ಅಫ್ಘಾನಿಸ್ತಾನದಲ್ಲಿ ಭೂಕಂಪ: ಸಾವಿನ ಸಂಖ್ಯೆ 800ಕ್ಕೆ ಏರಿಕೆ, ಮಾನವೀಯ ನೆರವು ನೀಡಲು ಸಿದ್ಧ ಎಂದ ಪ್ರಧಾನಿ ಮೋದಿ| Earthquake

Earthquake 01
Published on

Earthquake: ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ನೂರಾರು 800ಕ್ಕೂ ಆಧಿಕ ಜನ ಸಾವನ್ನಪ್ಪಿದ್ದು, ಘಟನೆಯಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಸೆಪ್ಟಂಬರ್,01) ತೀವ್ರ ಸಂಪಾಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಪ್ರಧಾನಿ ಮೋದಿ, ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಿಂದ ಜೀವಹಾನಿಯಾಗಿರುವುದಕ್ಕೆ ತೀವ್ರ ದುಃಖವಾಗಿದೆ. ಈ ಕಷ್ಟದ ಸಮಯದಲ್ಲಿ ನಮ್ಮ ಪ್ರಾರ್ಥನೆಗಳು ಮೃತರ ಕುಟುಂಬಗಳೊಂದಿಗೆ ಇವೆ.ಅಲ್ಲದೆ, ಭೂಕಂಪದಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ಭಾರತವು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲಾ ಮಾನವೀಯ ನೆರವು ಮತ್ತು ಪರಿಹಾರವನ್ನು ಒದಗಿಸಲು ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ವಿದೇಶಾಂಗ ಸಚಿವ ಜೈಶಂಕರ್, ಅಫ್ಘಾನಿಸ್ತಾನದ ಕುನಾರ್ ಪ್ರಾಂತ್ಯದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪವು ತೀವ್ರ ಕಳವಳಕಾರಿ ವಿಷಯವಾಗಿದೆ. ಅಫ್ಘಾನ್ ಜನರು ಇದಕ್ಕೆ ಸ್ಪಂದಿಸುತ್ತಿರುವಾಗ ಅವರಿಗೆ ನಮ್ಮ ಬೆಂಬಲ ಮತ್ತು ಒಗ್ಗಟ್ಟನ್ನು ಸೂಚಿಸುತ್ತೇವೆ.ಅಲ್ಲದೆ, ಅಗತ್ಯವಿರುವ ಸಮಯದಲ್ಲಿ ಭಾರತ ಸಹಾಯ ಮಾಡುತ್ತದೆ. ಮೃತಪಟ್ಟವರ ಕುಟುಂಬಗಳಿಗೆ ನಮ್ಮ ಸಂತಾಪ ಸೂಚಿಸುತ್ತೇವೆ ಮತ್ತು ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಬೇಕೆಂದು ನಮ್ಮ ಪ್ರಾರ್ಥನೆಗಳು ಸಲ್ಲಿಸುತ್ತೇನೆ ಎಂದು ಜೈಶಂಕರ್​ ಬರೆದುಕೊಂಡಿದ್ದಾರೆ.

ಅಫ್ಘಾನಿಸ್ತಾನದ ಪೂರ್ವದಲ್ಲಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 800 ಜನರು ಸಾವನ್ನಪ್ಪಿದ್ದು, 2,500 ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಭಾನುವಾರ (ಆಗಸ್ಟ್ 31, 2025) ತಡರಾತ್ರಿ ಸಂಭವಿಸಿದ 6.0 ತೀವ್ರತೆಯ ಭೂಕಂಪವು ನೆರೆಯ ನಂಗಹಾರ್ ಪ್ರಾಂತ್ಯದ ಜಲಾಲಾಬಾದ್ ನಗರದ ಬಳಿಯ ಕುನಾರ್ ಪ್ರಾಂತ್ಯದ ಹಲವಾರು ಪಟ್ಟಣಗಳನ್ನು ಅಪ್ಪಳಿಸಿದೆ ಎಂದು ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net