ಸ್ಫೂರ್ತಿ ತುಂಬುವ ಸಂಕಲ್ಪ ದಿನ | ಮೋದಿ@71

Bommai Modi
Published on

ದಕ್ಷ ಆಡಳಿತಗಾರ, ಸಮರ್ಥ ನಾಯಕ, ಸ್ಪಂದನಶೀಲ ಪ್ರಧಾನಿಯಾಗಿ ಗಮನ ಸೆಳೆದಿರುವ ನರೇಂದ್ರ ದಾಮೋದರ ದಾಸ್ ಮೋದಿ ಅವರದ್ದು ವಿಶಿಷ್ಟ ವ್ಯಕ್ತಿತ್ವ. ಸವಾಲುಗಳನ್ನು ಪರಿಹರಿಸುವ ಬಗೆಯೂ ಅನನ್ಯ. ದಣಿವರಿಯದೆ ದಿನಕ್ಕೆ 18 ಗಂಟೆ ಕೆಲಸ ಮಾಡುವ ಮೋದಿ ಸದಾ ಕ್ರಿಯಾಶೀಲ. ಇಂದು (ಸೆ.17) ಅವರ 71ನೇ ಜನ್ಮದಿನದ ನಿಮಿತ್ತ ನಮೋ ಬದುಕಿನ ಹಾದಿ ಮತ್ತು ಅವರ ಸಾಧನೆಗಳ ಅವಲೋಕನವನ್ನು ಗಣ್ಯರ ಲೇಖನದ ಮೂಲಕ ‘ವಿಜಯವಾಣಿ’ ಇಲ್ಲಿ ಕಟ್ಟಿಕೊಟ್ಟಿದೆ.

| ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ನರೇಂದ್ರ ಮೋದಿ ಅವರು ಜನರಿಂದ ಆಯ್ಕೆಯಾಗಿರುವ ವಿಭಿನ್ನ ನಾಯಕ. ದೇಶ ಕಂಡ ಅತ್ಯುತ್ತಮ ಪ್ರಧಾನಿ. ಅವರ ದಿಟ್ಟ ನಿರ್ಧಾರಗಳು, ಅಭಿವೃದ್ಧಿ ಯೋಜನೆಗಳು ಹಾಗೂ ತಂತ್ರಜ್ಞಾನದ ಬಗೆಗಿನ ಒಲವು ಅವರನ್ನು ವಿಶಿಷ್ಟ ನಾಯಕನನ್ನಾಗಿಸಿವೆ. ಸ್ಪಷ್ಟ ವಿಚಾರಗಳು, ದಿಟ್ಟ ನಿಲುವು, ದಕ್ಷ ಆಡಳಿತ ಅವರ ಹೆಗ್ಗುರುತು.

ಹಲವಾರು ವರ್ಷ ಸಂಘಟನೆಯಲ್ಲಿ ಕೆಲಸ ಮಾಡಿ ಅದರ ಅನುಭವದಿಂದ ದೇಶ ಹಾಗೂ ವಿದೇಶಗಳಲ್ಲಿನ ಪ್ರಜಾಪ್ರಭುತ್ವದ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿದವರು ಮೋದಿಜಿ. ಅವರೊಬ್ಬ ಸೂಕ್ಷ್ಮ ಮನಸ್ಸಿನ ಜೀವಿ. ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರ ಆಡಳಿತದ ಬಗ್ಗೆ ಅನೇಕ ಪ್ರಶ್ನೆಗಳು ಎದ್ದಿದ್ದವು. ಆದರೆ ಎಲ್ಲರೂ ಹುಬ್ಬೇರಿಸುವಂತೆ ಕೆಲಸ ಮಾಡಿದರು. ಗುಜರಾತಿನಲ್ಲಿ ಅವರು ಮಾಡಿದ ವೈಚಾರಿಕ, ಸಾಮಾಜಿಕ ಹಾಗೂ ಅಭಿವೃದ್ಧಿಯ ಕ್ರಾಂತಿ ದೇಶಕ್ಕೇ ಮಾದರಿಯಾಗಿವೆ. ಅಹಮದಾಬಾದಿನಲ್ಲಿ ಸಾಬರಮತಿ ನದಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ್ದಾರೆ. ಮರಳುಗಾಡಿನಿಂದ ಹಿಡಿದು 400 ಕಿ.ಮೀ ದೂರದಲ್ಲಿರುವ ಹಳ್ಳಿಗಳಿಗೂ ಕುಡಿಯುವ ನೀರು ಪೂರೈಕೆ, ಅಧಿಕ ವಿದ್ಯುತ್ ಉತ್ಪಾದನೆ ಜತೆಗೆ ಕೃಷಿ ವಲಯದಲ್ಲಿ ಅಪಾರ ಸಾಧನೆಗೆ ಮುನ್ನುಡಿ ಬರೆದಿದ್ದಾರೆ. ಸಾಂಸ್ಕೃತಿಕವಾಗಿಯೂ ಕೆಲಸ ಮಾಡಿದ್ದಾರೆ. ಕಾಡುವಾಸಿಗಳಿಗೆ ಶಿಕ್ಷಣ, ಆರೋಗ್ಯ ದೊರಕಿಸುವುದನ್ನು ಸಾಧ್ಯವಾಗಿಸಿದ್ದಾರೆ. ಅಲ್ಪಸಂಖ್ಯಾತರ ಹೆಣ್ಣುಮಕ್ಕಳಿಗೆ ಸೌಲಭ್ಯ ನೀಡುವ ವಿಶೇಷ ಯೋಜನೆ ರೂಪಿಸಿದ್ದಲ್ಲದೆ, ಪ್ರವಾಸೋದ್ಯಮವನ್ನು ಉತ್ತಮಪಡಿಸಿದ್ದಾರೆ.

