More

    ನನಗೆ ಕ್ಯಾನ್ಸರ್ ಇದೆ.. ಸಾವಿನ ಹತ್ತಿರದಲ್ಲೇ ಇದ್ದೇನೆ…

    ರಾಮನಗರ: ನನಗೆ ಕ್ಯಾನ್ಸರ್ ಇದೆ, ಸಾವಿನ ಹತ್ತಿರದಲ್ಲಿದ್ದೇನೆ. ಆದರೂ ನನ್ನಲ್ಲಿನ ಆತ್ಮಶಕ್ತಿ ಬದುಕಿಸಿದೆ. ನನ್ನ ಶತ್ರುವಿಗೂ ಇಂತಹ ರೋಗ ಬೇಡ, ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳಿ. ಜನರಿಗೆ ಉತ್ತಮ ಆರೋಗ್ಯ ದೊರೆಯಲು ಸರ್ಕಾರ ಕ್ರಮವಹಿಸಲಿ… ಇದು ಒಂದು ಕಾಲದ ಭೂಗತಲೋಕದ ಡಾನ್, ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಎನ್.ಮುತ್ತಪ್ಪ ರೈ ಮಾತುಗಳು.

    ಬಿಡದಿ ನಿವಾಸದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಮ್ಮೆ ಬೆನ್ನುನೋವು ಕಾಣಿಸಿಕೊಂಡಿತು. ತಪಾಸಣೆಗೆ ಒಳಗಾದಾಗ ಲಿವರ್ ಕ್ಯಾನ್ಸರ್ ಇರುವುದು ತಿಳಿಯಿತು. ದೆಹಲಿ, ಚೆನ್ನೈನಲ್ಲೂ ಚಿಕಿತ್ಸೆ ಪಡೆದೆ. ಶೇ.90 ಗುಣಮುಖವಾಗಿದ್ದ ರೋಗ ಕೆಲವೇ ತಿಂಗಳಲ್ಲಿ ಮತ್ತೊಂದು ಭಾಗಕ್ಕೆ ವ್ಯಾಪಿಸಿ, ಶೇ.90 ಹೆಚ್ಚಾಯಿತು. ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಆದರೆ ಜನರೊಟ್ಟಿಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಡದಿಗೆ ಬಂದಿದ್ದೇನೆ. 68 ವರ್ಷ ಪೂರೈಸಿರುವ ನನಗೆ ಇನ್ನೆಷ್ಟು ಬದುಕು ಬೇಕು? ಇರುವಷ್ಟು ದಿನ ಜನರ ಸೇವೆ ಮುಂದುವರಿಸುವೆ ಎಂದರು. ಕೆಲವೇ ವರ್ಷಗಳಲ್ಲಿ ದೇಶದ ಶೇ.50 ಯುವ ಸಮುದಾಯ ಕ್ಯಾನ್ಸರ್​ಗೆ ತುತ್ತಾಗಲಿದೆ. ಇದನ್ನು ತಪ್ಪಿಸಲು ಗುಣಮಟ್ಟದ ಆಹಾರ, ನೀರು ಬೇಕು. ಜಾತಿ, ಮತ ಧರ್ಮ ಬದಿಗಿಟ್ಟು ಜನರ ಆರೋಗ್ಯದ ಬಗ್ಗೆ ಸರ್ಕಾರ ಕಾಳಜಿವಹಿಸಬೇಕು. ನನ್ನ ಬಳಿ ಹಣವಿದ್ದರೂ ರೋಗ ವಾಸಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರೆ ಸಾಮಾನ್ಯರ ಪಾಡೇನು? ಎಂದು ಮುತ್ತಪ ರೈ ಬೇಸರಿಸಿದರು.

    ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

    ರಾಜ್ಯದ ಕ್ರೀಡಾಪಟುಗಳು ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗಳಿಸುವಂತೆ ಮಾಡುವ ಹಂಬಲದೊಂದಿಗೆ ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷನಾದೆ. ಆರೋಗ್ಯ ಕೈಕೊಟ್ಟಿದ್ದರಿಂದ ನನ್ನ ಕನಸು ಈಡೇರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದರ ಜವಾಬ್ದಾರಿಯನ್ನು ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣಗೆ ವಹಿಸಲಿದ್ದು, ನಾನು ರಾಜೀನಾಮೆ ನೀಡುತ್ತಿದ್ದೇನೆ. ಜಯಕರ್ನಾಟಕ ಸಂಘಟನೆಗೆ ಜಗದೀಶ್ ಅಧ್ಯಕ್ಷರಾಗಿದ್ದು, ನೆಲ, ಜಲ, ಭಾಷೆ ವಿಚಾರದಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುತ್ತಾರೆಂದು ರೈ ಹೇಳಿದರು.

    ನನಗೆ ಇಬ್ಬರು ಗಂಡು ಮಕ್ಕಳಿದ್ದು, ನನ್ನ ಆಸ್ತಿಯಲ್ಲಿ ಯಾರಿಗೆ ಏನು ಎಂದು ವಿಲ್ ಮಾಡಲಾಗಿದೆ. ನನ್ನೊಟ್ಟಿಗೆ ಹಲವು ವರ್ಷದಿಂದ ದುಡಿದವರಿಗೂ ಒಂದು ನಿವೇಶನ ನೀಡುತ್ತಿದ್ದೇನೆ. ಹಣವಿದ್ದರೂ ಆರೋಗ್ಯ ಕೊಂಡುಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ನಾನೇ ಸಾಕ್ಷಿ.

    | ಮುತ್ತಪ್ಪ ರೈ ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts