

ಕಲಬುರಗಿ: ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಸದ್ಯ ಬಿಜೆಪಿ ಪರ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ವಿವಿಧೆಡೆ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಕಲಬುರಗಿಯಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ.
ಪ್ರಧಾನಿ ಮೋದಿ ಹುಮನಾಬಾದ ರಸ್ತೆಯಲ್ಲಿರುವ ಕೆಎಂಎಫ್ ಡೈರಿ ಸರ್ಕಲ್ನಿಂದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದವರೆಗೆ ಸುಮಾರು 5 ಕಿಮೀಗಳಷ್ಟು ದೂರ ರೋಡ್ ಶೋ ನಡೆಸಿದ್ದಾರೆ. ಈ ವೇಳೆ ನೆಚ್ಚಿನ ಪ್ರಧಾನಿಯನ್ನು ಕಣ್ತುಂಬಿಕೊಳ್ಳಲು ರಸ್ತೆಯ ಎರಡೂ ಭಾಗದಲ್ಲಿ ಕಿಕ್ಕಿರಿದು ಜನರು ಸೇರಿದ್ದರು.
ಪುಟ್ಟ ಮಕ್ಕಳು ರಾಮ, ಲಕ್ಷ್ಮಣ, ಒನಕೆ ಓಬವ್ವ ವೇಷ ಧರಿಸಿ ಬರುವ ಮೂಲಕ ರೋಡ್ ಶೋ ವೇಳೆ ಗಮನ ಸೆಳೆದಿದ್ದಾರೆ. ಜತೆಗೆ ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಕೇಸರಿ ಶಾಲು ಧರಿಸಿ ಮಿಂಚಿದ್ದಾರೆ. ಮೂರು ಸ್ಥಳಗಳಲ್ಲಿ ಸಾರ್ವಜನಿಕ ಸಭೆ ಉದ್ಧೇಶಿದ ಬಳಿಕ ಕಲಬುರಗಿಯಲ್ಲಿ ತೆರೆದ ವಾಹನದಲ್ಲಿ ಪ್ರಧಾನಿ ಮೋದಿ ರೋಡ್ ಶೋ ನಡೆಸುವ ಮೂಲಕ ಹವಾ ಸೃಷ್ಟಿಸಿದರು.
ರಸ್ತೆಯುದ್ದಕ್ಕೂ ನೆರದ ಜನಸ್ತೋಮ ಹೂಮಳೆಗರೆದು, ಜಯಘೋಷ ಮೊಳಗಿಸಿತು. ರಸ್ತೆಯ ಎರಡೂ ಬದಿಯಲ್ಲಿ ಸೇರಿದ್ದ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ಮೋದಿ… ಮೋದಿ… ಮೋದಿ… ಎಂದು ಘೋಷಣೆ ಕೂಗಿದರು.
ಮೋದಿ ರೋಡ್ ಶೋಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಎಸ್ಪಿಜಿ ಕಮಾಂಡೋ ಜತೆಗೆ ಎಡಿಜಿಪಿ ಅಲೋಕ್ ಕುಮಾರ್ ಭದ್ರತೆಯ ಜವಾಬ್ದಾರಿ ವಹಿಸಿಕೊಂಡಿದ್ದರು.