

ಬೆಂಗಳೂರು: ಇನ್ನೊಂದು ದಿನ ಕಳೆದರೆ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಜನ್ಮದಿನ. ಅವರು ಮರೆಯಾಗಿ ದಶಕವೇ ಕಳೆದಿದ್ದರೂ ಸಿನಿಪ್ರಿಯರಿಗೆ ಅವರ ಕುರಿತ ಅಭಿಮಾನ ಮರೆಯಾಗುವಂಥದ್ದಲ್ಲ, ಮಸುಕಾಗುವಂಥದ್ದೂ ಅಲ್ಲ. ಅಂಥ ಒಂದು ಅಭಿಮಾನ ಇದೀಗ ಒಡಿಶಾದ ಸಮುದ್ರ ತೀರದಲ್ಲೂ ಕಂಡುಬಂದಿದೆ.
ಒಡಿಶಾದ ಪುರಿಯ ಮರೈನ್ ಡ್ರೈವ್ ಬೀಚ್ನಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಕಲಾಕೃತಿ ಮೂಡುವ ಮೂಲಕ ಅಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಕಲಾವಿದರೊಬ್ಬರ ಮರಳು ಶಿಲ್ಪ ಅರಳಿದಂತಾಗಿದೆ. ಸೆಪ್ಟೆಂಬರ್ 18ರಂದು ಡಾ.ವಿಷ್ಣುವರ್ಧನ್ ಅವರ 71ನೇ ಜನ್ಮದಿನವಾಗಿದ್ದು, ಆ ಪ್ರಯುಕ್ತ ಮರಳುಶಿಲ್ಪ ಕಲೆಯ ತವರೂರಾದ ಒಡಿಶಾದಲ್ಲಿ ವಿಷ್ಣುವರ್ಧನ್ ಅವರ 6 ಅಡಿ ಎತ್ತರ ಮತ್ತು 15 ಅಡಿ ಅಗಲದ ಮರಳು ಶಿಲ್ಪ ಅರಳಿದೆ.
ಹೆಸರಾಂತ ಶಿಲ್ಪಿ ಮನೀಶ್ ಕುಮಾರ್ ಅವರು, ಅಪಾರ ಶ್ರಮ ಹಾಗೂ ಸಮಯ ವಿನಿಯೋಗಿಸಿ ಈ ಶಿಲ್ಪವನ್ನು ರಚಿಸಿದ್ದಾರೆ. ಅದಕ್ಕೆ ಅಗತ್ಯವಾದ ಹಣಕಾಸು ವ್ಯವಸ್ಥೆಯನ್ನು ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ ಅವರು ಒದಗಿಸಿದ್ದಾರೆ.