ಎಲ್ಲರಿಗೂ ಆಹಾರ, ಆಶ್ರಯ, ಆರೋಗ್ಯ, ಅಕ್ಷರ: ಭಾರತದ ಪ್ರಧಾನಮಂತ್ರಿಯಾಗಿ ಮೋದಿಜಿ ಅಭಿವೃದ್ಧಿಯಲ್ಲಿ ಸಂಚಲನ ಮೂಡಿಸಿದ್ದಾರೆ. ಭಾರತಕ್ಕೆ ಸುಸ್ಥಿರವಾದ ಆರ್ಥಿಕ ಭದ್ರತೆಗೆ ಅಡಿಪಾಯ ಹಾಕಿ, ಹಲವಾರು ಸುಧಾರಣೆಗಳನ್ನು ತಂದಿದ್ದಾರೆ. ಸ್ವಚ್ಛ ಭಾರತದಿಂದ ಹಿಡಿದು, ವಿದ್ಯುದೀಕರಣ, ರೈತರ ಆದಾಯ ದ್ವಿಗುಣಗೊಳಿಸುವುದು, ಕೃಷಿ ಕಾಯ್ದೆಯ ಸುಧಾರಣೆ, ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ, ರೈತ ಸಮ್ಮಾನ ನಿಧಿ, ಆಯುಷ್ಮಾನ್ ಭಾರತ್ ಯೋಜನೆಗಳು ಅವರ ಬಹು ದೊಡ್ಡ ಕೊಡುಗೆಗಳು. ಈ ಯೋಜನೆಗಳಿಂದ 50 ಕೋಟಿ ಜನ ಸೌಲಭ್ಯ ಪಡೆಯುತ್ತಿದ್ದಾರೆ.

ನೂತನ ಶಿಕ್ಷಣ ನೀತಿ, ಮಹಿಳಾ ಸಬಲೀಕರಣ, ಸ್ಮಾರ್ಟ್ ಸಿಟಿ, ಸಾಗರಮಾಲಾ ಯೋಜನೆ, ಮೂಲಸೌಕರ್ಯ ಅಭಿವೃದ್ಧಿ, ಬೇಟಿ ಬಚಾವೊ ಬೇಟಿ ಪಢಾವೊ, ಪಿಎಂ ಆವಾಸ್ ಯೋಜನೆಗಳು ಅವರ ದೂರದೃಷ್ಟಿಯ ಫಲ. ಎಲ್ಲರಿಗೂ ಆಹಾರ, ಆಶ್ರಯ, ಆರೋಗ್ಯ ಮತ್ತು ಅಕ್ಷರ ದೊರಕಿಸಲು ಯಶಸ್ವಿ ಯೋಜನೆಗಳನ್ನು ರೂಪಿಸಿದ್ದಾರೆ. ಜನ್ ಧನ್ ಯೋಜನೆಯಡಿ 42 ಕೋಟಿಗೂ ಅಧಿಕ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆಗೆ ಇದು ಬುನಾದಿಯಾಗಿದೆ. ಬಹುತೇಕ ಎಲ್ಲಾ ರಾಜ್ಯಗಳ ಸಹಾಯಧನ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ನೇರವಾಗಿ ತಲುಪುತ್ತಿವೆ.

