More

    ವಾರಕ್ಕೆ 55 ಗಂಟೆ ಅಥವಾ ಅದಕ್ಕೂ ಹೆಚ್ಚು ಕೆಲಸ ಮಾಡುವುದು ಆರೋಗ್ಯಕ್ಕೆ ಅಪಾಯಕಾರಿ: ಅಧ್ಯಯನದ ವಿವರ ಇಲ್ಲಿದೆ..

    ನವದೆಹಲಿ: ಭಾರತದ ವರ್ಕ್ ಕಲ್ಚರ್​ ಬದಲಾಗಬೇಕು, ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಇನ್​ಫೊಸಿಸ್​ನ ನಾರಾಯಣಮೂರ್ತಿ ಅವರು ನೀಡಿರುವ ಹೇಳಿಕೆ ಇದೀಗ ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದು, ಪರ-ವಿರೋಧ ಅಭಿಪ್ರಾಯಗಳು ಕೇಳಿಬರಲಾರಂಭಿಸಿವೆ.

    ಇದರ ಮಧ್ಯೆಯೇ ಹೆಚ್ಚು ಕೆಲಸ ಅಂದರೆ ಅಧಿಕ ಗಂಟೆಗಳ ಕಾಲ ಕೆಲಸ ಮಾಡುವುದರಿಂದ ಏನಾಗುತ್ತದೆ ಎಂಬ ಕುರಿತು ಈ ಹಿಂದೆಯೇ ನಡೆದಿದ್ದ ಅಧ್ಯಯನದ ಅಂಶಗಳು ಮತ್ತೆ ಮುನ್ನೆಲೆಗೆ ಬಂದಿವೆ. ಹೆಚ್ಚು ಕೆಲಸ ಮಾಡುವುದರಿಂದ ಏನಾಗುತ್ತದೆ ಎಂಬ ಕುರಿತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಮತ್ತು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್​ಒ) ಪ್ರಕಟಿಸಿದ್ದ ಅಧ್ಯಯನದ ಅಂಶಗಳು ಮತ್ತೆ ಪ್ರಸ್ತಾಪ ಆಗಲಾರಂಭಿಸಿವೆ. ಈ ಕುರಿತ ವಿವರಗಳು ಎನ್​ವಿರಾನ್​​ಮೆಂಟಲ್ ಇಂಟರ್​ನ್ಯಾಷನಲ್​ನಲ್ಲಿ ಪ್ರಕಟವಾಗಿವೆ.

    ಹೆಚ್ಚು ಕೆಲಸ ಮಾಡುವುದರಿಂದ 2016ರಲ್ಲಿ 7.45 ಲಕ್ಷ ಮಂದಿ ಸಾವಿಗೀಡಾಗಿದ್ದರು. ಅಲ್ಲದೆ ಹೆಚ್ಚು ಕೆಲಸ ಮಾಡುವುದರಿಂದ ಸಾವಿಗೀಡಾಗುವವರ ಪ್ರಮಾಣ 2000ನೇ ಇಸವಿಯಿಂದ ಶೇ. 29 ಏರಿಕೆ ಕಂಡಿದೆ ಎಂಬುದನ್ನೂ ಈ ಅಧ್ಯಯನ ತಿಳಿಸಿದೆ. ಹೆಚ್ಚು ಕೆಲಸ ಮಾಡುವುದರಿಂದ ಆಗುವ ಸಾವು ಹಾಗೂ ಅನಾರೋಗ್ಯ ಕುರಿತ ಇದು ಮೊದಲ ಜಾಗತಿಕ ಅಧ್ಯಯನವಾಗಿದೆ. ಜಗತ್ತಿನ 154 ದೇಶಗಳಲ್ಲಿನ 1970ರಿಂದ 2018ರ ಅವಧಿಯ ಜಾಗತಿಕ, ಪ್ರಾದೇಶಿಕ ಹಾಗೂ ರಾಷ್ಟ್ರಮಟ್ಟದ 2,300 ಸಮೀಕ್ಷೆಗಳನ್ನು ಆಧರಿಸಿ ಈ ಅಧ್ಯಯನ ನಡೆಸಲಾಗಿತ್ತು.

