

North India: ನಿರಂತರ ಮಳೆಯಿಂದ ಉತ್ತರ ಭಾರತದ ಹಲವಾರು ರಾಜ್ಯಗಳು ತತ್ತರಿಸಿದ್ದು, ಭಾರಿ ಪ್ರವಾಹ ಸಂಭವಿಸಿದೆ. ಅಲ್ಲದೆ, ಉತ್ತರದ ಪ್ರಮುಖ ಪರ್ವತ ರಾಜ್ಯಗಳಾದ ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಸೋಮವಾರ (ಸಪ್ಟೆಂಬರ್,01) ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಉತ್ತರಾಖಂಡಕ್ಕೆ ಮುಂದಿನ 48 ಗಂಟೆಗಳು ನಿರ್ಣಾಯಕ ಎಂದು ಹೇಳಿದ್ದಾರೆ.ಅಲ್ಲದೆ, ಸುರಿಯುತ್ತಿರುವ ಭಾರಿ ಮಳೆಯಿಂದ ಮನೆಗಳಿಗೆ ಹಾನಿಗೊಳಗಾಗಿದ್ದು, ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದ ಪ್ರಮುಖ ಜಿಲ್ಲೆಗಳಾದ ಚಂಬಾ ಮತ್ತು ಶಿಮ್ಲಾದ ಕೆಲವು ಭಾಗಗಳು ಸೇರಿದಂತೆ ನೈಸರ್ಗಿಕ ವಿಕೋಪಗಳು ಸಂಭವಿಸುತ್ತಿವೆ. ಚಂಬಾದಲ್ಲಿ ನಡೆದ ಜನಪ್ರಿಯ ಮಣಿಮಹೇಶ್ ಯಾತ್ರೆಯ ಸಂದರ್ಭದಲ್ಲಿ ಒಟ್ಟು 16 ಭಕ್ತರು ಸಾವನ್ನಪ್ಪಿದರು. ಕೆಟ್ಟ ಹವಾಮಾನದಿಂದಾಗಿ ತೀರ್ಥಯಾತ್ರೆಯನ್ನು ನಿಷೇಧಿಸಲಾಗಿದೆ. ಇದರಿಂದಾಗಿ 15,000ಕ್ಕೂ ಹೆಚ್ಚು ಭಕ್ತರು ಮಳೆಯಿಂದ ಸಿಲುಕಿಕೊಂಡರು.
ಮಳೆಗಾಲ ಆರಂಭವಾದಾಗಿನಿಂದ ಹಿಮಾಚಲ ಪ್ರದೇಶದಲ್ಲಿ ನಿರಂತರ ಮಳೆಯಿಂದ ಉಂಟಾದ ನೈಸರ್ಗಿಕ ವಿಕೋಪಗಳಿಂದ 300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಅಲ್ಲದೆ, ಸೋಮವಾರ ಈ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ಚಂಬಾದಲ್ಲಿ 16 ಸಾವುಗಳು ಮತ್ತು ಶಿಮ್ಲಾದಲ್ಲಿ ಭೂಕುಸಿತದಿಂದ ಮನೆ ಮಣ್ಣುಪಾಲಾದ ನಂತರ ಮೂವರು ಸಾವುಗಲಾಗಿವೆ ಎಂದು ವರದಿಯಾಗಿದೆ.
ಹಿಮಾಚಲದಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳು ಹಾಗೂ 1,236 ವಿದ್ಯುತ್ ಟ್ರ್ಯಾನ್ಸ್ಫರ್ಮರ್ಗಳು ಮತ್ತು 424 ನೀರು ಸರಬರಾಜು ಯೋಜನೆಗಳು ಸೇರಿದಂತೆ 819 ರಸ್ತೆಗಳು ಅಸ್ತವ್ಯಸ್ತಗೊಂಡಿವೆ.ಅಲ್ಲದೆ, ಚಂಬಾದಲ್ಲಿ 253, ಮಂಡಿಯಲ್ಲಿ 206, ಕುಲ್ಲುದಲ್ಲಿ 175 ಮತ್ತು ಕಾಂಗ್ರಾದಲ್ಲಿ 61 ರಸ್ತೆಗಳು ನಾಶವಾಗಿವೆ.
ಮಳೆಯಿಂದಾಗಿ ಹವಾಮಾನ ಪರಿಸ್ಥಿತಿ ಮತ್ತು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳ ದೃಷ್ಟಿಯಿಂದ ಮುಂದಿನ 24-48 ಗಂಟೆಗಳು ಉತ್ತರಾಖಂಡದಲ್ಲಿ ನಿರ್ಣಾಯಕವಾಗಿರುತ್ತವೆ ಎಂದು ಮುಖ್ಯಮಂತ್ರಿ ಧಾಮಿ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಿಎಂ ಧಾಮಿ, ನಮ್ಮ ರಾಜ್ಯದ ಕೆಲವು ಜಿಲ್ಲೆಗಳು ರೆಡ್ ಅಲರ್ಟ್‌ನಲ್ಲಿವೆ. ಹಲವು ಜಿಲ್ಲೆಗಳು ಆರೆಂಜ್ ಅಲರ್ಟ್‌ನಲ್ಲಿವೆ. ಮುಂದಿನ 24-48 ಗಂಟೆಗಳು ನಮ್ಮಗೆ ನಿರ್ಣಾಯಕವಾಗಿದೆ. ಹಿಮಾಚಲದ ಸಂಪೂರ್ಣ ಜಿಲ್ಲಾಡಳಿತ, NDRF, SDRF ಮತ್ತು ಎಲ್ಲಾ ಇಲಾಖೆಗಳು ಎಚ್ಚರವಾಗಿವೆ. ಅಲ್ಲದೆ, ನಾನಕ್ ಸಾಗರ್ ಅಣೆಕಟ್ಟನ್ನು ಸಹ ನಾವು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಅದು ಅಪಾಯದ ಮಟ್ಟಕ್ಕಿಂತ 5 ಅಡಿ ಕೆಳಗೆ ಹರಿಯುತ್ತಿದೆ. ಎಂದು ಹಿಮಾಚಲ ಸಿಎಂ ತಿಳಿಸಿದ್ದಾರೆ.
ಪಂಜಾಬ್‌ನಲ್ಲಿನ ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಎಲ್ಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಸೆಪ್ಟೆಂಬರ್ 3ರವರೆಗೆ ಮುಚ್ಚಲಾಗಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್, ಹಾಸ್ಟೆಲ್‌ಗಳಲ್ಲಿ ಇರುವ ವಿದ್ಯಾರ್ಥಿಗಳ ಯೋಗಕ್ಷೇಮದ ಜವಾಬ್ದಾರಿ ಆಯಾ ಆಡಳಿತಗಳ ಮೇಲಿದೆ. ಸ್ಥಳೀಯ ಅಧಿಕಾರಿಗಳು ಹೊರಡಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರತಿಯೊಬ್ಬ ವಿದ್ಯಾರ್ಥಿಗೂ ವಿನಂತಿಸಲಾಗಿದೆ ಎಂದು ಹೇಳಿದ್ದಾರೆ.
ಪಂಜಾಬ್ನ ಗುರುದಾಸ್ಪುರ, ಹೋಶಿಯಾರ್ಪುರ್, ಕಪುರ್ತಲಾ, ಜಲಂಧರ್, ಪಟಿಯಾಲ ಮತ್ತು ನವಾಶಹರ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ನೀಡಲಾಗಿದ್ದು, ಇತರ ಜಿಲ್ಲೆಗಳಿಗೆ ಯಲ್ಲೋ ಮತ್ತು ಆರೆಂಜ್ ಆರ್ಲಟ್ ನೀಡಲಾಗಿದೆ. ಪ್ರವಾಹ ಕುಟುಂಬಗಳಿಗೆ ಕುಡಿಯುವ ನೀರು ಸೇರಿದಂತೆ ಪರಿಹಾರ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ ಎಂದು ಬಿಎಸ್‌ಎಫ್ ಭಾನುವಾರ (ಆಗಸ್ಟ್,31) ತಿಳಿಸಿದೆ.(ಏಜೆನ್ಸೀಸ್)