ಕೋವಿಡ್ 19 ನಿರ್ವಹಣೆ: ಕರೊನಾ ಸಾಂಕ್ರಾಮಿಕದ 1 ಮತ್ತು 2 ನೇ ಅಲೆಯನ್ನು ನಾವು ಯಶಸ್ವಿಯಾಗಿ ನಿಭಾಯಿಸಿದ್ದೇವೆ. ಅದಕ್ಕೆ ಕಾರಣ ನಮ್ಮ ನೆಚ್ಚಿನ ಪ್ರಧಾನಿಗಳು ನಮ್ಮನ್ನೆಲ್ಲಾ ಹುರಿದುಂಬಿಸಿ ಪ್ರೋತ್ಸಾಹಿಸಿದ ರೀತಿ. ಪ್ರಾರಂಭದಿಂದಲೂ ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ದೇಶವಾಸಿಗಳೊಂದಿಗೆ ಮಾತನಾಡಿದ ಅವರು, ವಿಶ್ವದೆಲ್ಲೆಡೆಯಿಂದ ಭಾರತಕ್ಕೆ ವೈದ್ಯಕೀಯ ಉಪಕರಣಗಳ ನೆರವು ಹರಿದುಬರುವಂತೆ ಮಾಡಿದರು. ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ರಾಜ್ಯಗಳಿಗೆ ಅಗತ್ಯ ನೆರವು ನೀಡಿದರು. ದೇಶದಲ್ಲಿಯೇ ಲಸಿಕೆ ತಯಾರಿಕೆಗೆ ಪ್ರೋತ್ಸಾಹ ನೀಡಿದರು. ಇಂದು ವಿಶ್ವದ ದೊಡ್ಡ ದೇಶಗಳಿಗಿಂತಲೂ ಅತಿ ವೇಗದಲ್ಲಿ ಲಸಿಕಾ ಕಾರ್ಯ ಕೈಗೊಂಡ ಹೆಗ್ಗಳಿಕೆಗೆ ಭಾರತ ಪಾತ್ರವಾಗುವಂತೆ ಮಾಡಿದ್ದಾರೆ.

ಭವ್ಯ ಭಾರತದ ಚಿಂತನೆ: ಮೋದಿಯವರ ಭವ್ಯ ಭಾರತ, ನವಭಾರತದ ಚಿಂತನೆ ನಮ್ಮೆಲ್ಲರಿಗೂ ಮಾದರಿ. ಭಾರತ ವಿಶ್ವಗುರು ಆಗಬೇಕು ಎಂಬ ಮಹದಾಶಯ ಹೊತ್ತು, ದೇಶವನ್ನು ಒಗ್ಗೂಡಿಸುತ್ತಾ ಮತ್ತು ಬಲಿಷ್ಠಗೊಳಿಸುವತ್ತ ಮುನ್ನಡೆಸುತ್ತಿದ್ದಾರೆ. ವಿಶ್ವದಲ್ಲಿಯೇ ದೊಡ್ಡ ಸ್ಥಾನವನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ. ಪ್ರತಿಯೊಬ್ಬ ಭಾರತೀಯನೂ ದೇಶಭಕ್ತಿ ಹೊಂದಿರಬೇಕು, ದೇಶಕಟ್ಟಲು ಶ್ರಮಿಸಬೇಕು ಎನ್ನುವ ತುಡಿತವನ್ನು ಹುಟ್ಟುಹಾಕಿದ್ದಾರೆ. ಹೊಸ ಆಕಾಂಕ್ಷೆಗಳೊಂದಿಗೆ ಗುರಿಯತ್ತ ಮುನ್ನುಗ್ಗುತ್ತಿದ್ದಾರೆ. ಅವರಿಗೆ ನಾವೆಲ್ಲರೂ ಜೊತೆಯಾಗಿದ್ದೇವೆ.

