ಎಚ್ಚರ... ಮಚ್ಚೆ ರಹಸ್ಯ ಬಿಚ್ಚಿಟ್ಟ ಗೂಗಲ್​ ಜೆಮಿನಿ ಸ್ಯಾರಿ ಟ್ರೆಂಡ್​: ತನ್ನ ಫೋಟೋ ನೋಡಿ ಯುವತಿ ಶಾಕ್​​! Google Gemini Saree Trend

Google Gemini Saree Trend
Published on

Google Gemini Saree Trend : ಇಂದಿನ ಡಿಜಿಟಲ್​ ಯುಗದಲ್ಲಿ ದಿನಕ್ಕೊಂದು ಟ್ರೆಂಡ್​ ಹುಟ್ಟಿಕೊಳ್ಳುತ್ತಿವೆ. ಕೆಲವು ದಿನಗಳ ಹಿಂದೆ ಘಿಬ್ಲಿ ಫೋಟೋ ಟ್ರೆಂಡ್​ ವೈರಲ್​ ಆಗಿತ್ತು. ಬಳಿಕ ಆಥೆಂಟಿಕ್ ಕ್ಯಾಂಡಿಡ್ ಶಾಟ್‌ ಟ್ರೆಂಡ್​ ಮುನ್ನಲೆಗೆ ಬಂದಿತು. ಹೀಗೆ ನಾನಾ ರೀತಿಯ ಫೋಟೋ ಟ್ರೆಂಡ್​ ಸೃಷ್ಟಿಯಾಗುತ್ತಲೇ ಇದೆ. ಇದೀಗ ನ್ಯಾನೋ ಬನಾನಾ ಟ್ರೆಂಡ್ ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ. ಎಲ್ಲರೂ ಉತ್ಸಾಹದಿಂದಲೇ ಇದರಲ್ಲಿ ಭಾಗಿಯಾಗುತ್ತಿದ್ದಾರೆ. ಆದರೆ, ಇಂತಹ ಟ್ರೆಂಡ್​ಗಳ ಹಿಂದೆ ಒಂದು ಕರಾಳ ಮುಖವಿದೆ ಅನ್ನೋದನ್ನೇ ಮರೆಯುತ್ತಿದ್ದಾರೆ.

ತಮ್ಮನ್ನು ವಿವಿಧ ಸ್ಟೈಲ್​ನಲ್ಲಿ ನೋಡಿಕೊಳ್ಳುವ ಆಸೆಯಿಂದ ಡಿಜಿಟಲ್​ ಯುಗದ ಟ್ರೆಂಡ್​ಗಳಲ್ಲಿ​ ಭಾಗಿಯಾಗುತ್ತಿರುವ ಯುವ ಸಮುದಾಯ ತಮಗೆ ಗೊತ್ತಿಲ್ಲದೆಯೇ ತಮ್ಮ ಮಾಹಿತಿಯನ್ನು ಇತರರ ಕೈಗೆ ಒಪ್ಪಿಸುತ್ತಿದ್ದಾರೆ. ಈ ಹಿಂದೆ ಪ್ರಿಯಕರನಾಗಲಿ ಅಥವಾ ವರನಾಗಲಿ ಒಂದು ಹುಡುಗಿಯ ಫೋಟೋ ಪಡೆಯುವಷ್ಟರಲ್ಲಿ ಏಳು ಸಮುದ್ರದ ನೀರು ಕುಡಿಯುತ್ತಿದ್ದರು. ಆದರೆ, ಇಂದು ಒಂದು ಹುಡುಗಿಯ ಫೋಟೋ ಪಡೆಯುವುದು ಬೆಣ್ಣೆಯಲ್ಲಿ ಕೂದಲು ತೆಗೆದಷ್ಟೇ ತುಂಬಾ ಸುಲಭವಾಗಿಬಿಟ್ಟಿದೆ. ಬೆರಳ ತುದಿಯಲ್ಲೇ ಇಡೀ ಜಗತ್ತನ್ನು ನೋಡುವ ಈ ಕಾಲದಲ್ಲಿ ಗೌಪ್ಯತೆ ಎಂಬ ಅಂಶಕ್ಕೆ ಗಂಟು ಮೂಟೆ ಕಟ್ಟಲಾಗಿದೆ.

