ಎಷ್ಟು ಗಂಟೆ ಕೆಲಸ ಎಂಬುದೇ ಮುಖ್ಯವಲ್ಲ, ಈಗ ವಾರಕ್ಕೆ 5 ಕೆಲಸದ ದಿನ ಎಂಬುದೂ ಇಲ್ಲ: ಮೂರ್ತಿ ಹೇಳಿಕೆಗೆ ಗೋಯೆಂಕಾ ಪ್ರತಿಕ್ರಿಯೆ

Murthy Goenka
Published on

ಬೆಂಗಳೂರು: ಸಾಫ್ಟ್​ವೇರ್​ ಕ್ಷೇತ್ರದ ಮುಂಚೂಣಿ ಸಂಸ್ಥೆಗಳಲ್ಲಿ ಒಂದಾಗಿರುವ ಇನ್​ಫೊಸಿಸ್​ನ ಸಂಸ್ಥಾಪಕ ನಾರಾಯಣಮೂರ್ತಿ ಅವರು ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ನೀಡಿದ್ದ ಹೇಳಿಕೆ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಅವರ ಈ ಹೇಳಿಕೆಗೆ ಸಾಕಷ್ಟು ಆಕ್ಷೇಪಗಳು ಕೇಳಿಬಂದಿವೆ.

ಭಾರತದ ವರ್ಕ್ ಕಲ್ಚರ್ ಬದಲಾಗಬೇಕು. ಈಗಾಗಲೇ ಮುಂದುವರಿದಿರುವ ರಾಷ್ಟ್ರಗಳ ಜತೆ ಭಾರತ ಪೈಪೋಟಿ ನಡೆಸಬೇಕು ಎಂದರೆ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ನಾರಾಯಣಮೂರ್ತಿ ಕೆಲವು ದಿನಗಳ ಹಿಂದೆ ಯೂಟ್ಯೂಬ್​ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಅದಾದ ಬಳಿಕ ಅವರ ಹೇಳಿಕೆಗೆ ಸಾಕಷ್ಟು ವಿರೋಧ ಕೇಳಿ ಬಂದಿತ್ತು.

ಇದೀಗ ಉದ್ಯಮಿ, ಆರ್​ಪಿಜಿ ಎಂಟರ್​ಪ್ರೈಸಸ್​ ಚೇರ್ಮನ್ ಹರ್ಷ ಗೋಯೆಂಕಾ ಕೂಡ ನಾರಾಯಣಮೂರ್ತಿ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಸಲಿಗೆ ವಾರಕ್ಕೆ ಐದು ದಿನಗಳ ಕೆಲಸದ ದಿನ ಎಂಬ ಪದ್ಧತಿಯೇ ಈಗಿಲ್ಲ. ಜನರು ತಮ್ಮ ಕಚೇರಿ ಅವಧಿಯ ಶೇ. 33 ಸಮಯವನ್ನು ಕಚೇರಿಯಿಂದ ಹೊರಗೆ ಕೆಲಸ ಮಾಡಿಯೇ ನಿಭಾಯಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಹೊಂದಾಣಿಕೆ ಅತ್ಯಂತ ಮುಖ್ಯವಾದುದು. ದೈನಂದಿನ ಪ್ರಯಾಣವನ್ನು ತಪ್ಪಿಸುವ ಜತೆಗೆ ಹೊಂದಾಣಿಕೆಗೆ ಸ್ಪಂದಿಸುವುದಕ್ಕೆ ನಾವು ಹೆಚ್ಚಿನ ಬೆಲೆ ಕೊಡಬೇಕಾಗಿದೆ. ಕಚೇರಿ, ಮನೆ ಅಥವಾ ಎಲ್ಲಿಂದ ಬೇಕಿದ್ದರೂ ಕೆಲಸ ಮಾಡಬಹುದಾದಂಥ ಹೈಬ್ರಿಡ್ ವರ್ಕ್ ಕಲ್ಚರ್ ವರ್ತಮಾನ ಹಾಗೂ ಭವಿಷ್ಯವಾಗಿದೆ. ಅಗತ್ಯಕ್ಕೆ ತಕ್ಕಂತೆ ಕಚೇರಿ ಇಲ್ಲವೇ ಹೊರಗಿನಿಂದ ಕೆಲಸ ಮಾಡುವುದಕ್ಕೆ ಹೊಂದಿಕೊಳ್ಳಬೇಕಾಗಿದೆ ಎಂದು ಗೋಯೆಂಕಾ ಹೇಳಿದ್ದಾರೆ.

ಅಲ್ಲದೆ ವಾರಕ್ಕೆ 50ರಿಂದ 70 ಗಂಟೆಗಳ ಕಾಲದಷ್ಟು ದೀರ್ಘವಾಗಿ ಕೆಲಸ ಮಾಡುವುದು ಮುಖ್ಯವಲ್ಲ. ನಮ್ಮ ಗುರಿ, ಉದ್ದೇಶ, ಉತ್ಪಾದಕತೆ ಸಾಧಿಸುವಷ್ಟು ಕೆಲಸ ಮಾಡುವುದು ಮುಖ್ಯ. ಪಾಳಿಗೆ ಅಪ್ಪಿಕೊಳ್ಳಿ, ಹೊಸ ಕೆಲಸದ ಸ್ಥಳವನ್ನು ಒಪ್ಪಿಕೊಳ್ಳಿ, ಕಚೇರಿ ಮತ್ತು ಮನೆಯ ಮಧ್ಯೆ ಒಂದು ಹಿತವಾದ ಕೆಲಸದ ತಾಣವನ್ನು ಕಂಡುಕೊಳ್ಳಿ, ನಮ್ಮ ವೃತ್ತಿಜೀವನದಲ್ಲಿ ಯಾವುದು ಮುಖ್ಯ ಎಂದು ಅದಕ್ಕೆ ಆದ್ಯತೆ ನೀಡುವ ಸಮಯವಿದು ಎಂದು ಗೋಯೆಂಕಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net