ಸ್ವಂತ ಹೆಣ್ಣುಮಕ್ಕಳನ್ನು ಬೆತ್ತಲೆಗೊಳಿಸಿ ಪೂಜೆ ಮಾಡಿದ್ರು, ಬಳಿಕ ತಲೆ ಒಡೆದು ಕೊಂದೇಬಿಟ್ರು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

murder case
Published on

ಮದನಪಲ್ಲಿ (ಆಂಧ್ರಪ್ರದೇಶ): ಇಡೀ ದೇಶವನ್ನೇ ಬೆಚ್ಚಿಬೀಳಿಸುವ ದುರ್ಘಟನೆಯೊಂದು ಭಾನುವಾರ ರಾತ್ರಿ ಆಂಧ್ರದಲ್ಲಿ ಸಂಭವಿಸಿದೆ. ಮನುಕುಲವೇ ಅಸಹ್ಯ ಪಡುವಂತಹ ಬೀಭತ್ಸಕಾರಿ ಘಟನೆ ಇದಾಗಿದ್ದು, ವಯಸ್ಸಿಗೆ ಬಂದ ಸಹೋದರಿಯರಿಬ್ಬರನ್ನು ಹೆತ್ತವರೇ ಹತ್ಯೆ ಮಾಡಿದ್ದಾರೆ. ಅದೂ ಇಬ್ಬರು ಹೆಣ್ಮಕ್ಕಳನ್ನು ಬೆತ್ತಲಾಗಿಸಿ ಪೂಜೆ ಮಾಡಿದ ಬಳಿಕ ಅವರಿಬ್ಬರ ತಲೆಗೆ ಡಂಬಲ್ಸ್​ನಿಂದ ಹೊಡೆದು, ತ್ರಿಶೂಲದಿಂದ ಚುಚ್ಚಿ ಕೊಂದಿದ್ದಾರೆ!

ಪ್ರಾಂಶುಪಾಲ ದಂಪತಿಯ ಮಕ್ಕಳಾದ ಅಲೈಖ್ಯಾ(27) ಮತ್ತು ಸಾಯಿದಿವ್ಯಾ(22) ಮೃತ ಸಹೋದರಿಯರು. ಇವರನ್ನು ಕೊಂದ ಆರೋಪದ ಮೇರೆಗೆ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪುರುಷೋತ್ತಮ ನಾಯ್ಡು ಮತ್ತು ಇವರ ಪತ್ನಿ ಪದ್ಮಜಾರನ್ನು ಪೊಲೀಸರು ಬಂಧಿಸಿದ್ದಾರೆ. ಸ್ನಾತಕೋತ್ತರ ಪದವಿ ಮುಗಿಸಿರುವ ಅಲೈಖ್ಯಾ, ಸಿವಿಲ್ಓ​ ಸರ್ವಿಸ್​ ಎಕ್ಸಾಂಗೆ ಸಿದ್ಧತೆ ನಡೆಸುತ್ತಿದ್ದಳು, ಎಂಬಿಎ ಪದವೀಧರೆ ಸಾಯಿದಿವ್ಯಾ ಮುಗಿಸಿ ಸಂಗೀತ ಕ್ಲಾಸ್ ನಡೆಸುತ್ತಿದ್ದಳು. ಸುಶಿಕ್ಷಿತ ದಂಪತಿಯೇ ತನ್ನ ಮಕ್ಕಳನ್ನು ಅಮಾನುಷವಾಗಿ ಕೊಂದದ್ದು ಏಕೆ? ಎಂಬ ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ. ಇದನ್ನೂ ಓದಿರಿ ಕೊನೆಗೂ ಸಾವಿನ ಮನೆಯ ಕದ ತಟ್ಟಿದ ನಟಿ ಜಯಶ್ರೀ! ಕಳೆದ 7 ತಿಂಗಳಲ್ಲಿ ಆಕೆ ಅನುಭವಿಸಿದ್ದ ನರಕಯಾತನೆ ಇಲ್ಲಿದೆ…

ಭಾನುವಾರ ರಾತ್ರಿ ಮದನಪಲ್ಲಿ ಶಿವಾಲಯಂ ದೇವಾಲಯದ ರಸ್ತೆ ಬಳಿಯಲ್ಲಿ ಅಕ್ಕಪಕ್ಕದ ನಿವಾಸಿಗಳಿಗೆ ಹೆಣ್ಣುಮಕ್ಕಳ ಚೀರಾಟ ಕೇಳಿಸುತ್ತಿತ್ತು. ಅದ್ಹೇನು ಎಂದು ಪ್ರಾಂಶುಪಾಲ ಪುರುಷೋತ್ತಮ ನಾಯ್ಡು ಅವರ ಮನೆ ಬಳಿಗೆ ಬರುವಷ್ಟರಲ್ಲಿ ಸಾಯಿದಿವ್ಯಾ ಮತ್ತು ಅಲೈಖ್ಯಾ ರಕ್ತದ ಮಡುವಲ್ಲಿ ಒದ್ದಾಡುತ್ತಾ ಪ್ರಾಣಬಿಟ್ಟಿದ್ದರು. ಅದೂ ಮೈಮೇಲೆ ಬಟ್ಟೆ ಇಲ್ಲದೆ ಬೆತ್ತಲೆ ಸ್ಥಿತಿಯಲ್ಲಿ ಮೃತದೇಹಗಳಿದ್ದವು. ಪಕ್ಕದಲ್ಲೇ ಹೆತ್ತವರೂ ಇದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಈ ದೃಶ್ಯ ನೋಡುತ್ತಿದ್ದಂತೆ ಬೆಚ್ಚಿಬಿದ್ದರು. ಹೆತ್ತಮಕ್ಕಳನ್ನು ಬೆತ್ತಲೆಗೊಳಿಸಿ ಪೂಜೆ ಮಾಡಿ ನಂತರ ತಾಯಿಯೇ ಡಂಬಲ್ಸ್​​ನಿಂದ ತಲೆಗೆ ಹೊಡೆದು, ತ್ರಿಶೂಲದಿಂದ ಚುಚ್ಚಿ ಕೊಂದಿರುವ ಸುದ್ದಿ ಕೇಳುತ್ತಿದ್ದಂತೆ ಸ್ಥಳೀಯರೂ ಬೆಚ್ಚಿಬಿದ್ದಿದ್ದಾರೆ.

ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಪ್ರತಿಕ್ರಿಯಿಸಿದ ಮೃತರ ತಾಯಿ ಪದ್ಮಜಾ,'ನನ್ನ ಮಕ್ಕಳು ಮೃತಪಟ್ಟಿಲ್ಲ. ಅವರನ್ನು ಮುಟ್ಟಬೇಡಿ. ನಾಳೆ ಅವರಿಗೆ ಜೀವ ಬರುತ್ತೆ... ' ಎಂದು ಹೇಳಿದ್ದಾಳೆ. ಸದ್ಯ ಕೊಲೆ ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ವೇಳೆ, 'ಇಂದು (ಭಾನುವಾರ)ಕಲಿಯುಗ ಅಂತ್ಯ ಆಗುತ್ತೆ, ನಾಳೆ(ಸೋಮವಾರ) ಸತ್ಯಯುಗ ಆರಂಭವಾಗುತ್ತೆ. ಸತ್ಯಯುಗದ ಮೊದಲ ದಿನವೇ ನ್ನ ಮಕ್ಕಳಿಬ್ಬರೂ ಮತ್ತೆ ಹುಟ್ಟಿ ಬರುತ್ತಾರೆ. ಕಲಿಯುಗ ಅಂತ್ಯವಾಗಲೆಂದು ಪೂಜೆ ಮಾಡಿ ಮಕ್ಕಳನ್ನು ಬಲಿಕೊಡಲಾಗಿದೆ, ನನ್ನ ಮಕ್ಕಳಿಬ್ಬರೂ ಸತ್ತಿಲ್ಲ, ಮತ್ತೆ ಅವರಿಗೆ ಜೀವ ಬರುತ್ತೆ...' ಎಂದು ಬಾಯ್ಬಿಟ್ಟಿದ್ದಾರೆ.

ಮೃತ ದುರ್ದೈವಿಗಳೂ ವಿದ್ಯಾವಂತರು, ಇವರನ್ನು ಕೊಂದವರೂ ಸುಶಿಕ್ಷಿತ ದಂಪತಿ. ಆದರೂ ಈ ದಂಪತಿ ಕೆಲ ದಿನಗಳಿಂದ ಮೌಢ್ಯದ ಹಿಂದೆ ಬಿದ್ದಿತ್ತು ಎನ್ನಲಾಗಿದೆ. ಈ ಕೃತ್ಯವನ್ನು ನಿಧಿ ಆಸೆಗಾಗಿ ಇಲ್ಲವೇ ಮಾನಸಿಕ ಖಿನ್ನತೆಯಿಂದ ಎಸಗಿರಬೇಕು ಎಂಬ ಮಾತೂ ಕೇಳಿಬಂದಿದೆ. ಏನೇ ಆಗಲಿ ಅಪ್ಪ-ಅಮ್ಮನೇ ಹೆತ್ತಮಕ್ಕಳನ್ನು ಕಗ್ಗೊಲೆ ಮಾಡಿರುವುದು ಎಂತಹವರನ್ನೂ ಬೆಚ್ಚಿಬೀಳಿಸುತ್ತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net