

ನವದೆಹಲಿ: ಸದ್ಯದಲ್ಲೇ ಮೇಲಿಂದ ಮೇಲೆ ಮತ್ತಷ್ಟು ಹಬ್ಬಗಳು ಬರಲಿದ್ದು, ಜನರು ಅವುಗಳನ್ನು ಆಚರಿಸಲು ಉತ್ಸುಕರಾಗಿದ್ದಾರೆ. ಮತ್ತೊಂದೆಡೆ ಕರೊನಾ ಮೂರನೇ ಅಲೆಯ ಆತಂಕವೂ ಕಾಡುತ್ತಿದೆ. ಈ ನಡುವೆಯೇ ಎಚ್ಚರಿಕೆಯ ಸಂದೇಶವೊಂದು ಹೊರಬಿದ್ದಿದೆ. ಇನ್ನು ಮೂರು ತಿಂಗಳ ಕಾಲ, ಅದರಲ್ಲೂ ಇನ್ನೆರಡು ತಿಂಗಳಂತೂ ಸಾರ್ವಜನಿಕರು ಬಹಳ ಹುಷಾರಾಗಿರಬೇಕು ಎಂಬ ಎಚ್ಚರಿಕೆಯೊಂದು ಹೊರಬಿದ್ದಿದೆ.
ಕೇಂದ್ರ ನೀತಿ ಆಯೋಗ (ಆರೋಗ್ಯ) ಸದಸ್ಯ ಡಾ.ವಿ.ಕೆ. ಪೌಲ್ ಅವರು ಇಂಥದ್ದೊಂದು ಎಚ್ಚರಿಕೆಯನ್ನು ಕಿವಿಮಾತಿನ ರೀತಿಯಲ್ಲಿ ಹೇಳಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಸುದ್ದಿಗೋಷ್ಠಿ ಸಂದರ್ಭದಲ್ಲಿ ಕೋವಿಡ್ ಪರಿಸ್ಥಿತಿ ಕುರಿತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುತ್ತ ಅವರು ಈ ಮಾತನ್ನು ತಿಳಿಸಿದರು.
ಬರುವ ಮೂರು ತಿಂಗಳಲ್ಲಿ ಕೋವಿಡ್ ಪರಿಸ್ಥಿತಿ ಉಲ್ಬಣಿಸಲು ಬಿಡುವಂತಿಲ್ಲ. ಏಕೆಂದರೆ ಮುಂದಿನ ಮೂರು ತಿಂಗಳಗಳು ಹಬ್ಬ ಹಾಗೂ ಫ್ಲ್ಯೂ ಸೀಸನ್. ಈ ತಿಂಗಳಲ್ಲಿ ಕರೊನಾ ಪ್ರಕರಣಗಳು ಹೆಚ್ಚುವ ಸಾಧ್ಯತೆಗಳು ಅಧಿಕವಾಗಿವೆ. ಹೀಗಾಗಿ ಜನರು ಈ ಮೂರು ತಿಂಗಳಲ್ಲಿ ಅದರಲ್ಲೂ ಅಕ್ಟೋಬರ್-ನವೆಂಬರ್ನಲ್ಲಿ ಬಹಳ ಹುಷಾರಾಗಿರಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಜನರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಜತೆಗೆ ಹಬ್ಬವನ್ನು ಆದಷ್ಟೂ ಸರಳವಾಗಿ ಆಚರಿಸಬೇಕು ಎಂಬ ಕಿವಿಮಾತನ್ನೂ ಅವರು ಹೇಳಿದ್ದಾರೆ. (ಏಜೆನ್ಸೀಸ್)