ಆಪರೇಷನ್​ ಸಿಂಧೂರ ದಾಳಿಯಲ್ಲಿ ಮಸೂದ್​ ಅಜರ್​ ಕುಟುಂಬ ಛಿದ್ರ: ಕೊನೆಗೂ ಸತ್ಯ ಒಪ್ಪಿಕೊಂಡ ಜೆಇಎಂ! Operation Sindoor

Operation Sindoor
Published on

Operation Sindoor : ಪಹಲ್ಗಾಮ್​ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರದಲ್ಲಿ ಮೋಸ್ಟ್​ ವಾಂಟೆಡ್​ ಉಗ್ರ ಮಸೂದ್​ ಅಜರ್​ ಕುಟುಂಬದ ಸದಸ್ಯರು ಸಾವಿಗೀಡಾಗಿರುವುದಾಗಿ ಜೈಶ್​-ಎ-ಮೊಹಮ್ಮದ್​ ಭಯೋತ್ಪಾದಕ ಸಂಘಟನೆ ಮೊದಲ ಬಾರಿಗೆ ಒಪ್ಪಿಕೊಂಡಿದೆ.​

ವೈರಲ್ ಆಗಿರುವ ವಿಡಿಯೊವೊಂದರಲ್ಲಿ, ಪಾಕಿಸ್ತಾನಿ ಸೇನಾ ಸಿಬ್ಬಂದಿಯೊಂದಿಗೆ ಜೈಶ್‌ನ ಉನ್ನತ ಕಮಾಂಡರ್ ಮಸೂದ್ ಇಲ್ಯಾಸ್ ಕಾಶ್ಮೀರಿ, ಆಪರೇಷನ್​ ಸಿಂಧೂರ ದಾಳಿಯಿಂದಾಗಿ ತಮ್ಮ ಭಯೋತ್ಪಾದಕ ಸಂಘಟನೆ ಅನುಭವಿಸಿದ ನಷ್ಟಗಳನ್ನು ಒಪ್ಪಿಕೊಳ್ಳುತ್ತಿರುವ ದೃಶ್ಯವಿದೆ.

ಮೇ 7ರಂದು ಬಹಾವಲ್ಪುರದ ಜೈಶ್ ಪ್ರಧಾನ ಕಚೇರಿ ಜಾಮಿಯಾ ಮಸೀದಿ ಸುಭಾನ್ ಅಲ್ಲಾ ಮೇಲೆ ನಡೆದ ದಾಳಿಯಲ್ಲಿ ಅಜರ್ ಕುಟುಂಬವನ್ನು ಛಿದ್ರ ಛಿದ್ರ ಮಾಡಲಾಯಿತು ಎಂದು ಇಲ್ಯಾಸ್​ ಕಾಶ್ಮೀರಿ ಹೇಳಿದ್ದಾನೆ. ಅಂದರೆ, ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದಕ್ಕೆ ಪ್ರತೀಕಾರವಾಗಿ ಈ ಕಾರ್ಯಾಚರಣೆಯನ್ನು ನಡೆಸಲಾಯಿತು.

ಅಂದಹಾಗೆ, ಈ ದಾಳಿಯಲ್ಲಿ ಭಾರತೀಯ ಸೇನೆ ಪಾಕಿಸ್ತಾನದೊಳಗೆ ಅತ್ಯಂತ ಧೈರ್ಯದಿಂದ ವಾಯುದಾಳಿ ನಡೆಸಿ, ಬಹಾವಲ್ಪುರವಲ್ಲದೆ, ಇತರ ಎಂಟು ಭಯೋತ್ಪಾದಕ ತಾಣಗಳನ್ನೂ ನಾಶ ಮಾಡಿತು.

ಆಪರೇಷನ್​ ಸಿಂಧೂರ ಹಿನ್ನೆಲೆ ಏನು?