ಇನ್ನು ಎಐ ಬಂದ ಮೇಲಂತೂ ಯಾವುದು ಸತ್ಯ? ಯಾವುದು ಸುಳ್ಳು? ಅನ್ನೋ ಗೊಂದಲಕ್ಕೆ ಮನುಷ್ಯ ಸಿಲುಕಿದ್ದಾನೆ. ಅಕ್ಷರಶಃ ವಾಸ್ತವವನ್ನೇ ಮರೆತುಬಿಟ್ಟಿದ್ದಾನೆ. ಬಣ್ಣ ಬಣ್ಣದ ಫೋಟೋಗಳಿಗೆ ಮೋಡಿಯಾಗುತ್ತಿರುವ ಯುವ ಸಮುದಾಯ ತಮ್ಮ ಫೋಟೋ ಸೇರಿದಂತೆ ಅನೇಕ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ತೊಂದರೆಯಲ್ಲಿ ಸಿಲುಕುತ್ತಿದ್ದಾರೆ. ಈ ಹಿಂದೆ ಯಾರದ್ದೇ ಫೋಟೋ ಪಡೆಯಲು ವಿವಿಧ ಕಾರಣಗಳನ್ನು ನೀಡಬೇಕಿತ್ತು. ಆದರೆ, ಇಂದು ಕಾರಣವೇ ಬೇಕಿಲ್ಲ. ಒಂದು ಟ್ರೆಂಡ್​ ಸೃಷ್ಟಿ ಮಾಡಿದರೆ ಸಾಕು ಫೋಟೋಗಳು ಅದಾಗಿಯೇ ಬರುತ್ತವೆ. ಹೀಗಾಗಿ ಇಂದಿನ ಯುವ ಪೀಳಿಗೆ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿರುವಂತೆ ತೋರುತ್ತದೆ. ಅಷ್ಟಕ್ಕೂ ಇಷ್ಟೆಲ್ಲ ಪೀಠಿಕೆ ಏಕೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಸದ್ಯ ವೈರಲ್​ ಆಗುತ್ತಿರುವ ಯುವತಿಯೊಬ್ಬಳ ವಿಡಿಯೋ ನೋಡಿದರೆ ಮೇಲೆ ಹೇಳಿದ್ದೆಲ್ಲ ನಿಜ ಅನಿಸದೇ ಇರದು.

ಡೇಂಜರಸ್​ ನ್ಯಾನೋ ಬನಾನಾ ಟ್ರೆಂಡ್

ಹೌದು, ಪ್ರಸ್ತುತ ನ್ಯಾನೋ ಬನಾನಾ ಟ್ರೆಂಡ್ ಎಲ್ಲೆಡೆ ಸದ್ದು ಮಾಡುತ್ತಿದೆ. ರೆಟ್ರೋ ಶೈಲಿಯಲ್ಲಿ ತಮ್ಮನ್ನು ತಾವು ನೋಡಿಕೊಳ್ಳುವ ಆಸೆಯಿಂದ ಯುವ ಸಮುದಾಯ ಫೋಟೋಗಳನ್ನು ಅಪ್​ಲೋಡ್​ ಮಾಡುತ್ತಿದೆ. ಅಷ್ಟಕ್ಕೂ ಈ ನ್ಯಾನೂ ಬನಾನ ಟ್ರೆಂಡ್​ ಎಂದರೇನು? ಅದಕ್ಕೆ ಉತ್ತರ ಏನೆಂದರೆ, ಈ ಟ್ರೆಂಡ್​ Google Gemini AIನಿಂದ ಶುರುವಾಗಿದೆ. ಸೆಲ್ಫಿ ಫೋಟೋಗಳನ್ನು 3D ಫಿಗರಿನ್‌ಗಳಾಗಿ ಅಥವಾ ರೆಟ್ರೋ-ಸ್ಟೈಲ್ ಇಮೇಜ್‌ಗಳಾಗಿ ಪರಿವರ್ತಿಸುವುದೇ ಈ ನ್ಯಾನೋ ಬನಾನಾ ಟ್ರೆಂಡ್​. ತನ್ನ ಫೋಟೋವನ್ನು ಇದೇ ಸ್ಟೈಲ್​ನಲ್ಲಿ ನೋಡಿ ಆನಂದಿಸಲು ಯುವತಿಯೊಬ್ಬಳು ಫೋಟೋ ಅಪ್​ಲೋಡ್​ ಮಾಡಿದಾಗ ತಾನು ಅನುಭವಿಸಿದ ಭಯಾನಕ ಅನುಭವವನ್ನು ಆಕೆಯ ವಿಡಿಯೋ ಮೂಲಕ ಬಿಚ್ಚಿಟ್ಟಿದ್ದಾಳೆ. ಜಲಕ್​ಭವಾನಿ ಹೆಸರಿನ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಯುವತಿ, ನ್ಯಾನೋ ಬನಾನಾ ಟ್ರೆಂಡ್​ ಫಾಲೋ ಮಾಡುವವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾಳೆ. ಈ ಟ್ರೆಂಡ್​ ತುಂಬಾ ಡೇಂಜರ್​ ಅನ್ನೋ ಮಾತನ್ನು ಹೇಳಿದ್ದು, ವಿವರಣೆ ಸಹ ನೀಡಿದ್ದಾಳೆ.