ನವಭಾರತಕ್ಕೆ ನವಕರ್ನಾಟಕ: ನವಭಾರತ ನಿರ್ವಣದ ಮೋದಿಯವರ ಕನಸಿಗೆ ಕರ್ನಾಟಕವೂ ಕೊಡುಗೆ ನೀಡುವತ್ತ ದಾಪುಗಾಲು ಹಾಕಿದೆ. ಸ್ವಾತಂತ್ರೊ್ಯೕತ್ಸವದ ಅಮೃತ ಮಹೋತ್ಸವದ ಅಂಗವಾಗಿ ಹೊಸ ಯೋಜನೆಗಳನ್ನು ಘೊಷಿಸಲಾಗಿದೆ. ಅಮೃತ ಗ್ರಾಮ ಪಂಚಾಯತಿ, ಅಮೃತ ಗ್ರಾಮೀಣ ವಸತಿ ಯೋಜನೆ, ರೈತ ಉತ್ಪಾದಕ ಸಂಸ್ಥೆಗಳು, ಅಮೃತ ಶಾಲಾ ಸೌಲಭ್ಯ ಯೋಜನೆ, ಸ್ವಸಹಾಯ ಕಿರು ಉದ್ದಿಮೆಗಳು, ಅಮೃತ ಸಮುದಾಯ ಅಭಿವೃದ್ಧಿ ಯೋಜನೆ, ಆರೋಗ್ಯ ಮೂಲಸೌಕರ್ಯ ಉನ್ನತೀಕರಣ ಯೋಜನೆ, ಕೌಶಲ ತರಬೇತಿ ಯೋಜನೆ, ಅಮೃತ ಕ್ರೀಡಾ ದತ್ತು ಯೋಜನೆ, ನಿರ್ಮಲ ನಗರ ಯೋಜನೆಗಳನ್ನು ಘೊಷಿಸಲಾಗಿದೆ. ನವಭಾರತ ನಿರ್ವಣಕ್ಕೆ ನವಕರ್ನಾಟಕ ತನ್ನ ಕೊಡುಗೆ ನೀಡಲು ಸನ್ನದ್ಧವಾಗಿದೆ.

ಸ್ಪೂರ್ತಿಯ ಸೆಲೆ: ಖುದ್ದು ಸ್ಪೂರ್ತಿಯ ಚಿಲುಮೆಯಂತಿರುವ ನರೇಂದ್ರ ಮೋದಿಯವರ ಕ್ರಿಯಾಶೀಲತೆ, ಪ್ರಾಮಾಣಿಕತೆ, ಶಿಸ್ತು, ಆಡಳಿತದಲ್ಲಿ ದಕ್ಷತೆ, ಕಠಿಣ ಪರಿಶ್ರಮ, ದೂರದೃಷ್ಟಿ ನಮ್ಮನ್ನು ಇನ್ನಷ್ಟು ಸಾಧಿಸಲು ಪ್ರೇರೇಪಿಸುತ್ತದೆ. ಅವರ ಈ ಎಲ್ಲಾ ಗುಣಗಳು ಭಾರತಕ್ಕೆ ಹೊಸ ದಿಕ್ಸೂಚಿಯಾಗಬಲ್ಲವು. ದೇಶದ ಅಭಿವೃದ್ಧಿಗೆಂದು ತಮ್ಮನ್ನು ಸಮರ್ಪಿಸಿಕೊಂಡಿರುವ ಧೀಮಂತ ವ್ಯಕ್ತಿತ್ವದ ಅಪರೂಪದ ರಾಜಕಾರಣಿ. 75ರ ಹರೆಯಕ್ಕೆ ಕಾಲಿಟ್ಟಿರುವ ಭಾರತ ನವೋಲ್ಲಾಸದಿಂದ ಪುಟಿದೇಳುತ್ತಿದೆ. ಅವರ ಸಮರ್ಥ ನಾಯಕತ್ವದಲ್ಲಿ ಭಾರತವು ಸವಾಲುಗಳ ನಡುವೆಯೂ ಅವಕಾಶಗಳನ್ನು ಗುರುತಿಸಿ ಮುನ್ನಡೆ ಸಾಧಿಸ ಹೊರಟಿದೆ. ನರೇಂದ್ರ ಮೋದಿಯವರ ಜನ್ಮದಿನ ಭಾರತೀಯರಿಗೆ ಸ್ಪೂರ್ತಿ ತುಂಬುವ ಸಂಕಲ್ಪದ ದಿನ ಎಂದು ನಾನು ಭಾವಿಸಿದ್ದೇನೆ. ನರೇಂದ್ರ ಮೋದಿಜಿ ಅವರಿಗೆ ಜನುಮದಿನದ ಶುಭಾಶಯಗಳು!

ಆಂತರಿಕ ಮತ್ತು ಬಾಹ್ಯ ಭದ್ರತೆ: ಭಾರತದ ಆಂತರಿಕ ಹಾಗೂ ಬಾಹ್ಯ ಭದ್ರತೆಗೆ ಮೋದಿ ಆದ್ಯತೆ ನೀಡಿದ್ದಾರೆ. ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತ ಯೋಜನೆ ಮೂಲಕ ಸ್ವದೇಶಿ ರಕ್ಷಣಾ ಉತ್ಪಾದನೆ ಹೆಚ್ಚಳ, ಹೊಸ ತಂತ್ರಜ್ಞಾನದ ಅಳವಡಿಕೆಗೆ ಒತ್ತು ನೀಡಿದ್ದಾರೆ. ರಕ್ಷಣಾ ಕ್ಷೇತ್ರದ ಬಲವರ್ಧನೆಗೆ ನಿರ್ದಿಷ್ಟ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net