ಕಾಂಗ್ರೆಸ್ ನಾಯಕರ ನಿಂದನೆಗೆ ಜನರೇ ಉತ್ತರಿಸುತ್ತಾರೆ; ಖರ್ಗೆಗೆ ಟಾಂಗ್ ಕೊಟ್ಟ ಪ್ರಧಾನಿ ಮೋದಿ

PM Narendra Modi
Published on

ರಾಯಚೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿಯನ್ನು ವಿಷ ಸರ್ಪ ಎಂದು ಹೇಳಿದ್ದರು. ಬಳಿಕ ಅವರ ಪುತ್ರ ಪ್ರಿಯಾಂಕ್ ಖರ್ಗೆ ಮೋದಿಯನ್ನು ನಾಲಾಯಕ್ ಎಂದು ಕರೆದಿದ್ದರು. ಟೀಕೆಯ ಭರಾಟೆಯಲ್ಲಿ ಬಂದ ಈ ಎರಡು ಹೇಳಿಕೆಗಳು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಪ್ರಧಾನಿ ಮೋದಿ ರಾಯಚೂರಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ, ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ ಖರ್ಗೆ ಹರಿತವಾದ ಮಾತಿನ ಮೂಲಕವೇ ಚಾಟಿ ಬೀಸಿದ್ದಾರೆ.

ದೆಹಲಿ ಕುಟುಂಬ ಮೆಚ್ಚಿಸಲು ಟೀಕೆ

ಕಾಂಗ್ರೆಸ್​ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ದೆಹಲಿ ಕುಟುಂಬವನ್ನು ಮೆಚ್ಚಿಸಲು ನನ್ನನ್ನು ನಿರಂತರವಾಗಿ ಟೀಕಿಸುತ್ತಾ ಬರುತ್ತಿದ್ದಾರೆ. ಕಾಂಗ್ರೆಸ್​ನವರ ಬೈಗುಳಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಚುನಾವಣೆಯಲ್ಲಿ ಜನರೇ ಉತ್ತರ ಕೊಡುತ್ತಾರೆ ಎಂದು ಟಾಂಗ್ ಕೊಟ್ಟರು.

ಜನರೇ ಉತ್ತರ ಕೊಡುತ್ತಾರೆ

ರಾಜ್ಯದಲ್ಲಿ ಕಾಂಗ್ರೆಸ್ ನಾಯಕರಲ್ಲಿ ಅಹಂಕಾರ ತುಂಬಿ ತುಳುಕುತ್ತಿದ್ದು, ಅಶ್ಲೀಲ ಪದಗಳಿಂದ ನಿಂದಿಸುತ್ತಿದ್ದಾರೆ. ಈ ಮೂಲಕ ದೊಡ್ಡ ಪರಂಪರೆ ಹೊಂದಿರುವ ಕರ್ನಾಟಕದ ಗೌರವ ಹಾಳು ಮಾಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ನನ್ನನ್ನು ವಿಷ ಸರ್ಪ ಎಂದರೆ, ಅವರ ಪುತ್ರ ಪ್ರಿಯಾಂಕ್ ಖರ್ಗೆ ನಾಲಾಯಕ್ ಎಂದು ಹೇಳಿದ್ದಾರೆ. ಇದಕ್ಕೆಲ್ಲ ಚುನಾವಣೆಯಲ್ಲಿ ಜನರೇ ಉತ್ತರಿಸುತ್ತಾರೆ ಎಂದರು.

ಕಾಂಗ್ರೆನ್ ನಾಯಕರ ಮಾತಿನಿಂದ ದೇಶವೇ ರೋಸಿ ಹೋಗಿದೆ

ಪ್ರಧಾನಿ ಮೋದಿ ಮಾತನಾಡುತ್ತಾ, ಈ ಬಾರಿ ಕಾಂಗ್ರೆಸ್ ಕರ್ನಾಟಕದ ಮಹಾಪರಂಪರೆಯನ್ನು ಬೆಂಕಿಗೆ ಹಾಕುವ ಪ್ರಯತ್ನ ಮಾಡುತ್ತಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್​ನ ಅವಾಚ್ಯ ಶಬ್ದಗಳು, ನಿಂದನೆ, ಅವರ ಮಾತುಗಳಿಂದ ಕೇವಲ ರಾಜ್ಯವಲ್ಲದೆ, ದೇಶವೇ ರೋಸಿಹೋಗಿದೆ ಎಂದು ಕುಟುಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net