    ಇದನ್ನೂ ಓದಿ: ಈ ದೇವಸ್ಥಾನದಲ್ಲಿ ಮಹಿಳೆಯರಿಗಷ್ಟೇ ಗರ್ಭಗುಡಿಗೆ ಪ್ರವೇಶ, ಪೂಜಿಸಲು ಅವಕಾಶ: ಮುಟ್ಟಾಗಿದ್ದರೂ ಇಲ್ಲಿ ಮೈಲಿಗೆಯಲ್ಲ!

    ಈ ಅಧ್ಯಯನದ ಅಂಕಿ-ಅಂಶಗಳ ಪ್ರಕಾರ ಅಧಿಕ ಕೆಲಸ ಮಾಡುವುದರಿಂದ 2016ರಲ್ಲಿ 3.98 ಲಕ್ಷ ಮಂದಿ ಸ್ಟ್ರೋಕ್​ನಿಂದ ಹಾಗೂ 3.47 ಲಕ್ಷ ಮಂದಿ ಹೃದಯಾಘಾತದಿಂದ ಸಾವಿಗೀಡಾಗಿದ್ದರು. ಅವರೆಲ್ಲ ವಾರಕ್ಕೆ 55 ಗಂಟೆಗಳ ಕಾಲ ಅಥವಾ ಅದಕ್ಕೂ ಹೆಚ್ಚು ಕೆಲಸ ಮಾಡುವವರಾಗಿದ್ದರು. ಅಧಿಕ ಕೆಲಸದಿಂದ ಹೃದಯಾಘಾತಕ್ಕೆ ಒಳಗಾಗಿ ಸಾಯುವವರ ಸಂಖ್ಯೆ 2000ದಿಂದ 2016ರ ಅವಧಿಯಲ್ಲಿ ಶೇ. 42 ಹೆಚ್ಚಳವಾಗಿದ್ದರೆ, ಅಧಿಕ ಕೆಲಸ ಮಾಡುವವರು ಅದೇ ಅವಧಿಯಲ್ಲಿ ಸ್ಟ್ರೋಕ್​ನಿಂದ ಸಾವಿಗೀಡಾದ ಪ್ರಮಾಣ ಶೇ. 19 ಏರಿಕೆ ಕಂಡಿತ್ತು.

    ಯಾವ ಕೆಲಸವೂ ಪಾರ್ಶ್ವವಾಯು ಅಥವಾ ಹೃದ್ರೋಗದ ಅಪಾಯಕ್ಕೆ ತೆರೆದುಕೊಂಡು ಮಾಡುವಷ್ಟು ಯೋಗ್ಯವಲ್ಲ. ಕಾರ್ಮಿಕರ ಆರೋಗ್ಯವನ್ನು ರಕ್ಷಿಸಲು ಮಿತಿಗೆ ಒಪ್ಪಿಕೊಳ್ಳಲು ಸರ್ಕಾರಗಳು, ಕಂಪನಿಗಳ ಮಾಲೀಕರು ಮತ್ತು ಕಾರ್ಮಿಕರು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ.
    | ಡಾ. ಟೆಡ್ರೊಸ್ ಅಧನೊಮ್ ಘೆಬ್ರೆಯೆಸಸ್, ಡೈರೆಕ್ಟರ್ ಜನರಲ್, ವಿಶ್ವ ಆರೋಗ್ಯ ಸಂಸ್ಥೆ

    ವಾರಕ್ಕೆ 55 ಗಂಟೆ ಅಥವಾ ಅದಕ್ಕೂ ಹೆಚ್ಚು ಕೆಲಸ ಮಾಡುವುದು ಆರೋಗ್ಯಕ್ಕೆ ಅಪಾಯಕಾರಿ. ಅಧಿಕ ಸಮಯ ಕೆಲಸ ಮಾಡುವುದರಿಂದ ಬೇಗ ಸಾವು ಬರುತ್ತದೆ ಎಂಬ ಸತ್ಯವನ್ನು ಸರ್ಕಾರಗಳು, ಉದ್ಯೋಗದಾತರು, ಉದ್ಯೋಗಿಗಳು ಅರಿಯಬೇಕಾಗಿದೆ.
    | ಡಾ.ಮರಿಯಾ ನೀರಾ, ವಿಶ್ವ ಆರೋಗ್ಯ ಸಂಸ್ಥೆಯ ಎನ್​ವಿರಾನ್​ಮೆಂಟ್, ಕ್ಲೈಮೇಟ್ ಚೇಂಜ್​ ಆ್ಯಂಡ್​ ಹೆಲ್ತ್ ಡಿಪಾರ್ಟ್​ಮೆಂಟ್ ನಿರ್ದೇಶಕಿ.

