

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಟೇಕಾಫ್ ಆಗುವ ವೇಳೆ ರಣಹದ್ದು ಡಿಕ್ಕಿಯಾಗಿದೆ. ಪರಿಣಾಮ ಹೆಲಿಕಾಪ್ಟರ್ ವಿಂಡೋ ಗ್ಲಾಸ್ ಪುಡಿಪುಡಿಯಾಗಿದೆ. ಕೂಡಲೇ ಪೈಲಟ್ ಹೆಲಿಕಾಪ್ಟರ್ನ್ನು ಭೂಸ್ಪರ್ಶ ಮಾಡಿದ್ದು, ಭಾರೀ ಅನಾಹುತವೊಂದು ತಪ್ಪಿದೆ.
ಡಿ.ಕೆ.ಶಿವಕುಮಾರ್ ಎಚ್ಎಎಲ್ ವಿಮಾನ ನಿಲ್ದಾಣದಿಂದ ಕೋಲಾರ ಜಿಲ್ಲೆಯ ಮುಳಬಾಗಿಲಿಗೆ ಹೆಲಿಕಾಪ್ಟರ್ ಮೂಲಕ ತೆರಳಲು ನಿರ್ಧರಿಸಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ರಣಹದ್ದು ಡಿಕ್ಕಿಯಾಗಿ ಗಾಜು ಪುಡಿಯಾದ ಪರಿಣಾಮ ಹೆಲಿಕಾಪ್ಟರ್ ಪ್ರಯಾಣವನ್ನು ಡಿಕೆಶಿ ಮೊಟಕುಗೊಳಿಸಿದ್ದಾರೆ. ಕೊನೆಗೆ ರಸ್ತೆ ಮಾರ್ಗವಾಗಿ ತೆರಳಿದ್ದಾರೆ.
ಜಕ್ಕೂರು ವಿಮಾನ ನಿಲ್ದಾಣದಲ್ಲಿ ಡಿ.ಕೆ ಶಿವಕುಮಾರ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿಯಾದ ಪರಿಣಾಮ ಗಾಜು ಒಡೆದಿದ್ದು ಯಾವುದೇ ಅನಾಹುತ ಸಂಭವಿಸದೆ, ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದೆ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ತಿಳಿಸಿದೆ.