POKಯ ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ಪಾಕ್​ ಸೇನಾ ಹೆಲಿಕಾಪ್ಟರ್ ಪತನ, ಐವರು ಸಿಬ್ಬಂದಿ ಮೃತ| Helicopter Crash

HelicopterCrash 10
Published on

Helicopter Crash: ಪಾಕ್ ಅಕ್ರಮಿತ ಕಾಶ್ಮೀರಾದ ಗಿಲ್ಗಿಟ್-ಬಾಲ್ಟಿಸ್ತಾನದ ಡೈಮರ್ ಜಿಲ್ಲೆಯ ಥಾರ್ ಕಣಿವೆಯಲ್ಲಿ ಪಾಕಿಸ್ತಾನ ಸೇನೆಯ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ಇದರಲ್ಲಿದ್ದ ಎಲ್ಲಾ 5 ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಸೋಮವಾರ (ಸೆಪ್ಟಂಬರ್,01) ಅಧಿಕಾರಿಗಳು ತಿಳಿಸಿದ್ದಾರೆ.

ಈ ಅಪಘಾತದ ಬಗ್ಗೆ ಮಾಹಿತಿ ನೀಡಿರುವ ಗಿಲ್ಗಿಟ್-ಬಾಲ್ಟಿಸ್ತಾನ್ ಸರ್ಕಾರದ ವಕ್ತಾರ ಫೈಜುಲ್ಲಾ ಫರಾಕ್, ಥಾರ್ ಕಣಿವೆಯ ಹುದೂರ್ ಗ್ರಾಮದಲ್ಲಿ ಹೆಲಿಪ್ಯಾಡ್‌ ಲ್ಯಾಂಡಿಂಗ್ ಪರೀಕ್ಷೆ ಮಾಡುವಾಗ ಹೆಲಿಕಾಪ್ಟರ್ ಪತನಗೊಂಡಿತು. ತಾಂತ್ರಿಕ ದೋಷದಿಂದಾಗಿ ಈ ಅಪಘಾತ ಸಂಭವಿಸಿದ್ದು, ಇಬ್ಬರು ಪೈಲಟ್‌ಗಳು ಮತ್ತು ಮೂವರು ತಾಂತ್ರಿಕ ಸಿಬ್ಬಂದಿ ಮೃತಪಟ್ಟಿದ್ದಾರೆಂದು ಹೇಳಿದ್ದಾರೆ.

ನಮ್ಮ ಹೆಲಿಕಾಪ್ಟರ್‌ಗಳಲ್ಲಿ ಒಂದು ಚಿಲಾಸ್‌ನ ಥಾರ್‌ನಲ್ಲಿ ಅಪಘಾತಕ್ಕೀಡಾಗಿದೆ. ತಾಂತ್ರಿಕ ದೋಷದಿಂದಾಗಿ ಲ್ಯಾಂಡಿಂಗ್ ಸಮಯದಲ್ಲಿ ಅಪಘಾತ ಸಂಭವಿಸಿದೆ ಎಂದು ಫರಾಕ್ ತಿಳಿಸಿದ್ದಾರೆ.

ಅಪಘಾತ ಸಂಭವಿಸಿದಾಗ ಹೆಲಿಕಾಪ್ಟರ್ ತಪಾಸಣೆಯಲ್ಲಿ ತೊಡಗಿತ್ತು ಎಂದು ಡೈಮರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಅಬ್ದುಲ್ ಹಮೀದ್ ಹೇಳಿದ್ದಾರೆ. ಇಬ್ಬರು ಪೈಲಟ್‌ಗಳು ಸೇರಿದಂತೆ ಐದು ಸಾವುನೋವುಗಳು ವರದಿಯಾಗಿವೆ ಎಂದು ಹಮೀದ್ ದೃಢಪಡಿಸಿದ್ದಾರೆ. ಅಲ್ಲದೆ, ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿದೆ ಎಂದು ಸೂಚಿಸುತ್ತಿದ್ದರೂ, ಈ ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

ಖೈಬರ್ ಪಖ್ತುಂಖ್ವಾದಲ್ಲಿ ಹಿಂದಿನ ಅಪಘಾತಗಳು

ಕಳೆದ ಆಗಸ್ಟ್ 15 ರಂದು, ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಮೊಹಮ್ಮದ್ ಜಿಲ್ಲೆಯಲ್ಲಿ MI-17 ಹೆಲಿಕಾಪ್ಟರ್ ಅಪಘಾತವಾಗಿತ್ತು. ಹೆಲಿಕಾಪ್ಟರ್ ಪ್ರವಾಹ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿತ್ತು, ಆಹಾರ ಸರಬರಾಜುಗಳನ್ನು ಸಾಗಿಸುತ್ತಿತ್ತು. ಅಲ್ಲದೆ, ಕೆಟ್ಟ ಹವಾಮಾನವು ಅಪಘಾತಕ್ಕೆ ಕಾರಣವಾಯಿತು. ಆ ಘಟನೆಯಲ್ಲಿ ಇಬ್ಬರು ಪೈಲಟ್‌ಗಳು ಸೇರಿದಂತೆ ಐದು ಜನರು ಪ್ರಾಣ ಕಳೆದುಕೊಂಡಿದ್ದರು.

ಪಾಕ್​ನಲ್ಲಿ ಆದ ಹಿಂದಿನ ಹೆಲಿಕಾಪ್ಟರ್ ಅಪಘಾತಗಳು

ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನವು ಹಲವಾರು ಹೆಲಿಕಾಪ್ಟರ್ ಅಪಘಾತಗಳಿಗೆ ಸಾಕ್ಷಿಯಾಗಿದೆ. 2024ರ ಸೆಪ್ಟೆಂಬರ್ 28, ರಂದು, ತೈಲ ಕಂಪನಿ ಉದ್ಯೋಗಿಗಳನ್ನು ಕರೆದೊಯ್ಯುತ್ತಿದ್ದ ಚಾರ್ಟರ್ಡ್ ಹೆಲಿಕಾಪ್ಟರ್ ಉತ್ತರ ವಜೀರಿಸ್ತಾನದಲ್ಲಿ ಎಂಜಿನ್ ವಿಫಲವಾದ ಕಾರಣ ಅಪಘಾತವಾಗಿತ್ತು.ಅಲ್ಲದೆ, ಪೈಲಟ್ ತುರ್ತು ಭೂಸ್ಪರ್ಶಕ್ಕೆ ಪ್ರಯತ್ನಿಸಿದರು, ಬದುಕುಳಿಯಲಿಲ್ಲ. ಇದಕ್ಕೂ ಮೊದಲು, 2022ರ ಸೆಪ್ಟೆಂಬರ್,25 ರಂದು ಬಲೂಚಿಸ್ತಾನದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಆರು ಪಾಕಿಸ್ತಾನ ಸೇನಾ ಸಿಬ್ಬಂದಿ ಸಾವನ್ನಪ್ಪಿದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net