    ಸಾಯುವವರಲ್ಲಿ ಪುರುಷರೇ ಅಧಿಕ

    ಅಧಿಕ ಕೆಲಸ ಮಾಡುವುದರಿಂದ ಸಾವಿಗೀಡಾದವರಲ್ಲಿ ಪುರುಷರ ಪ್ರಮಾಣವೇ ಅಧಿಕ. ಅಂದರೆ ಹೀಗೆ ಸತ್ತವರ ಪೈಕಿ ಶೇ. 72 ಮಂದಿ ಪುರುಷರು. 60ರಿಂದ 79ರ ವಯಸ್ಸಲ್ಲಿ ಸಾವಿಗೀಡಾದವರಲ್ಲಿ ಬಹುತೇಕ ಮಂದಿ ತಮ್ಮ 45ರಿಂದ 74ರ ವಯಸ್ಸಲ್ಲಿ 55 ಗಂಟೆ ಅಥವಾ ಅದಕ್ಕೂ ಅಧಿಕ ಕೆಲಸ ಮಾಡಿದ್ದರು ಎಂಬುದು ಕಂಡುಬಂದಿದೆ. ಉದ್ಯೋಗ ಸಂಬಂಧಿತ ಒಟ್ಟು ಅನಾರೋಗ್ಯಗಳ ಪೈಕಿ ಮೂರನೇ ಒಂದು ಭಾಗದಷ್ಟು ಸಮಸ್ಯೆಗಳು ಅಧಿಕ ಕೆಲಸದಿಂದಾಗಿದ್ದು ಎಂಬುದೂ ಇದರಲ್ಲಿ ತಿಳಿದುಬಂದಿದೆ.

    ಇದನ್ನೂ ಓದಿ: ತಪ್ಪಾಯ್ತು ಅಂದ್ರೂ ಬಿಡ್ಲಿಲ್ಲ: ಬಹರೈನ್​ನಲ್ಲಿ ಸ್ಟೇಟಸ್​ ಹಾಕಿ ಕೆಲಸ ಕಳ್ಕೊಂಡ ಕರ್ನಾಟಕದ ಡಾಕ್ಟರ್!

    55 ಗಂಟೆಗೂ ಅಧಿಕ ಕೆಲಸ ಮಾಡಿದರೆ…

    ಈ ಅಧ್ಯಯನದ ಪ್ರಕಾರ ಮಹತ್ವದ ಸಂಗತಿಯೊಂದು ಬಯಲಾಗಿದೆ. ವಾರಕ್ಕೆ 35ರಿಂದ 40 ಗಂಟೆಗಳ ಕೆಲಸ ಮಾಡುವುದಕ್ಕೆ ಹೋಲಿಸಿದರೆ ವಾರಕ್ಕೆ 55 ಗಂಟೆ ಅಥವಾ ಅದಕ್ಕೂ ಹೆಚ್ಚು ಕೆಲಸ ಮಾಡುವುದರಿಂದ ಸ್ಟ್ರೋಕ್​ಗೆ ಒಳಗಾಗುವ ಅಪಾಯ ಶೇ. 35 ಅಧಿಕ ಹಾಗೆಯೇ ಇಶ್ಕೆಮಿಕ್ ಹಾರ್ಟ್ ಡಿಸೀಸ್​ನಿಂದ ಸಾವಿಗೀಡಾಗುವ ಅಪಾಯ ಶೇ. 17ರಷ್ಟು ಅಧಿಕ ಎಂಬುದು ಈ ಅಧ್ಯಯನದಲ್ಲಿ ಕಂಡುಬಂದಿದೆ. ಇನ್ನು ಜಾಗತಿಕವಾಗಿ ಅಧಿಕ ಸಮಯ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಅಧ್ಯಯನದ ಸಂದರ್ಭದಲ್ಲಿ ಅದು ಜಗತ್ತಿನ ಜನಸಂಖ್ಯೆಯ ಶೇ. 9ರಷ್ಟು ಇದ್ದಿದ್ದು ಕಂಡುಬಂದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts