

SIR: ಬಿಹಾರದಲ್ಲಿ ಚುನಾವಣಾ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯು (SIR) ವಿಶ್ವಾಸದ ವಿಷಯವಾಗಿದೆ. ಅಲ್ಲದೆ, ಇದರಲ್ಲಿ ರಾಜಕೀಯ ಪಕ್ಷಗಳು ತಮ್ಮನ್ನು ತಾವು ಸಕ್ರಿಯಗೊಳಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ (ಸೆಪ್ಟಂಬರ್,01) ಹೇಳಿದೆ.
ಭಾರತ ಚುನಾವಣಾ ಆಯೋಗ ಪ್ರಕಟಿಸಿದ SIR ಕರಡು ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸೆಪ್ಟೆಂಬರ್ 1ರ ಗಡುವನ್ನು ವಿಸ್ತರಿಸುವಂತೆ ಬಿಹಾರದ ರಾಜಕೀಯ ನಾಯಕರು ಅರ್ಜಿ ಸಲ್ಲಿಸಿದ್ದರು. ಈ ಆರ್ಜಿಗೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ವಿಚಾರಣೆ ನಡೆಸಿತು.
ಸೆಪ್ಟೆಂಬರ್ 1ರ ಗಡುವಿನ ನಂತರ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಅಲ್ಲದೆ, ಪಟ್ಟಿಯನ್ನು ಅಂತಿಮಗೊಳಿಸಿದ ನಂತರವೂ ಪರಿಗಣಿಸಲಾಗುವುದು ಎಂಬ ಚುನಾವಣಾ ಆಯೋಗದ ವಾದವನ್ನು ಸುಪ್ರೀಂ ಕೋರ್ಟ್ ಗಮನಿಸಿದೆ ಎಂದು ವರದಿಯಾಗಿದೆ. ಈ ಆರ್ಜಿಯ ವಿಚಾರಣೆಯಲ್ಲಿ ಚುನಾವಣಾ ಆಯೋಗದ ಪರವಾಗಿ ಹಿರಿಯ ವಕೀಲ ರಾಕೇಶ್ ದ್ವಿವೇದಿ, ರಾಜಕೀಯ ಪಕ್ಷಗಳು ಮತದಾರರನ್ನು ಕರಡು ಪಟ್ಟಿಯಿಂದ ಅಳಿಸಲು ಆಕ್ಷೇಪಣೆಗಳನ್ನು ಸಲ್ಲಿಸುತ್ತಿವೆ. ಆದರೆ ಇದು ತುಂಬಾ ವಿಚಿತ್ರ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ವಕೀಲ ಪ್ರಶಾಂತ್ ಭೂಷಣ್,ಆಧಾರ್ ಸೇರ್ಪಡೆಗೆ ಆಗಸ್ಟ್ 22ರಂದು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು. ಚುನಾವಣಾ ಸಂಸ್ಥೆಯು ಪಾರದರ್ಶಕತೆಯ ಬಗ್ಗೆ ತನ್ನದೇ ಆದ ನಿಯಮಗಳನ್ನು ಅನುಸರಿಸುತ್ತಿಲ್ಲ ಎಂದು ಪ್ರಶಾಂತ್ ವಾದಿಸಿದರು. ಇದು ಮೊದಲ ಭಾಗದ ಸಲ್ಲಿಕೆಯಾಗಿದೆ ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ತಿಳಿಸಿದರು.
ಸೋಮವಾರ ಸುಪ್ರೀಂ ಕೋರ್ಟ್ ಮುಂದೆ ಪಟ್ಟಿ ಮಾಡಲಾದ ಅರ್ಜಿಗಳಲ್ಲಿ ಯಾವುದೇ ಆಪ್ಲಿಕೇಶನ್ ಸಲ್ಲಿಕೆಯಾಗಿಲ್ಲ ಎಂದು ದ್ವಿವೇದಿ ವಾದಿಸಿದರು. ಅಲ್ಲದೆ, ರಾಜಕೀಯ ಪಕ್ಷಗಳ ಸಮ್ಮುಖದಲ್ಲಿ ಈ ನಿರ್ದಿಷ್ಟ ಕಾಳಜಿಗಳನ್ನು ಉತ್ತಮವಾಗಿ ಪರಿಗಣಿಸಲಾಗುವುದು ಎಂದು ನ್ಯಾಯಮೂರ್ತಿ ಕಾಂತ್ ಹೇಳಿದರು.
ವಿರೋಧ ಪಕ್ಷಗಳಿಗೆ ನಂಬಿಕೆ ಕೊರತೆ ಇದೆ. ಈ ಅಂತರವನ್ನು ಕಡಿಮೆ ಮಾಡಲು ಹಲವು ಸದಸ್ಯರ ಒದಗಿಸುವಂತೆ ನಾವು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಕೇಳಬಹುದು ಎಂದು ಅವರು ಹೇಳಿರುವುದಾಗಿ ಲೈವ್‌ಲಾ ವರದಿ ಮಾಡಿದೆ.
ಸಮಯ ವಿಸ್ತರಣೆಗೆ ಸಂಬಂಧಿಸಿದಂತೆ, ಸೆಪ್ಟೆಂಬರ್ 1ರ ನಂತರ SIRಗೆ ಆಕ್ಷೇಪಣೆಗಳು ಅಥವಾ ತಿದ್ದುಪಡಿಗಳನ್ನು ಸಲ್ಲಿಸುವುದನ್ನು ನಿಷೇಧಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ಅಲ್ಲದೆ, ಗಡುವಿನ ನಂತರವೂ ಅಂದರೆ ಆಕ್ಷೇಪಣೆಗಳು ಮತ್ತು ತಿದ್ದುಪಡಿಗಳನ್ನು ಸಲ್ಲಿಸಬಹುದು ಮತ್ತು ಪಟ್ಟಿಯನ್ನು ಅಂತಿಮಗೊಳಿಸಿದ ನಂತರವೂ ಅದನ್ನು ಪರಿಗಣಿಸಲಾಗುತ್ತದೆ ಎಂದು ಸುಪ್ರಿಂ ತಿಳಿಸಿದೆ.
ಬಿಹಾರ ಚುನಾವಣೆಯ ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕದವರೆಗೆ ಪ್ರಕ್ರಿಯೆಯು ಮುಂದುವರಿಯುತ್ತದೆ ಮತ್ತು ಎಲ್ಲಾ ಸೇರ್ಪಡೆಗಳನ್ನು ಅಂತಿಮ ಪಟ್ಟಿಯಲ್ಲಿ ಇರಿಸಲಾಗಿಲಾಗುತ್ತದೆ. ಈ ನಿಲುವಿನ ಹಿನ್ನೆಲೆಯಲ್ಲಿ, ಆಕ್ಷೇಪಣೆಗಳು ಹಾಗೂ ತಿದ್ದುಪಡಿಗಳನ್ನು ಸಲ್ಲಿಸುವುದನ್ನು ಮುಂದುವರಿಸಲಿ. ಈ ಮಧ್ಯೆ, ರಾಜಕೀಯ ಪಕ್ಷಗಳು,ಅರ್ಜಿದಾರರು ಟಿಪ್ಪಣಿಗೆ ಪ್ರತಿಕ್ರಿಯೆಯಾಗಿ ತಮ್ಮ ಅಫಿಡವಿಟ್‌ಗಳನ್ನು ಸಲ್ಲಿಸಬಹುದು ಎಂದು ಸುಪ್ರೀಂ ಆದೇಶ ನೀಡಿದೆ. (ಏಜೆನ್ಸೀಸ್)