ಬಾಲಕನ ಮೇಲೆ 14 ಮಂದಿಯಿಂದ ಲೈಂಗಿಕ ದೌರ್ಜನ್ಯ: ರಾಜಕಾರಣಿ, ಸರ್ಕಾರಿ ನೌಕರರು ಸೇರಿ 9 ಜನರ ಬಂಧನ​! Gay Dating App

Gay Dating App
Published on

Gay Dating App : ಕೇರಳದಲ್ಲಿ ಹದಿನಾರು ಹರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದಲ್ಲಿ ಬಂಧನವಾಗಿರುವ 9 ಮಂದಿ ಆರೋಪಿಗಳಲ್ಲಿ ಓರ್ವ ರಾಜಕಾರಣಿ, ಇಬ್ಬರು ಸರ್ಕಾರಿ ನೌಕರರು ಮತ್ತು ಓರ್ವ ಫುಟ್​ಬಾಲ್​ ಕೋಚ್​ ಸೇರಿದ್ದಾರೆ. ಆರೋಪಿಗಳು ಗೇ ಡೇಟಿಂಗ್​ ಆ್ಯಪ್​ ಮೂಲಕ ಬಾಲಕನನ್ನು ಪರಿಚಯಿಸಿಕೊಂಡು ಕೃತ್ಯ ಎಸಗಿದ್ದಾರೆಂದು ಹೇಳಲಾಗಿದೆ.

ಈ ಪ್ರಕರಣದ ಬಗ್ಗೆ ಎನ್‌ಡಿಟಿವಿ ಜೊತೆ ಮಾತನಾಡಿರುವ ಕಾಸರಗೋಡು ಪೊಲೀಸ್ ಮುಖ್ಯಸ್ಥ ವಿಜಯ ಭರತ್ ರೆಡ್ಡಿ, ಸಂತ್ರಸ್ತ 10ನೇ ತರಗತಿಯ ವಿದ್ಯಾರ್ಥಿ ಎರಡು ವರ್ಷಗಳ ಹಿಂದೆ ಡೇಟಿಂಗ್​ ಆ್ಯಪ್​ ಅನ್ನು ಡೌನ್‌ಲೋಡ್ ಮಾಡಿಕೊಂಡಿರುವಂತೆ ತೋರುತ್ತಿದೆ. ಕಾಸರಗೋಡು, ಕಣ್ಣೂರು, ಕೋಝಿಕ್ಕೋಡ್ ಮತ್ತು ಎರ್ನಾಕುಲಂನಲ್ಲಿ ಎರಡು ವರ್ಷಗಳ ಕಾಲ 14 ಪುರುಷರು ಬಾಲಕನ ಮೇಲೆ ಲೈಂಗಿಕವಾಗಿ ದೌರ್ಜನ್ಯ ನಡೆಸಿರುವ ಶಂಕೆ ಇದೆ ಎಂದು ತಿಳಿಸಿದ್ದಾರೆ.

ಹುಡುಗನ ಮನೆಯಲ್ಲಿ ಮತ್ತು ರಾಜ್ಯದ ಇತರ ಜಿಲ್ಲೆಗಳಾದ್ಯಂತ ವಿವಿಧ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ ನಡೆದಿವೆ. ಒಮ್ಮೆ ಬಾಲಕನ ತಾಯಿ ಮನೆಗೆ ಬಂದಾಗ ವ್ಯಕ್ತಿಯೊಬ್ಬ ಮನೆಯಿಂದ ಓಡಿಹೋಗುವುದನ್ನು ನೋಡಿ ಅನುಮಾನಗೊಂಡು ವಿಚಾರಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ತಮ್ಮ ಮಗನನ್ನು ಪ್ರಶ್ನೆ ಮಾಡಿದಾಗ ನಡೆದಿದ್ದೆಲ್ಲವನ್ನು ಆ ಬಾಲಕ ಬಹಿರಂಗಪಡಿಸಿದ್ದಾನೆ. ಮಾಹಿತಿ ತಿಳಿದ ಕೂಡಲೇ ಬಾಲಕನ ತಾಯಿ, ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಎಲ್ಲವನ್ನು ತಿಳಿಸಿದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದು ರೆಡ್ಡಿ ಹೇಳಿದ್ದಾರೆ.

ಸಂತ್ರಸ್ತ ಬಾಲಕನ ಹೇಳಿಕೆಯ ನಂತರ, ಪೊಲೀಸರು 16 ವ್ಯಕ್ತಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ-2012 ರ ಅಡಿಯಲ್ಲಿ 14 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ನಡೆದ ಎಂಟು ಪ್ರಕರಣಗಳ ತನಿಖೆಗಾಗಿ ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ನಾಲ್ವರು ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಉಳಿದ ಆರು ಪ್ರಕರಣಗಳನ್ನು ತನಿಖೆಗಾಗಿ ಕೋಝಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳಿಗೆ ವರ್ಗಾಯಿಸಲಾಗಿದೆ.

14 ಶಂಕಿತರು 25 ರಿಂದ 51 ವರ್ಷ ವಯಸ್ಸಿನವರು. ಆರೋಪಿಗಳಲ್ಲಿ ಒಬ್ಬರು ರೈಲ್ವೆ ಉದ್ಯೋಗಿ ಎಂದು ಪೊಲೀಸರು ದೃಢಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net