ಮಚ್ಚೆ ರಹಸ್ಯ ಬಿಚ್ಚಿಟ್ಟ ಟ್ರೆಂಡ್​

ಅಷ್ಟಕ್ಕೂ ಯುವತಿಗೆ ಆದ ಕೆಟ್ಟ ಅನುಭವ ಏನೆಂದರೆ, ಹಸಿರು ಸಲ್ವಾರ್ ಸೂಟ್‌ನಲ್ಲಿ ತನ್ನ ಚಿತ್ರವನ್ನು ಅಪ್‌ಲೋಡ್ ಮಾಡುತ್ತಾಳೆ. ಈ ಮೂಲಕ ಗೂಗಲ್ ಜೆಮಿನಿ ನ್ಯಾನೋ ಬನಾನಾ AI ಸೀರೆ ಟ್ರೆಂಡ್ ಪ್ರಯತ್ನಿಸುತ್ತಾಳೆ. ಎಲ್ಲರಂತೆಯೇ ಆಕೆಗೂ ಎಐ ಜನರೇಟೆಡ್​ ಸ್ಯಾರಿ ವರ್ಸನ್​ನ ರೆಟ್ರೋ ಫೋಟೋ ಜನರೇಟ್​ ಆಗುತ್ತದೆ. ಅದನ್ನು ನೋಡಿ ಆಕೆ ತುಂಬಾ ಖುಷಿಯಾಗುತ್ತಾಳೆ. ಏಕೆಂದರೆ, ಆ ಫೋಟೋ ಅಷ್ಟೊಂದು ಆಕರ್ಷಕವಾಗಿರುತ್ತದೆ. ಆದರೆ, ಅದೇ ಫೋಟೋವನ್ನು ತುಂಬಾ ಡಿಟೇಲ್​ ಆಗಿ ನೋಡಿದಾಗ ಆಕೆಗೆ ಆಘಾತಕಾರಿ ಸಂಗತಿಯೊಂದು ಕಾದಿತ್ತು. ಅದೇನೆಂದರೆ, ಆ ಫೋಟೋದಲ್ಲಿ ಯುವತಿಯ ಎಡಗೈನಲ್ಲಿ ಒಂದು ಮಚ್ಚೆ ಇದೆ. ಆಘಾತಕಾರಿ ಮಾಹಿತಿ ಏನೆಂದರೆ, ಯುವತಿ ಅಪ್​ಲೋಡ್ ಮಾಡಿದ ಫೋಟೋದಲ್ಲಿ ಮಚ್ಚೆ ಕಾಣುತ್ತಿರಲಿಲ್ಲ. ಹಾಗಾದರೆ, ನನ್ನ ಎಡಗೈನಲ್ಲೇ ಮಚ್ಚೆ ಇದೆ ಅಂತ ಜೆಮಿನಿಗೆ ಹೇಗೆ ಗೊತ್ತಾಯಿತು ಎಂದು ಪ್ರಶ್ನೆ ಮಾಡಿರುವ ಯುವತಿ, ನಿಜಕ್ಕೂ ಇದು ಡೇಂಜರಸ್​ ಎಂದು ಹೇಳಿದ್ದಾಳೆ. ಅಲ್ಲದೆ, ಈ ಡಿಜಿಟಲ್​ ವೇದಿಕೆಯಲ್ಲಿ ಏನೇ ಅಪ್​ಲೋಡ್​ ಮಾಡಿದರು ತುಂಬಾ ಎಚ್ಚರಿಕೆಯಿಂದ ಇರಿ ಎಂದು ತನ್ನ ಫಾಲೋವರ್ಸ್​ಗೆ ಯುವತಿ ಸಲಹೆ ನೀಡಿದ್ದಾಳೆ.

ಯುವತಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಸಾವಿರಾರು ಕಾಮೆಂಟ್​ಗಳು ಹರಿದುಬರುತ್ತಿವೆ. ಕೆಲವು ಮಂದಿಯಂತೂ ಏನಾಗಿರಬಹುದು ಎಂದು ಊಹಿಸಿ ಕಾಮೆಂಟ್​ಗಳನ್ನು ಮಾಡಿದ್ದಾರೆ. ಹೌದು, AI ಅಷ್ಟೊಂದು ನಿಖರವಾಗಿ ಕಾರ್ಯನಿರ್ವಹಿಸುತ್ತದೆ. AI ನಿಮ್ಮ ಡಿಜಿಟಲ್ ಹೆಜ್ಜೆಗುರುತಿನಿಂದ, ನೀವು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ ಎಲ್ಲ ಫೋಟೋಗಳನ್ನು ತನ್ನತ್ತ ಸೆಳೆಯುತ್ತದೆ. ಬಳಿಕ ಇತರ ಫೋಟೋಗಳನ್ನು ಪರಿಶೀಲಿಸುತ್ತದೆ. ಅದರಲ್ಲಿ ಮಚ್ಚೆ ಗೋಚರಿಸಿದ್ದರೆ ಅದು AI ಸಮಸ್ಯೆಯಲ್ಲ ಬದಲಾಗಿ ನೀವು ಅತಿಯಾಗಿ ಫೋಟೋ ಹಂಚಿಕೊಳ್ಳುತ್ತಿರುವ ಸಮಸ್ಯೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ.

ಇದೆಲ್ಲ ಕಾಮನ್​. ಏಕೆಂದರೆ, ನಿಮ್ಮ ಎಲ್ಲ ಫೋಟೋಗಳು Google ಫೋಟೋಗಳಲ್ಲಿವೆ. ಉತ್ತಮ ಫಲಿತಾಂಶಕ್ಕಾಗಿ ಜೆಮಿನಿ ನಿಮ್ಮ ಹಳೆಯ ಫೋಟೋಗಳನ್ನೂ ಬಳಸಿರಬೇಕು ಎಂದು ಮತ್ತೊಬ್ಬರು ಕಾಮೆಂಟ್​ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಇನ್ನೊಬ್ಬ ನೆಟ್ಟಿಗ, ಎಲ್ಲ ಡಿಜಿಟಲ್​ ವೇದಿಕೆಗಳು ಎಷ್ಟು ಪರಸ್ಪರ ಸಂಬಂಧ ಹೊಂದಿವೆ ಎಂಬುದನ್ನು ನಾವಿಲ್ಲಿ ಗಮನಿಸಬಹುದು. ಇಲ್ಲಿ ಎಲ್ಲವೂ ಒಂದಕ್ಕೊಂದು ಸಂಪರ್ಕಗೊಂಡಿದೆ. ಅಂದರೆ, ನೀವು Gmail, Google ಡ್ರೈವ್‌ನಲ್ಲಿ ಸಂಗ್ರಹಿಸಿರುವ ಅಥವಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಎಲ್ಲ ಫೋಟೋಗಳು ಡೇಟಾಬೇಸ್‌ಗಳಲ್ಲಿ ಲಭ್ಯವಿದೆ. ಹೀಗಾಗಿ ಈ ರೀತಿ ಸಂಭವಿಸಿರಬಹುದು ಎಂದು ಹೇಳಿದ್ದಾರೆ.

