

ವಿಜಯಪುರ: ಮದುವೆಯಾಗಿ ಗಂಡ, ಮಕ್ಕಳೊಂದಿಗೆ ಸುಖ ಸಂಸಾರ ನಡೆಸುತ್ತಿದ್ದ ಮಹಿಳೆಯೊಬ್ಬಳು ಮೈದುನನೊಂದಿಗೂ ಸಂಬಂಧ ಬೆಳೆಸಿ ದಾರುಣ ಅಂತ್ಯ ಕಂಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಗಂಡನೇ ಹೆಂಡತಿ ಮತ್ತು ತಮ್ಮನ ಕೊಲೆ ಮಾಡಿದ್ದಾನೆ.
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಬಂಥನಾಳ ಗ್ರಾಮದ ಹೊರವಲಯದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಈರಮ್ಮ ಆಲಮೇಲ(35) ಮತ್ತು ಲಕ್ಷ್ಮಣ ಈರಪ್ಪ ಆಲಮೇಲ ಮದುವೆಯಾಗಿ 10 ವರ್ಷಕ್ಕೂ ಹೆಚ್ಚಾಗಿದೆ. ಮೂವರು ಮುದ್ದಾದ ಮಕ್ಕಳೂ ಕುಟುಂಬದಲ್ಲಿದ್ದಾರೆ. ಲಕ್ಷ್ಮಣ ಅವರ ಮನೆಯ ಪಕ್ಕದಲ್ಲೇ ಅವರ ತಮ್ಮ ರುದ್ರಪ್ಪನ ಕುಟುಂಬವೂ ವಾಸವಿತ್ತು. ರುದ್ರಪ್ಪನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದರೂ ರುದ್ರಪ್ಪ ಮತ್ತು ಈರಮ್ಮ ಪ್ರೀತಿ ಬೆಳೆಸಿಕೊಂಡಿದ್ದು, ಅದನ್ನು ಅಕ್ರಮ ಸಂಬಂಧವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.
ತನ್ನ ಪತ್ನಿ ತನ್ನ ಸಹೋದರನ ಜತೆಯೇ ಚಕ್ಕಂದವಾಡುತ್ತಿರುವ ವಿಚಾರ ಲಕ್ಷ್ಮಣನಿಗೆ ಕೆಲವು ವರ್ಷಗಳ ಹಿಂದೆಯೇ ಗೊತ್ತಾಗಿದೆ. ಆದರೂ ಅದನ್ನು ಸಹಿಸಿಕೊಂಡೇ ಬಂದಿದ್ದಾನೆ. ಅವರಿಗೆ ಬುದ್ಧಿ ಕಲಿಸಲು ಸರಿಯಾದ ಸಮಯಕ್ಕಾಗಿ ಆತ ಕಾಯುತ್ತಿದ್ದ. ಮಂಗಳವಾರ ರಾತ್ರಿ ಆ ಸಮಯ ಬಂದಿದ್ದು, ಇಬ್ಬರನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ.
ಸದ್ಯ ಘಟನೆ ಬಗ್ಗೆ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. (ದಿಗ್ವಿಜಯ ನ್ಯೂಸ್)