ಲಾಲೂ ಪ್ರಸಾದ್​ ಯಾದವ್​ ಮುಖ ಊದಿದೆ, ಶ್ವಾಸಕೋಶದಲ್ಲಿ ನೀರು ತುಂಬಿದೆ! ದೆಹಲಿಯ ಏಮ್ಸ್​ಗೆ ಶಿಫ್ಟ್​ ಸಾಧ್ಯತೆ

lalu
Published on

ರಾಂಚಿ: ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಅಧ್ಯಕ್ಷ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಅವರ ಆರೋಗ್ಯ ಸಾಕಷ್ಟು ಗಂಭೀರವಾಗಿದೆ. ಶುಕ್ರವಾರದಂದು ಅವರನ್ನು ರಾಂಚಿಯ ರಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ಆರೋಗ್ಯ ಸಮಸ್ಯೆಗಳು ಕಂಡುಬಂದಿರುವುದಾಗಿ ತಿಳಿಸಲಾಗಿದೆ. ಇಂದು ಅಥವಾ ನಾಳೆ ಅವರನ್ನು ದೆಹಲಿಯ ಏಮ್ಸ್​ ಆಸ್ಪತ್ರೆಗೆ ಸ್ಥಳಾಂತರಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.


ಬಹು ಕೋಟಿ ರೂಪಾಯಿ ಮೇವು ಹಗರಣ ಪ್ರಕರಣದಲ್ಲಿ ಜೈಲು ವಾಸ ಅನುಭವಿಸುತ್ತಿರುವ ಲಾಲೂ ಪ್ರಸಾದ್​ ಹಲವು ತಿಂಗಳಿಂದ ಅನಾರೋಗ್ಯ ಪೀಡಿತರಾಗಿದ್ದಾರೆ. ಶ್ವಾಸಕೋಶಲ್ಲಿ ಅಲರ್ಜಿ ಉಂಟಾಗಿರುವುದಾಗಿ ಈ ಹಿಂದೆ ತಿಳಿಸಲಾಗಿತ್ತು. ಅದೇ ಸಮಸ್ಯೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ರಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಪತ್ನಿ ಮತ್ತು ಮಕ್ಕಳು ಆಸ್ಪತ್ರೆಗೆ ದೌಡಾಯಿಸಿದ್ದರು.


ಅಪ್ಪನ ಆರೋಗ್ಯದ ಕುರಿತಾಗಿ ತೇಜಸ್ವಿ ಯಾದವ್​ ಮಾಹಿತಿ ನೀಡಿದ್ದಾರೆ. ಅಪ್ಪನ ಆರೋಗ್ಯ ಹದಗೆಟ್ಟಿದೆ. ಅವರ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿದೆ. ಮುಖ ಊದಿದೆ. ಅವರನ್ನು ದೆಹಲಿಯ ಏಮ್ಸ್​ಗೆ ಸ್ಥಳಾಂತರಿಸುವ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ವೈದ್ಯರ ಸಲಹೆಯ ಮೇರೆಗೆ ದೆಹಲಿಗೆ ಸ್ಥಳಾಂತರಿಸುವ ನಿರ್ಧಾರೆ ತೆಗೆದುಕೊಳ್ಳಲಾಗುವುದು. ಅದಕ್ಕೂ ಮೊದಲು ನ್ಯಾಯಾಲಯದಿಂದ ಅನುಮತಿ ಪಡೆಯಬೇಕಿರುವುದಾಗಿ ತಿಳಿಸಲಾಗಿದೆ.


ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ, ಮಾಜಿ ಉಪ ಸಿಎಂ ತೇಜಶ್ವಿ ಯಾದವ್, ಮತ್ತು ಮಾಜಿ ಸಚಿವರಾದ ತೇಜ್ ಪ್ರತಾಪ್ ಯಾದವ್ ಸೇರಿ ಹಲವು ನಾಯಕರು ಲಾಲೂ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಬಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net