ಇನ್ನು ಗೂಗಲ್ ಜೆಮಿನಿ ನ್ಯಾನೋ ಬನಾನಾ AI ಸೀರೆ ಟ್ರೆಂಡ್ ಮಾತ್ರ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ಸೆಲ್ಫಿಗಳನ್ನು ಬಳಸಿ, ರೆಟ್ರೋ ಶೈಲಿಯ ಫೋಟೋಗಳನ್ನು ರಚಿಸುತ್ತಿದ್ದಾರೆ. ಆದರೂ ಇದೊಂದು ಡೇಂಜರಸ್​ ಟ್ರೆಂಡ್​ ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಏಕೆಂದರೆ, ಬಳಕೆದಾರರ ಸೆಲ್ಫಿ ಫೋಟೋಗಳನ್ನು ಅಪ್‌ಲೋಡ್ ಮಾಡುವಾಗ, ಫೇಸಿಯಲ್ ಡೇಟಾ ಮತ್ತು ಮೆಟಾಡೇಟಾ (ಉದಾ: ಲೊಕೇಶನ್, ಡಿವೈಸ್ ವಿವರಗಳು) AI ಕಂಪನಿಗಳಿಗೆ ಶೇರ್ ಆಗುತ್ತದೆ. ಇದು ಡೇಟಾ ಲೀಕ್‌ಗಳು, ಐಡೆಂಟಿಟಿ ಥೆಫ್ಟ್ ಅಥವಾ ಅನಧಿಕೃತ ಬಳಕೆಗೆ ಕಾರಣವಾಗಬಹುದು. ಉದಾಹರಣೆಗೆ, ತೆಲಂಗಾಣ ಐಪಿಎಸ್​ ಅಧಿಕಾರಿ ವಿಶ್ವನಾಥ್​ ಸಜ್ಜನಾರ್‌ ಅವರು ಎಚ್ಚರಿಕೆ ನೀಡಿದ್ದು, ಇಂತಹ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವುದು ಸೈಬರ್ ಸ್ಕ್ಯಾಮ್‌ಗಳನ್ನು ಆಕರ್ಷಿಸಬಹುದು. ಬ್ಯಾಂಕ್ ಖಾತೆಗಳು ಅಥವಾ ವೈಯಕ್ತಿಕ ಮಾಹಿತಿಯನ್ನು ದುರ್ಬಳಕೆ ಮಾಡಲಾಗುತ್ತದೆ ಎಂದಿದ್ದಾರೆ.

ಇನ್ನು ಈ ಟ್ರೆಂಡ್‌ನ ಇನ್ನೊಂದು ದೊಡ್ಡ ಅಪಾಯವೆಂದರೆ ಡೀಪ್‌ಫೇಕ್‌ಗಳ ಸೃಷ್ಟಿ ಮತ್ತು ಮಿಸ್‌ಇನ್ಫರ್ಮೇಷನ್. AI ಟೂಲ್‌ಗಳು ಫೋಟೋಗಳನ್ನು ಎಡಿಟ್ ಮಾಡಿ ರಿಯಲಿಸ್ಟಿಕ್ ಆಗಿ ಮಾಡುವುದರಿಂದ, ಇವುಗಳನ್ನು ನಕಲಿ ಪೋರ್ನ್, ಫ್ರೇಮಿಂಗ್ (ಬೇರೊಬ್ಬರನ್ನು ಅಪರಾಧಕ್ಕೆ ತೆಗೆದುಕೊಳ್ಳುವುದು) ಅಥವಾ ರಾಜಕೀಯ/ಸಾಮಾಜಿಕ ಮ್ಯಾನಿಪ್ಯುಲೇಷನ್‌ಗೆ ಬಳಸಬಹುದು. ಗೂಗಲ್ SynthID ವಾಟರ್‌ಮಾರ್ಕ್‌ಗಳನ್ನು ಸೇರಿಸಿದ್ದರೂ, ಇವುಗಳನ್ನು ಸುಲಭವಾಗಿ ತೆಗೆಯಬಹುದು ಅಥವಾ ಗುರುತಿಸಲಾಗದಂತೆ ಮಾಡಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಇದರಿಂದಾಗಿ, ಬಳಕೆದಾರರು ಸಂವೇದನಶೀಲ ಫೋಟೋಗಳನ್ನು ಅಪ್‌ಲೋಡ್ ಮಾಡದಂತೆ, AI ಪಾಲಿಸಿಗಳನ್ನು ಓದಿ, ಟ್ರಸ್ಟೆಡ್ ಟೂಲ್‌ಗಳನ್ನು ಮಾತ್ರ ಬಳಸುವಂತೆ ಸಲಹೆ ನೀಡಲಾಗುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net