ಆಪರೇಷನ್ ಸಿಂಧೂರವು, 2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತೀಯ ಸೇನೆ ನಡೆಸಿದ ನಿಖರ ದಾಳಿಯ ಕಾರ್ಯಾಚರಣೆಯಾಗಿದೆ. ಪಹಲ್ಗಾಮ್​ ದಾಳಿಯಲ್ಲಿ 26 ಮಂದಿ ಸತ್ತಿದ್ದರು. ಪಾಪಿ ಉಗ್ರರು ಹಿಂದುಗಳನ್ನೇ ಟಾರ್ಗೆಟ್​ ಮಾಡಿ, ಕೇವಲ ಪುರುಷರನ್ನೇ ಗುಂಡಿಟ್ಟು ಕೊಂದಿದ್ದರು. ಮೋದಿ ಹೇಳಲು ನಿಮ್ಮನ್ನು ಸಾಯಿಸದೇ ಬಿಟ್ಟಿದ್ದೇವೆ ಎಂದು ಮಹಿಳೆಯರಿಗೆ ಹೇಳಿದ್ದರು. ಈ ದಾಳಿ ಕೆಲ ಹಿಂದು ಮಹಿಳೆಯರ ಕುಂಕುಮವನ್ನು ಕಸಿದುಕೊಂಡಿತು. ಹೀಗಾಗಿ, ಈ ದಾಳಿಗೆ ಸೇಡು ತೀರಿಸಿಕೊಳ್ಳಲು ಆಪರೇಷನ್​ ಸಿಂಧೂರ ಹೆಸರಿನಲ್ಲಿ ಭಾರತೀಯ ಸೇನೆ ಉಗ್ರರ ವಿರುದ್ಧ ನಿಖರ ಕಾರ್ಯಾಚರಣೆ ನಡೆಸಿತು. ಈ ದಾಳಿಗೆ ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಲಷ್ಕರ್-ಎ-ತೊಯ್ಬಾ (LeT) ನಂತಹ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆಗಳು ಹೊಣೆಗಾರಿಕೆಯನ್ನು ಹೊತ್ತುಕೊಂಡವು. ಆದರೆ, ಪಾಕಿಸ್ತಾನ ಮಾತ್ರ ದಾಳಿಯನ್ನು ನಿರಾಕರಿಸಿತು. ಭಾರತವು ಇದಕ್ಕೂ ಮೊದಲು ಮುಂಬೈ ತಾಜ್​ ಹೋಟೆಲ್​ (2008), ಪಠಾಣ್‌ಕೋಟ್ (2016) ಮತ್ತು ಪುಲ್ವಾಮ (2019) ದಾಳಿಗಳಂತಹ ಘಟನೆಗಳಲ್ಲಿ ಪಾಕಿಸ್ತಾನ ವಿರುದ್ಧದ ಸಾಕ್ಷ್ಯಗಳನ್ನು ನೀಡಿ ಕ್ರಮ ತೆಗೆದುಕೊಳ್ಳಲು ಅಂತಾರಾಷ್ಟ್ರೀಯ ವೇದಿಕೆಯನ್ನು ಕೇಳಿಕೊಂಡಿತ್ತು. ಆದರೆ, ಈ ಬಾರಿ ಆ ಪ್ರಯತ್ನಕ್ಕೆ ಕೈ ಹಾಕದೇ ನೇರವಾಗಿ ಪಾಕ್​ ವಿರುದ್ಧ ಕ್ರಮಕ್ಕೆ ಮುಂದಾಯಿತು. ತನ್ನ ರಾಷ್ಟ್ರೀಯ ಸಾರ್ವಭೌಮತ್ವವನ್ನು ರಕ್ಷಿಸಲು ಮತ್ತು ಭಯೋತ್ಪಾದಕತೆಯನ್ನು ತಡೆಯಲು ಭಾರತ ಸರ್ಕಾರ ನಿರ್ಣಯಿಸಿತು.

2025ರ ಮೇ 7-8ರ ರಾತ್ರಿಯಲ್ಲಿ, ಭಾರತೀಯ ವಾಯುಸೇನೆಯ ರಫೇಲ್ ಜೆಟ್‌ಗಳು ಮತ್ತು ಡ್ರೋನ್‌ಗಳನ್ನು ಬಳಸಿ, ಆಪರೇಷನ್ ಸಿಂಧೂರವನ್ನು ನಡೆಸಲಾಯಿತು. ಇದು ಒಂಬತ್ತು ಭಯೋತ್ಪಾದಕ ತರಬೇತಿ ಶಿಬಿರಗಳನ್ನು ಗುರಿಯಾಗಿಸಿತು. ಅವುಗಳು ಪಾಕಿಸ್ತಾನದ ಪಂಜಾಬ್ ಪ್ರದೇಶದಲ್ಲಿ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ಇದ್ದವು. ಸ್ಕಾಲ್ಪ್ ಕ್ರೂಸ್ ಮಿಸೈಲ್‌ಗಳು, ಹ್ಯಾಮರ್ ನಿಖರ-ನಿರ್ದೇಶಿತ ಬಾಂಬ್‌ಗಳು ಮತ್ತು ಲೋಯಿಟರಿಂಗ್ ಮುನಿಷನ್‌ಗಳನ್ನು ಬಳಸಿ ದಾಳಿ ನಡೆಸಲಾಯಿತು. ಭಾರತವು ಇದನ್ನು "ನಿರ್ದಿಷ್ಟ, ಮಾಪನಾತ್ಮಕ ಮತ್ತು ಅಸ್ಥಿರಗೊಳಿಸದ" ಕ್ರಮವೆಂದು ವರ್ಗೀಕರಿಸಿತು. ಪಾಕಿಸ್ತಾನದ ಸೈನ್ಯ ಅಥವಾ ಸಿವಿಲಿಯನ್ ಸೈಟ್‌ಗಳನ್ನು ತಪ್ಪಿಸಿ, 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದಿದ್ದಾಗಿ ಹೇಳಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನವು ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಹೇಳಿತು. ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಆದರೆ, ಅಂತಿಮವಾಗಿ ಎರಡು ರಾಷ್ಟ್ರಗಳು ಕದನ ವಿರಾಮವನ್ನು ಘೋಷಿಸಿದವು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net