

ನವದೆಹಲಿ: ಲಾಕ್ಡೌನ್ ದೇಶದ ಆರ್ಥಿಕತೆಗೆ ಮತ್ತು ಬಡ ಜನರಿಗೆ ತಂದಿಟ್ಟ ಸಂಕಷ್ಟದ ಬಗ್ಗೆ ನಿಮಗೆಲ್ಲರಿಗೂ ಗೊತ್ತೇ ಇದೆ. ಆದರೆ ಈ ಲಾಕ್ಡೌನ್ ಸಿರಿವಂತರ ಪಾಲಿಗೆ ಉತ್ತಮ ಕಾಲವಾಗಿತ್ತು ಎನ್ನುವುದಕ್ಕೆ ಅವರ ಆದಾಯದ ಅಂಕಿ ಅಂಶವೇ ಸಾಕ್ಷಿ. ಭಾರತದ ನಂಬರ್ 1 ಶ್ರೀಮಂತ ಎನಿಸಿಕೊಂಡಿರುವ ಮುಕೇಶ್ ಅಂಬಾನಿ ಈ ಲಾಕ್ಡೌನ್ ಸಮಯದಲ್ಲಿ ಗಂಟೆಗೆ ಎಷ್ಟು ಆದಾಯ ಗಳಿಸಿದ್ದಾರೆ ಎನ್ನುವುದನ್ನು ತಿಳಿದರೆ ನೀವು ಶಾಕ್ ಆಗುತ್ತೀರ.
ಮುಕೇಶ್ ಅಂಬಾನಿ ಲಾಕ್ಡೌನ್ ಸಮಯದಲ್ಲಿ ಗಂಟೆಗೆ 90 ಕೋಟಿ ರೂಪಾಯಿ ಗಳಿಸಿದ್ದಾರೆ. ಅಂದರೆ ನಿಮಿಷಕ್ಕೆ 1.5 ಕೋಟಿ ಲೆಕ್ಕ. ಲಾಕ್ಡೌನ್ನಲ್ಲಿ ದೇಶದಲ್ಲಿ ಅತಿ ಹೆಚ್ಚು ಗಳಿಕೆ ಪಡೆದವರ ಸಾಲಿನಲ್ಲಿ ಇವರು ಮೊದಲು ನಿಂತಿದ್ದಾರೆ. ಅಂದ ಹಾಗೆ ಅಂಬಾನಿ ಮಾತ್ರವಲ್ಲ, ದೇಶದ ಶ್ರೀಮಂತರ ಪಟ್ಟಿಯಲ್ಲಿ ಮೊದಲ 100 ಸ್ಥಾನದಲ್ಲಿರುವ ಎಲ್ಲ ಶ್ರೀಮಂತರೂ ಲಾಕ್ಡೌನ್ ಸಮಯದಲ್ಲಿ ಭಾರಿ ಆದಾಯ ಗಳಿಸಿದ್ದಾರೆ ಎಂದು ಆಕ್ಸ್ಫ್ಯಾಮ್ ಸಂಸ್ಥೆಯ ವರದಿ ತಿಳಿಸಿದೆ. ಹಾಗೆಯೇ ಕೋಟ್ಯಧಿಪತಿಗಳು ಹೆಚ್ಚಿಸಿಕೊಂಡ ಸಂಪತ್ತಲ್ಲಿ ಭಾರತ ವಿಶ್ವದಲ್ಲೇ ಆರನೇ ಸ್ಥಾನದಲ್ಲಿದೆ.
ಈ ನೂರು ಶ್ರೀಮಂತರ ಸಂಪತ್ತು ಲಾಕ್ಡೌನ್ ಸಮಯದಲ್ಲಿ ಶೇ. 35 ಏರಿಕೆ ಕಂಡಿದೆ. ವಿತ್ತೀಯ ದೃಷ್ಟಿಯಿಂದ, ಅವರ ಸಂಪತ್ತು 12,97,822 ಕೋಟಿ ರೂ. ಏರಿಕೆಯಾಗಿದೆ. ಈ ಮೊತ್ತವು 13.8 ಕೋಟಿ ಬಡ ಭಾರತೀಯರಿಗೆ 94,045 ರೂ.ಗಳ ಚೆಕ್ ನೀಡಲು ಸಾಕಾಗುತ್ತದೆ. ಈ ನೂರರಲ್ಲಿ 11 ಅಗ್ರ ಶ್ರೀಮಂತರ ಆದಾಯವನ್ನು ಬಳಸಿಕೊಂಡರೆ ಮುಂದಿನ 10 ವರ್ಷಗಳವರೆಗೆ ನರೇಗಾ ಕೆಲಸ ಮಾಡುವವರಿಗೆ ಸಂಬಳ ಕೊಡಲು ಸಾಕಾಗುತ್ತದೆ. 11 ಅಗ್ರ ಕೋಟ್ಯಧಿಪತಿಗಳು ಹೆಚ್ಚಿಸಿಕೊಂಡ ಸಂಪತ್ತಿನ ಮೇಲೆ ಕೇವಲ ಶೇ. 1 ತೆರಿಗೆ ವಿಧಿಸಿದರೆ, ಈಗಿನ ಜನೌಷಧ ಕೇಂದ್ರಗಳನ್ನು 140 ಪಟ್ಟು ಹೆಚ್ಚಿಸಬಹುದಾಗಿದೆ ಎಂದು ವರದಿ ಹೇಳಿದೆ.
ಆಕ್ಸ್ಫ್ಯಾಮ್ನ ವರದಿಯ ಪ್ರಕಾರ, ಕರೊನಾ ವೈರಸ್ನಿಂದಾಗಿ ನೂರು ವರ್ಷಗಳಲ್ಲಿ ವಿಶ್ವದ ಅತ್ಯಂತ ಕೆಟ್ಟ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು 2020ರಲ್ಲಿ ಕಂಡುಬಂದಿದೆ. ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕ ಬಿಕ್ಕಟ್ಟನ್ನು 1930 ರ ಮಹಾ ಆರ್ಥಿಕ ಕುಸಿತದೊಂದಿಗೆ ಹೋಲಿಸಬಹುದಾಗಿದೆ.
2020ರ ಏಪ್ರಿಲ್ನಲ್ಲಿ ಪ್ರತಿ ಗಂಟೆಗೆ 1,70,000 ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದಲ್ಲಿ ಸುಮಾರು 12.2 ಕೋಟಿ ಜನರು 2020ರಲ್ಲಿ ನಿರುದ್ಯೋಗಿಗಳಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. (ಏಜೆನ್ಸೀಸ್)