

ಮೈಸೂರು: 2022ರ ಹುಲಿ ಗಣತಿಯ ಪ್ರಕಾರ ದೇಶದಲ್ಲಿ ಒಟ್ಟು 3,167 ಹುಲಿಗಳಿದ್ದು, ಅವುಗಳ ಸಂತತಿ ಹೆಚ್ಚಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ಪ್ರಧಾನಿ ಮೋದಿ ಹೇಳಿದರು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಹುಲಿ ಯೋಜನೆಯ 50ನೇ ವರ್ಷಾಚರಣೆ ಹಾಗೂ ಪ್ರಥಮ ಸಂರಕ್ಷಣಾ ಸಮ್ಮೇಳನದಲ್ಲಿ ಭಾಗವಹಿಸಿ ಪ್ರಧಾನಿ ಮೋದಿ ಮಾತನಾಡಿದರು.
ಕ್ಷಮೆ ಇರಲಿ
ಭಾಷಣದ ಆರಂಭಕ್ಕೂ ಮುನ್ನ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ಮೋದಿ ಕ್ಷಮೆಯಾಚಿಸಿದರು. ನಾನು ಕಾರ್ಯಕ್ರಮಕ್ಕೆ ಬರುವಲ್ಲಿ ವಿಳಂಬವಾಯಿತು. ಕಾಡಿನಲ್ಲಿ ಸುತ್ತಾಡುತ್ತಿದ್ದಾಗ ಸಮಯ ಹೋಗಿದ್ದು ಗೊತ್ತಾಗಲಿಲ್ಲ. ನಾನು ಒಂದು ಗಂಟೆ ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ ಎಂದರು.
ದೇಶದಲ್ಲಿ ಹುಲಿಗಳ ಸಂತತಿ ಹೆಚ್ಚಾಗುತ್ತಿದೆ. ಇಂದಿಗೆ ಹುಲಿ ಯೋಜನೆಗೆ 50 ವರ್ಷ ಆಗಿದೆ. ಇಂತಹ ಸಂದರ್ಭದಲ್ಲಿ ಹುಲಿಗಳ ಸಂತತಿ ಹೆಚ್ಚಾಗುತ್ತಿರುವುದು ನಮಗೆಲ್ಲರಿಗೂ ಗೌರವದ ವಿಚಾರವಾಗಿದೆ. ಹೀಗಾಗಿ ನಾವೆಲ್ಲ ಎದ್ದು ನಿಂತು ಹುಲಿಗಳಿಗೆ ಗೌರವ ಸಲ್ಲಿಸೋಣ ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತದಲ್ಲಿ ಹುಲಿಗಳ ಸಂಖ್ಯೆ ಏರಿಕೆ
ಹುಲಿ ಯೋಜನೆ ಭಾರತಕಷ್ಟೇ ಅಲ್ಲ, ಇಡೀ ಜಗತ್ತಿಗೆ ಬೇಕಿದೆ. ವಿಶ್ವದ ಶೇ. 75 ರಷ್ಟು ಹುಲಿಗಳ ಸಂಖ್ಯೆ ಭಾರತದಲ್ಲಿದೆ. 75 ಚದರ ಕಿ.ಮೀ ಹುಲಿ ಸಂರಕ್ಷಣೆಯ ಪ್ರದೇಶವಿದೆ. ವಿಶ್ವದ ಹಲವೆಡೆ ಹುಲಿಗಳ ಸಂಖ್ಯೆ ಸ್ಥಿರವಾಗಿದೆ ಮತ್ತು ಇಳಿಯುತ್ತಿದೆ. ಆದರೆ, ಭಾರತದಲ್ಲಿ ಮಾತ್ರ ಹುಲಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದರು.
ಪರಂಪರೆಯ ಒಂದು ಭಾಗ
ಪರಿಸರಕ್ಕೆ ಸಂಬಂಧಿಸಿದಂತೆ ಭಾರತದ ಪರಂಪರೆಯಲ್ಲಿ ಗೌರವ ಇದೆ. ಈ ಕಾರಣಕ್ಕಾಗಿ ಹುಲಿಗಳ ಸಂಖ್ಯೆ ನಮ್ಮಲ್ಲಿ ಹೆಚ್ಚುತ್ತಿದೆ. ಹಲವು ಸಮುದಾಯಗಳಲ್ಲಿ ಹುಲಿಗಳನ್ನು ಬಂಧು ಎಂದು ಭಾವಿಸಲಾಗುತ್ತದೆ. ಭಾರತದಲ್ಲಿ ಪರಿಸರ ಸಂರಕ್ಷಣೆ ಮಾಡುವುದು ನಮ್ಮ ಪರಂಪರೆಯ ಒಂದು ಭಾಗವಾಗಿದೆ. ಜಾಗತಿಕ ಪರಿಸರ ವೈವಿಧ್ಯತೆಗೆ ಭಾರತದ ಕೊಡುಗೆ ಶೇ. 8ರಷ್ಟಿದೆ. ಹುಲಿಗಳ ಸಂರಕ್ಷಣೆಗೆ ವಿವಿಧ ದೇಶಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಭಾರತದಲ್ಲಿ 30 ಸಾವಿರಕ್ಕೂ ಅಧಿಕ ಆನೆಗಳಿವೆ ಎಂದು ತಿಳಿಸಿದರು.
