ಪುತ್ತೂರಿನ ಮುತ್ತಪ್ಪ ರೈ ಮತ್ತು ಕೋಟಿ ಚೆನ್ನಯ ಜೋಡುಕೆರೆ ಕಂಬಳ

MutappaRai Kambala
ಕಂಬಳವೊಂದರ ಹಳೆಯ ಆಮಂತ್ರಣ
Published on

ಪುತ್ತೂರು: ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಸುಕಿನಲ್ಲಿ ಕೊನೆಯುಸಿರೆಳೆದ ಮಾಜಿ ಭೂಗತ ದೊರೆ, ಉದ್ಯಮಿ, ಸಮಾಜ ಸೇವಕ, ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಎನ್.ಮುತ್ತಪ್ಪ ರೈ(68) ಪುತ್ತೂರಿನವರು. ಅವರು ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ನೆಟ್ಟಾಳ ನಾರಾಯಣ ರೈ- ದೇರ್ಲ ಸುಶೀಲಾ ರೈ ಪುತ್ರರಾಗಿ 1952ರಲ್ಲಿ ಜನಿಸಿದರು.

ಹಲವು ವರ್ಷಗಳಿಂದ ಬೆಂಗಳೂರಿನ ಬಿಡದಿಯಲ್ಲಿ ನೆಲೆಸಿದ್ದರು. ಎರಡು ವರ್ಷಗಳ ಹಿಂದೆ ಲಿವರ್ ಕ್ಯಾನ್ಸರ್ ಇರುವುದು ದೃಢಪಟ್ಟ ಬಳಿಕ ದೆಹಲಿ, ಚೆನ್ನೈ, ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಶೇ.90ರಷ್ಟು ಗುಣಮುಖರಾಗಿದ್ದು, ಬಳಿಕ ಮಿದುಳಿಗೂ ರೋಗ ಹರಡಿತ್ತು. ಇದನ್ನು ಜನವರಿಯಲ್ಲಿ ಸ್ವತಃ ಅವರೇ ಖಚಿತಪಡಿಸಿದ್ದರು. ಅವರ ಪತ್ನಿ ರೇಖಾ ರೈ 2013ರಲ್ಲಿ ಅನಾರೋಗ್ಯದಿಂದ ಸಿಂಗಾಪುರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ರಾಕಿ ಮತ್ತು ರಿಕ್ಕಿ ಎಂಬ ಇಬ್ಬರು  ಮಕ್ಕಳನ್ನು ಅವರು ಅಗಲಿದ್ದಾರೆ. 2016ರಲ್ಲಿ ಸಕಲೇಶಪುರ ಮೂಲದ ಅನುರಾಧಾ ಅವರನ್ನು ಮುತ್ತಪ್ಪ ರೈ ವಿವಾಹವಾಗಿದ್ದರು.

ದೈವಭಕ್ತಿ, ಕಂಬಳ ಪ್ರೇಮಿ: ಊರಿನ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ರೈ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಭಕ್ತರಾಗಿದ್ದು, 2010ರಲ್ಲಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಬ್ರಹ್ಮರಥ ಸಮರ್ಪಿಸಿದ್ದರು. ಕಳೆದ ವರ್ಷ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಇನ್ನೋರ್ವ ಉದ್ಯಮಿ ಅಜಿತ್ ರೈ ಜತೆ ಸೇರಿ 2.5 ಕೋಟಿ ರೂ. ವೆಚ್ಚದ ಬ್ರಹ್ಮರಥ ನೀಡಿದ್ದರು. ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಅವರ ಸಾರಥ್ಯದಲ್ಲೇ ನಡೆಯುತ್ತಿತ್ತು.

ಸಮಾಜ ಸೇವೆ: ಭೂಗತ ಲೋಕದಿಂದ ವಿಮುಖರಾದ ಮುತ್ತಪ್ಪ ರೈ ‘ಜಯ ಕರ್ನಾಟಕ’ ಎಂಬ ರಾಜಕೀಯೇತರ ಸಾಮಾಜಿಕ ಸಂಘಟನೆ ಸ್ಥಾಪಿಸಿ ಅದರ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ವರ್ಷದ ಹಿಂದಷ್ಟೇ ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಶನ್ ಅಧ್ಯಕ್ಷರಾಗಿದ್ದು, ಅನಾರೋಗ್ಯದ ಬಳಿಕ ರಾಜೀನಾಮೆ ಪ್ರಕಟಿಸಿದ್ದರು.

-------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net