ಕೆ.ಜಿ.ಗೆ 25 ರೂಪಾಯಿಯಂತೆ ಸಿಗಲಿದೆ ಈರುಳ್ಳಿ; ಎಲ್ಲಿ, ಯಾವಾಗ? ಇಲ್ಲಿದೆ ವಿವರ

Onion (1)
Published on

ನವದೆಹಲಿ: ಟೊಮ್ಯಾಟೋ ಬೆಲೆ ಗಗನಕ್ಕೇರಿದ ಬೆನ್ನಿಗೇ ಈರುಳ್ಳಿ ಕೂಡ ದುಬಾರಿಯಾಗಿದ್ದು, ಸಾರ್ವಜನಿಕರನೇಕರಿಗೆ ತಲೆನೋವಾಗಿತ್ತು. ಆದರೆ ಇದೀಗ ಸರ್ಕಾರದ ಮಧ್ಯಪ್ರವೇಶದಿಂದಾಗಿ ಒಂದು ಕೆ.ಜಿ.ಗೆ 25 ರೂಪಾಯಿಯಂತೆ ಈರುಳ್ಳಿ ಸಿಗಲಿದೆ.

ದೇಶದಲ್ಲಿ ಈರುಳ್ಳಿ ದುಬಾರಿ ಆಗಿದ್ದರಿಂದ ಸರ್ಕಾರವು ಈ ವರ್ಷ ಈರುಳ್ಳಿ ಬಫರ್ ಪ್ರಮಾಣವನ್ನು 3 ಲಕ್ಷ ಮೆಟ್ರಿಕ್ ಟನ್​ಗಳಿಂದ 5 ಲಕ್ಷ ಮೆಟ್ರಿಕ್ ಟನ್​ಗಳಿಗೆ ಏರಿಸಿದೆ. ಅಲ್ಲದೆ ಪ್ರಮುಖ ಬಳಕೆ ಕೇಂದ್ರಗಳಲ್ಲಿ ಸಂಗ್ರಹಿಸಿದ ದಾಸ್ತಾನುಗಳ ಮಾಪನಾಂಕ ವಿಲೇವಾರಿ ಜೊತೆಗೆ ತಲಾ 1 ಲಕ್ಷ ಟನ್‌ ಈರುಳ್ಳಿ ಸಂಗ್ರಹಿಸಲು ಎನ್‌ಸಿಸಿಎಫ್ ಮತ್ತು ಎನ್‌ಎಎಫ್‌ಇಡಿಗೆ ಗ್ರಾಹಕ ವ್ಯವಹಾರಗಳ ಇಲಾಖೆಯು ನಿರ್ದೇಶನ ನೀಡಿದೆ.

ಚಿಲ್ಲರೆ ಬೆಲೆಗಳು ಅಖಿಲ ಭಾರತ ಸರಾಸರಿಗಿಂತ ಹೆಚ್ಚಿರುವ ಅಥವಾ ಹಿಂದಿನ ತಿಂಗಳಿಗಿಂತ ಗಣನೀಯವಾಗಿ ಹೆಚ್ಚಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪ್ರಮುಖ ಮಾರುಕಟ್ಟೆಗಳನ್ನು ಗುರಿಯಾಗಿಸಿಕೊಂಡು ಬಫರ್‌ನಿಂದ ಈರುಳ್ಳಿ ವಿಲೇವಾರಿ ಪ್ರಾರಂಭವಾಗಿದೆ. ಇಲ್ಲಿಯವರೆಗೆ ಬಫರ್‌ನಿಂದ ಸುಮಾರು 1,400 ಮೆಟ್ರಿಕ್​ ಈರುಳ್ಳಿಯನ್ನು ಉದ್ದೇಶಿತ ಮಾರುಕಟ್ಟೆಗಳಿಗೆ ರವಾನಿಸಲಾಗಿದೆ ಮತ್ತು ಲಭ್ಯತೆಯನ್ನು ಹೆಚ್ಚಿಸಲು ನಿರಂತರವಾಗಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.

ಪ್ರಮುಖ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡುವುದರ ಹೊರತಾಗಿ, ಬಫರ್‌ನಿಂದ ಈರುಳ್ಳಿಯನ್ನು ಚಿಲ್ಲರೆ ಗ್ರಾಹಕರಿಗೆ ಕೆಜಿಗೆ 25 ರೂಪಾಯಿಯಂತೆ ಸಬ್ಸಿಡಿ ದರದಲ್ಲಿ ಎನ್​​ಸಿಸಿಎಫ್​ನ ಚಿಲ್ಲರೆ ಮಳಿಗೆಗಳು ಮತ್ತು ಮೊಬೈಲ್ ವ್ಯಾನ್‌ಗಳ ಮೂಲಕ ಆ. 21ರಿಂದಲೇ ಲಭಿಸಲಿದೆ. ಚಿಲ್ಲರೆ ಮಾರಾಟದ ಇತರ ಏಜೆನ್ಸಿಗಳು ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳನ್ನು ಒಳಗೊಳ್ಳುವ ಮೂಲಕ ಮುಂಬರುವ ದಿನಗಳಲ್ಲಿ ಈರುಳ್ಳಿಯನ್ನು ಸೂಕ್ತವಾಗಿ ಹೆಚ್ಚಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net