ಭಾರತದ ಜೀವ ವೈವಿಧ್ಯಕ್ಕೆ ಶುಭ ಸುದ್ದಿ
ನಾನು ಗುಜರಾತ್ ಸಿಎಂ ಆಗಿದ್ದಾಗ ಸಿಂಹಗಳ ರಕ್ಷಣೆಗೆ ಕೆಲಸ ಮಾಡಿದ್ದೆ. ಮನುಷ್ಯ-ಪ್ರಾಣಿಗಳ ನುಡವೆ ಭಾವನಾತ್ಮಕ ಸಂಬಂಧ ಬೆಳೆಸಬೇಕು. ಗುಜರಾತ್ನಲ್ಲಿ ನಾನು ವನ್ಯಮಿತ್ರ ಕಾರ್ಯಕ್ರಮ ಜಾರಿಗೊಳಿಸಿದ್ದೆ. ಗಿರ್ ಕಾಡಿನಲ್ಲಿ ಸಿಂಹಗಳ ಪುನರ್ವಸತಿ ಕೇಂದ್ರ ಆರಂಭಿಸಿದ್ದೆ. ಇದೀಗ ಭಾರತದ ಜೀವವೈವಿಧ್ಯ ವೃದ್ಧಿಗೆ ಚೀತಾಗಳನ್ನು ಕರೆತಂದಿದ್ದೇವೆ. ಕುನೋ ರಾಷ್ಟ್ರೀಯ ಉದ್ಯಾನದಲ್ಲಿ 4 ಚೀತಾ ಮರಿಗಳು ಹುಟ್ಟಿವೆ. ಇದು ಭಾರತದ ಜೀವ ವೈವಿಧ್ಯಕ್ಕೆ ತುಂಬಾ ಶುಭ ಸುದ್ದಿ ಎಂದರು.
ಹುಲಿ ಗಣತಿ ಬಿಡುಗಡೆ
ಕಾರ್ಯಕ್ರಮದಲ್ಲಿ ಮಾತನಾಡುವುದಕ್ಕೂ ಮುನ್ನ ಪ್ರಧಾನಿ ಮೋದಿ 2022ನೇ ಸಾಲಿನ ಹುಲಿ ಗಣತಿಯನ್ನು ಬಿಡುಗಡೆ ಮಾಡಿದರು. ಇದರ ಪ್ರಕಾರ ಭಾರತದಲ್ಲಿ 3,167 ಹುಲಿಗಳಿವೆ. 2006ರಲ್ಲಿ ದೇಶದಲ್ಲಿ ಹುಲಿಗಳ ಸಂಖ್ಯೆ 1,411 ಇತ್ತು. 2010ರಲ್ಲಿ 1,706, 2014ರಲ್ಲಿ 2,226 ಮತ್ತು 2018ರಲ್ಲಿ 2,967 ಹುಲಿಗಳಿದ್ದವು. ವರದಿಯ ಪ್ರಕಾರ ಹುಲಿಗಳ ಸಂಖ್ಯೆಯಲ್ಲಿ ನಿರಂತರವಾಗಿ ಏರಿಕೆ ಕಂಡಿದೆ.
ಐಬಿಸಿಎ ಯೋಜನೆಗೆ ಚಾಲನೆ
ಹುಲಿ ಯೋಜನೆ 50 ವರ್ಷ ಪೂರೈಸಿದಕ್ಕೆ ಸ್ಮರಣಾರ್ಥವಾಗಿ ಪ್ರಧಾನಿ ಮೋದಿ ನಾಣ್ಯವನ್ನು ಬಿಡುಗಡೆ ಮಾಡಿದರು. ಇದರ ಜೊತೆಗೆ ಪ್ರಧಾನಿ ಮೋದಿ ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ಸ್ ಅಲಯನ್ಸ್ (ಐಬಿಸಿಎ) ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆ ಮೂಲಕ ಪ್ರಪಂಚದ ಏಳು ಪ್ರಮುಖ ದೊಡ್ಡ ಬೆಕ್ಕುಗಳ ರಕ್ಷಣೆ ಮತ್ತು ಸಂರಕ್ಷಣೆಯ ಮೇಲೆ ಸರ್ಕಾರ ಕೇಂದ್ರೀಕರಿಸುತ್ತದೆ. ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಪೂಮಾ, ಜಾಗ್ವಾರ್ ಹಾಗೂ ಚಿರತೆಗಳ ರಕ್ಷಣೆಯನ್ನು ಈ ಯೋಜನೆ ಒಳಗೊಂಡಿರುತ್ತದೆ. ಈ ಜಾಗತಿಕ ಮೈತ್ರಿಯ ಮೂಲಕ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಏಷ್ಯಾದಲ್ಲಿ ಕಳ್ಳಬೇಟೆ, ಅಕ್ರಮ ವನ್ಯಜೀವಿ ವ್ಯಾಪಾರವನ್ನು ನಿಗ್ರಹಿಸಲು ಯೋಜಿಸಿದೆ. (ಏಜೆನ್ಸೀಸ್)