊಲೀಸರಿಗೆ ದೂರು ಕೊಡುವ ಹಂತಕ್ಕೆ ತಲುಪಿದೆ. ಅಮಿತ್ ಜಿಂದಾಲ್ ಎಂಬ ಮಹಿಳೆ ಅಂದು ದರ್ಶನ್ ಮನೆ ಬಳಿ ಪಾರ್ಕ್ ಮಾಡಿದ್ದ ತಮ್ಮ ಕಾರನ್ನು ತೆಗೆಯುವ ವೇಳೆ ನಡೆದ ಒಂದು ಘಟನೆ ದರ್ಶನ್ ವಿರುದ್ಧ ದೂರು ದಾಖಲಾಗುವಂತೆ ಮಾಡಿದೆ.
ವಿಶ್ವ ಪಾರ್ಶ್ವವಾಯು ದಿನದ ಪ್ರಯುಕ್ತ ಜಾಗೃತಿ ಕಾರ್ಯಕ್ರಮಕ್ಕಾಗಿ ನಾನು ಖಾಸಗಿ ಆಸ್ಪತ್ರೆಯೊಂದಕ್ಕೆ ಹೋಗಿದ್ದು, ನನ್ನ ಕಾರನ್ನು ಅಲ್ಲಿಯೇ ಸಮೀಪದ ನಟ ದರ್ಶನ್ ಮನೆ ಬಳಿಯ ಖಾಲಿ ಜಾಗದ ಮುಂದಿನ ರಸ್ತೆಯಲ್ಲಿ ನಿಲ್ಲಿಸಿದ್ದೆ. ಕಾರ್ಯಕ್ರಮದ ಬಳಿಕ ಕಾರು ತೆಗೆದುಕೊಳ್ಳಲು ಬಂದಾಗ ಆ ಖಾಲಿ ಜಾಗದಲ್ಲಿ ಮೂರು ನಾಯಿಗಳಿದ್ದು ಎರಡನ್ನು ಕಟ್ಟಿ ಹಾಕಲಾಗಿದ್ದು, ಒಂದನ್ನು ಕಟ್ಟಿರಲಿಲ್ಲ. ಅದನ್ನು ನೋಡಿಕೊಳ್ಳುತ್ತಿದ್ದ ಒಬ್ಬ ಅಪರಿಚಿತ ವ್ಯಕ್ತಿ ಬಳಿ ನಾಯಿಯನ್ನು ಆ ಕಡೆ ಕರೆದುಕೊಳ್ಳಿ, ಕಾರು ತೆಗೆದುಕೊಳ್ಳುವುದಾಗಿ ಹೇಳಿದ್ದರೂ ಆತ ನಿರ್ಲಕ್ಷಿಸಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ನಾಯಿಯನ್ನು ಹಿಡಿದುಕೊಳ್ಳುವ ಬದಲು ಪಾರ್ಕಿಂಗ್ ವಿಚಾರವಾಗಿ ವಾಗ್ವಾದ ನಡೆಸಿದ ಆತನ ಜತೆ ಇನ್ನೊಬ್ಬ ಅಪರಿಚಿತ ಕೂಡ ಸೇರಿಕೊಂಡಿದ್ದ. ಈ ವಾಗ್ವಾದದ ಸಂದರ್ಭದಲ್ಲಿ ಕಟ್ಟಿ ಹಾಕಿರದ ನಾಯಿ ಮೈಮೇಲೆ ಎರಗಿದೆ. ಅದೇ ಸಂದರ್ಭದಲ್ಲಿ ಕಟ್ಟಿದ್ದ ಇನ್ನೊಂದು ನಾಯಿ ಕೂಡ ಮೈಮೇಲೆರಗಿದ್ದು, ನಾಯಿಗಳ ಕಡಿತದಿಂದಾಗಿ ಬಟ್ಟೆ ಹರಿದುಹೋಗಿ, ಹೊಟ್ಟೆಯ ಭಾಗಕ್ಕೆ ಗಾಯವಾಗಿದೆ. ನಾಯಿಯನ್ನು ಹಿಡಿದಿಟ್ಟುಕೊಳ್ಳಿ ಎಂದು ಹೇಳಿದ್ದರೂ ನಿರ್ಲಕ್ಷಿಸಿ ಅದನ್ನು ಮೈಮೇಲೆ ಎರಗುವಂತೆ ಬೇಜವಾಬ್ದಾರಿ ತೋರಿದ್ದಾರೆ ಎಂದಿರುವ ಮಹಿಳೆ ಆ ಅಪರಿಚಿತರ ಜತೆಗೆ ಮನೆ ಮಾಲೀಕ ನಟ ದರ್ಶನ್ ವಿರುದ್ಧವೂ ಕ್ರಮಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ.