

ವಾಷಿಂಗ್ಟನ್: ಸಿಸಿಟಿವಿಯನ್ನು ಏನಕ್ಕಾಗಿ ಬಳಸುತ್ತಾರೆ? ಮನೆಗೆ, ಆಫೀಸಿಗೆ ಯಾರು ಬರುತ್ತಾರೆ, ಯಾರು ಹೋಗುತ್ತಾರೆ ಎನ್ನುವುದನ್ನು ನೋಡಿ, ಎಲ್ಲರ ಮೇಲೆ ಒಂದು ಗಮನವಿಡುವುದಕ್ಕೆಂದು ಸಿಸಿಟಿವಿ ಹಾಕಿಸುತ್ತಾರೆ. ಆದರೆ ಈ ಸಿಸಿಟಿವಿ ಟೆಕ್ನಿಷಿಯನ್ ಮಾಡಿದ ಕೆಲಸ ಕೇಳಿದ ಮೇಲೆ ನಿಮಗೆ ಸಿಸಿಟಿವಿ ಒಂದು ರಕ್ಷಣೆ ಎನಿಸುವ ಬದಲು ಅದೊಂದು ಸಮಸ್ಯೆ ಎನಿಸಿದರೂ ಎನಿಸಬಹುದು. ಅಂತಹ ಖತರ್ನಾಕ್ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾನೆ ಈ ಟೆಕ್ನಿಷಿಯನ್.
ಅಮೆರಿಕದ ಖಾಸಗಿ ಸಂಸ್ಥೆಯೊಂದರ ಟೆಕ್ನಿಷಿಯನ್ ಮಾಡಿರುವ ಕೆಲಸ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ. ಆತ ತನ್ನ ಸಂಸ್ಥೆಯ ವತಿಯಿಂದ ಮನೆಗಳಿಗೆ ಸಿಸಿಟಿವಿ ಕ್ಯಾಮೆರಾ ಸೇರಿ ಕೆಲ ರಕ್ಷಣಾ ತಂತ್ರಜ್ಞಾನಗಳನ್ನು ಅಳವಡಿಸಲು ಹೋಗುತ್ತಿದ್ದನಂತೆ. ಸಿಸಿಟಿವಿ ಅಳವಡಿಕೆ ಮಾಡಿದ ಮೇಲೆ ಅದರ ವಿಡಿಯೋ ನೋಡಲು ಇ ಮೇಲ್ ಕೊಟ್ಟು ಸೆಟ್ಟಿಂಗ್ ಮಾಡಿಕೊಳ್ಳಬೇಕು. ಅದೇ ರೀತಿ ಆತ ಕೂಡ ಆ ಮನೆಯ ಮಾಲೀಕರ ಇ ಮೇಲ್ ಪಡೆದು ಸೆಟ್ಟಿಂಗ್ ಮಾಡಿಕೊಡುತ್ತಿದ್ದ. ಕೆಲ ದಿನಗಳ ಕಾಲ ಎಲ್ಲ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ತಿಳಿಯುವ ಸಲುವಾಗಿ ನಾನೂ ಇ ಮೇಲ್ ಸೆಟ್ಟಿಂಗ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿ ತನ್ನ ಇ ಮೇಲ್ಗೂ ವಿಡಿಯೋ ಬರುವಂತೆ ಮಾಡಿಕೊಳ್ಳುತ್ತಿದ್ದ. ಇನ್ನು ಅನೇಕ ಮನೆಗಳಲ್ಲಿ ಅವರ ಅನುಮತಿ ಪಡೆಯದೆಯೇ ತನ್ನ ಇ ಮೇಲ್ನ್ನು ಅದಕ್ಕೆ ಲಿಂಕ್ ಮಾಡಿಕೊಂಡುಬಿಡುತ್ತಿದ್ದ.
ಈ ರೀತಿ ಇ ಮೇಲ್ ಲಿಂಕ್ ಮಾಡಿದ ನಂತರ ಆತನಿಗೆ ಇಡೀ ಮನೆಯಲ್ಲಿ ಏನಾಗುತ್ತಿದೆ ಎನ್ನುವುದು ಲೈವ್ ಆಗಿ ಕಾಣಿಸುತ್ತಿತ್ತು. ಮನೆಯಲ್ಲಿ ದಂಪತಿ ಸೆಕ್ಸ್ ಮಾಡುವುದು, ಮಹಿಳೆಯರು ಬಟ್ಟೆ ಬದಲಾಯಿಸುವ ವಿಡಿಯೋಗಳನ್ನು ಆತ ಕದ್ದು ನೋಡಲಾರಂಭಿಸಿದ್ದಾನೆ. ಯಾವ ಮನೆಯಲ್ಲಿ ಚಂದದ ಹೆಣ್ಣು ಮಕ್ಕಳಿದ್ದಾರೆ ಎನ್ನುವುದನ್ನು ಬರೆದಿಟ್ಟುಕೊಂಡು, ಆ ಮನೆಗಳ ವಿಡಿಯೋವನ್ನು ಪದೇ ಪದೆ ನೋಡಲಾರಂಭಿಸಿದ್ದಾನೆ.
ಈ ವಿಚಾರ ಇತ್ತೀಚೆಗೆ ಬೆಳಕಿಗೆ ಬಂದಿದೆ. ತಕ್ಷಣ ಅಲ್ಲಿನ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಆ ವೇಳೆ ಆತ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈವರೆಗೆ ಸುಮಾರು 200 ಗ್ರಾಹಕರ ಮನೆಗೆ 9,600 ಖಾಸಗಿ ವಿಡಿಯೋಗಳನ್ನು ನೋಡಿರುವುದಾಗಿ ಆತ ತಿಳಿಸಿದ್ದಾನೆ. ಇದೀಗ ಆತನಿಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. (ಏಜೆನ್ಸೀಸ್)